THE FEDERAL EXCLUSIVE | ಪಬ್ಲಿಕ್‌ ಪರೀಕ್ಷೆ ಮೌಲ್ಯಮಾಪನ ಅವಾಂತರ: 28 ಲಕ್ಷ ಮಕ್ಕಳ ಫಲಿತಾಂಶ ಅಯೋಮಯ!
x

THE FEDERAL EXCLUSIVE | ಪಬ್ಲಿಕ್‌ ಪರೀಕ್ಷೆ ಮೌಲ್ಯಮಾಪನ ಅವಾಂತರ: 28 ಲಕ್ಷ ಮಕ್ಕಳ ಫಲಿತಾಂಶ ಅಯೋಮಯ!

ಮೌಲ್ಯಮಾಪನ ಅವಾಂತರಗಳ ಹಿನ್ನೆಲೆಯಲ್ಲಿ 5, 8 ಮತ್ತು 9ನೇ ತರಗತಿಯ ಫಲಿತಾಂಶ ವಿಳಂಬವಾಗುವ ಸಾಧ್ಯತೆಗಳಿವೆ. ವಿಳಂಬವಿಲ್ಲದೆ ನಿಗದಿತ ದಿನಾಂಕದಂದೇ ಫಲಿತಾಂಶ ಕೊಡಲು ಇಲಾಖೆ ಮುಂದಾದರೆ ಈ ಅವಾಂತರಗಳು ಪರೀಕ್ಷೆ ಬರೆದು ಫಲಿತಾಂಶ ಎದುರುನೋಡುತ್ತಿರುವ ಬರೋಬ್ಬರಿ 28 ಲಕ್ಷ ಮಕ್ಕಳ ಫಲಿತಾಂಶವನ್ನೇ ಅಸ್ತವ್ಯಸ್ಥಗೊಳಿಸುವ ಸಾಧ್ಯತೆ ಹೆಚ್ಚಿದೆ.


ಹಲವು ಗೊಂದಲ, ಅನಿಶ್ಚಿತತೆ ನಡುವೆ ಪಬ್ಲಿಕ್ ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟು, ಫಲಿತಾಂಶಕ್ಕೆ ಕಾಯುತ್ತಿರುವ 5, 8 ಮತ್ತು 9 ನೇ ತರಗತಿ ಮಕ್ಕಳ ಪಾಲಿಗೆ ಆತಂಕಗಳು ದೂರವಾಗುವಂತೆ ಕಾಣಿಸುತ್ತಿಲ್ಲ.

ಪಬ್ಲಿಕ್ ಪರೀಕ್ಷೆ ಬೇಕೆ, ಬೇಡವೇ ಎಂಬ ಕುರಿತ ಪ್ರಕರಣ ಹೈಕೋರ್ಟ್, ಸುಪ್ರೀಂಕೋರ್ಟುಗಳ ನಡುವೆ ಅಲೆದಾಡಿ ಅಂತಿಮವಾಗಿ ಪರೀಕ್ಷೆ ನಡೆಸಲು ಅನುಮತಿ ಸಿಕ್ಕಿ, ರಾಜ್ಯ ಸರ್ಕಾರ ಪರೀಕ್ಷೆ ಮುಗಿಸುವ ಹೊತ್ತಿಗೆ ಮಾರ್ಚ್ ಅಂತ್ಯವಾಗಿತ್ತು. ಆದರೆ, ನಿಗದಿಯಂತೆ ಏ.10ಕ್ಕೆ ಈ ತರಗತಿಗಳ ಫಲಿತಾಂಶ ಪ್ರಕಟಿಸುವ ಧಾವಂತಕ್ಕೆ ಬಿದ್ದ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತರಾತುರಿಯಲ್ಲಿ ಪರೀಕ್ಷೆಯ ನಡುವೆಯೇ ಮೌಲ್ಯಮಾಪನ ಆರಂಭಿಸಿ ಉತ್ತರಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ವಾಪಸು ಕಳಿಸಿದೆ.

ಆದರೆ, ಮೌಲ್ಯಮಾಪನವಾಗಿರುವ ಉತ್ತರಪತ್ರಿಕೆಗಳು ಶಾಲೆಗಳಿಗೆ ಬಂದ ಬಳಿಕ ಅವುಗಳನ್ನು ಪರಿಶೀಲಿಸಿದ ಶಾಲಾ ಆಡಳಿತಗಳು ಬೆಚ್ಚಿಬಿದ್ದಿವೆ. ಕೆಲವು ಉತ್ತರಪತ್ರಿಕೆ ಬಂಡಲ್‌ಗಳು ಕಟ್ಟಿದ ದಾರ ಬಿಚ್ಚದೆ ಹಾಗೇ ಬಂದಿವೆ, ಮತ್ತೆ ಕೆಲವು ಬಂಡಲ್‌ಗಳಲ್ಲಿ ಒಂದಿಷ್ಟು ಪತ್ರಿಕೆ ಮೌಲ್ಯಮಾಪನವಾಗಿದ್ದರೆ, ಮತ್ತೊಂದಿಷ್ಟು ಹಾಗೇ ವಾಪಸ್ ಬಂದಿವೆ, ಉತ್ತರ ಪತ್ರಿಕೆಯ ಎಲ್ಲಾ ಉತ್ತರಗಳಿಗೆ ರೈಟ್ ಮಾರ್ಕ್ ಹಾಕಿ, ಮೌಲ್ಯಮಾಪಕರ ಸಹಿ ಮಾಡಿ ಅಂಕವನ್ನೇ ನೀಡದೆ ಹಾಗೇ ಕಳಿಸಿರುವ ಉದಾಹರಣೆಗಳೂ ಇವೆ, ನಂಬರ್ ಹಾಕಿದ್ದರೂ ಟೋಟಲಿಂಗ್ ಮಾಡದೆ ಕಳಿಸಿದ ಉತ್ತರಪತ್ರಿಕೆಗಳೂ ಇವೆ, ಉತ್ತರಗಳನ್ನು ನೋಡದೆ, ಮಾರ್ಕ್ ಮಾಡದೆ ಕೇವಲ ಒಟ್ಟು ಅಂಕ ಮಾತ್ರ ಹಾಕಿ ಕಳಿಸಿರುವ ಪತ್ರಿಕೆಗಳೂ ಇವೆ,.. ಹೀಗೆ ಉತ್ತರಪತ್ರಿಕೆಗಳ ಮೌಲ್ಯಮಾಪನದ ಅವಾಂತರಗಳನ್ನು ಬಿಚ್ಚಿಟ್ಟವರು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಸರ್ಕಾರ ಪರೀಕ್ಷೆಯನ್ನು ನಡೆಸುವುದೇ ಆದರೆ ಅರ್ಥಪೂರ್ಣವಾಗಿ ನಡೆಸಬೇಕಿತ್ತು. ಆದರೆ, ಪರೀಕ್ಷೆ ವಿಷಯದಲ್ಲಿ ಮಕ್ಕಳು, ಪೋಷಕರು, ಶಾಲಾ ಆಡಳಿತ ಮಂಡಳಿಗಳಿಗೆ ಇನ್ನಿಲ್ಲದ ರೋಧನೆ ನೀಡಿ, ಪರೀಕ್ಷೆ ನಡೆಸಿ ಈಗ ಅದರ ಮೌಲ್ಯಮಾಪನವನ್ನು ಮನಸೋ ಇಚ್ಛೆ ನಡೆಸಿದೆ. ಹೀಗೆ ಅವಾಂತರದ ಮೌಲ್ಯಮಾಪನ ಮಾಡುವುದಾದರೆ ಅಷ್ಟೊಂದು ಹಠಕ್ಕೆ ಬಿದ್ದು ಪರೀಕ್ಷೆ ನಡೆಸಿದ್ದಕ್ಕೆ ಏನು ಬೆಲೆ ಇದೆ? ಶಿಕ್ಷಣ ಇಲಾಖೆ ಕೂಡಲೇ ಆಗಿರುವ ಲೋಪವನ್ನು ಒಪ್ಪಿಕೊಂಡು, ಮರು ಮೌಲ್ಯಮಾಪನ ನಡೆಸಿ, ನಂತರವಷ್ಟೇ ಫಲಿತಾಂಶ ಪ್ರಕಟಿಸಬೇಕು ಎಂಬುದು ನಮ್ಮ ಆಡಳಿತ ಮಂಡಳಿಗಳ ನಿಲುವು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆಗಿರುವ ಅವಾಂತರ ಸರಿಪಡಿಸಲಿ” ಎಂದು ಹೇಳಿದರು.

ಮೌಲ್ಯಮಾಪನದ ಎಡವಟ್ಟುಗಳನ್ನು ವಿವರಿಸಿದ ಅವರು, “ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲಿ ಈ ಬಾರಿ ಯಡವಟ್ಟುಗಳೇ ತುಂಬಿವೆ. ಬಂಡಲ್‌ಗಳನ್ನು ಬಿಚ್ಚದೇ ಹಾಗೇ ಕಳಿಸಿದ ಉದಾಹರಣೆಗಳೂ ಇವೆ. ಜೊತೆಗೆ ಅರ್ಧ ಪತ್ರಿಕೆ ನೋಡಿ, ಇನ್ನರ್ಧ ಪತ್ರಿಕೆಯನ್ನು ಹಾಗೇ ಬಿಟ್ಟು ಟೋಟಲ್ ಅಂಕ ನೀಡಿ ಸಹಿ ಮಾಡಿ ಕಳಿಸಿದ್ಧೂ ಇದೆ. ಸರಿಯಾದ ಅಂಕ ಕೊಡದೆ ಕಾಟಾಚಾರಕ್ಕೆ ಚೆಕ್ ಮಾಡಿ, ಅಂಕ ಹಾಕಿದ್ದೂ ಇದೆ. ಅಂಕ ಕೊಟ್ಟಿದ್ದರೂ ಟೋಟಲ್ ಮಾಡುವಾಗ ತಪ್ಪಾಗಿ, ತಪ್ಪು ಟೋಟಲ್ ಹಾಕಿರುವುದೂ ಇದೆ. ಹೀಗೆ ಕಾಟಾಚಾರದ ಮೌಲ್ಯಮಾಪನ ಮಾಡುವುದರಿಂದ ಏನು ಸಾಧಿಸಿದಂತಾಯಿತು?” ಎಂದು ಪ್ರಶ್ನಿಸಿದರು.

“ಮೌಲ್ಯಮಾಪನದಲ್ಲಿ ಒಂದು ಏಕರೂಪತೆ ಎಂಬುದಿಲ್ಲ. ಕೆಲವು ಶಾಲೆಗಳಿಗೆ ಇನ್ನಾವುದೋ ಶಾಲೆಯ ಉತ್ತರಪತ್ರಿಕೆಗಳನ್ನು ರವಾನಿಸಲಾಗಿದೆ. ಇನ್ನು ಅಂಕಗಳನ್ನು ಅಪ್ ಲೋಡ್ ಮಾಡಬೇಕಾದ ಸ್ಯಾಟ್ಸ್ ತಂತ್ರಾಂಶವನ್ನು ಈ ಪಬ್ಲಿಕ್ ಪರೀಕ್ಷೆ ಅಂಕ ಜೋಡಿಸಲು ಅಪ್ ಗ್ರೇಡ್ ಮಾಡಿಲ್ಲ. ಈ ಪಬ್ಲಿಕ್ ಪರೀಕ್ಷೆಯ ಬಗ್ಗೆ ಕಳೆದ ವರ್ಷವೇ ಕೋರ್ಟ್ ನಿರ್ದಿಷ್ಟ ಸೂಚನೆಗಳನ್ನು ನೀಡಿತ್ತು. ಆದರೆ, ಶಿಕ್ಷಣ ಇಲಾಖೆ ಒಂದು ವರ್ಷವಿಡೀ ಕಾಲಾಹರಣ ಮಾಡಿ ಮಾರ್ಚ್ ಕೊನೆಯಲ್ಲಿ ಎಚ್ಚೆತ್ತುಕೊಂಡಿತು. ಆ ನಡುವೆ ಕೋರ್ಟ್ ಕಚೇರಿ ಅಲೆದಾಟವಾಯ್ತು. ಒಟ್ಟಾರೆ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈಗ ಮಕ್ಕಳು, ಶಾಲಾ ಆಡಳಿತ ಮಂಡಳಿಗಳು ಅನುಭವಿಸಬೇಕಾಗಿದೆ” ಎಂದು ಶಶಿಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.

“ಈ ಎಲ್ಲಾ ಅವಾಂತರಗಳನ್ನು ಇಲಾಖೆಯ ಆಯುಕ್ತರು, ಮೌಲ್ಯಾಂಕನ ವಿಭಾಗದ ನಿರ್ದೇಶಕರ ಗಮನಕ್ಕೆ ತರಲಾಗಿದೆ. ತಡವಾದರೂ ಪರವಾಗಿಲ್ಲ, ಸರಿಯಾದ ಮರು ಮೌಲ್ಯಮಾಪನ ಮಾಡಿಸಿ, ಮಕ್ಕಳಿಗೆ ನ್ಯಾಯ ಸಲ್ಲಿಸಿ ಎಂದು ಕೋರಿದ್ದೇವೆ. ಏನು ಮಾಡುತ್ತಾರೋ ನೋಡಬೇಕು. ಆದರೆ, ಏಪ್ರಿಲ್ 10ರ ಒಳಗೆ ಎಲ್ಲ ಸರಿಪಡಿಸಿ ಫಲಿತಾಂಶ ನೀಡುವುದು ಸಾಧ್ಯವಿಲ್ಲ. ಹಾಗೊಂದು ವೇಳೆ ಇಲಾಖೆ ಈ ವಿಷಯದಲ್ಲಿ ಅದೇ ಹಠಕ್ಕೆ ಬಿದ್ದು ಫಲಿತಾಂಶ ನೀಡಿದರೆ ಮಕ್ಕಳಿಗೆ ಅನ್ಯಾಯವಾಗುವುದು ಶತಸಿದ್ಧ” ಎಂದು ಅವರು ಖಡಾಖಂಡಿತವಾಗಿ ನುಡಿದರು.


ಮೌಲ್ಯಮಾಪನದ ಅವಾಂತರಗಳ ವಿರುದ್ಧ ಕ್ಯಾಮ್ಸ್ ದನಿ ಎತ್ತಿರುವ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ಅವರನ್ನು ಸಂಪರ್ಕಿಸಲು ಯತ್ನಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ಮೌಲ್ಯಮಾಪನದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಕುರಿತು ಸ್ವತಃ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಿದ್ದ ʼಹೆಸರು ಹೇಳಲಿಚ್ಛಿಸದʼ ಪ್ರೌಢಶಾಲಾ ಶಿಕ್ಷಕರೊಬ್ಬರನ್ನು ಮಾತನಾಡಿಸಿದಾಗ, "ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಇಂತಹ ಲೋಪಗಳು ಆಗಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ" ಎಂದು ಅವರು ಹೇಳಿದರು.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಈ ಬಾರಿ ಪಬ್ಲಿಕ್ ಪರೀಕ್ಷೆ ಮೌಲ್ಯಮಾಪನಕ್ಕೆ ಇಲಾಖೆ ಸರಿಯಾದ ತಯಾರಿ ಮಾಡಿಕೊಂಡೇ ಇರಲಿಲ್ಲ. ಕೊನೇ ಕ್ಷಣದಲ್ಲಿ ಒಂದು ಕಡೆ ಪರೀಕ್ಷೆ, ಮತ್ತೊಂದು ಕಡೆ ಮೌಲ್ಯಮಾಪನ ಮಾಡಿಸಲಾಯಿತು. ಜೊತೆಗೆ ಚುನಾವಣಾ ತರಬೇತಿ ಕೂಡ ಅದೇ ವೇಳೆ ಇತ್ತು. ಹಾಗಾಗಿ ಬಹಳಷ್ಟು ಮೌಲ್ಯಮಾಪಕರು ಕರ್ತವ್ಯಕ್ಕೆ ಬರಲಾಗಿರಲಿಲ್ಲ. ಜೊತೆಗೆ ಪ್ರತಿ ಮೌಲ್ಯಮಾಪಕರೂ ದಿನಕ್ಕೆ 80 ಉತ್ತರಪತ್ರಿಕೆ ಮೌಲ್ಯಮಾಪನ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಜೊತೆಗೆ ಈ ಬಾರಿ ಮೌಲ್ಯಮಾಪನಕ್ಕೆ ಭತ್ಯೆ ನೀಡಿಲ್ಲ. ಹಾಗಾಗಿ ಕೊನೇ ಕ್ಷಣದಲ್ಲಿ ಅನನುಭವಿ ಹೊಸ ಶಿಕ್ಷಕರು, ಖಾಸಗಿ ಶಾಲೆಗಳ ತರಬೇತಾಗದ ಶಿಕ್ಷಕರು, ಕೊನೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನೂ 8, 9 ನೇ ತರಗತಿ ಮೌಲ್ಯಮಾಪನಕ್ಕೆ ನೇಮಿಸಲಾಗಿತ್ತು. ಅದೂ ಅಲ್ಲದೆ, ಕೆಲವು ಕೇಂದ್ರಗಳಲ್ಲಿ ವಿಷಯ ಶಿಕ್ಷಕರು ಇಲ್ಲದೆ, ಭಾಷಾ ಶಿಕ್ಷಕರಿಂದ ವಿಜ್ಞಾನ, ಗಣಿತ ವಿಷಯಗಳ ಮೌಲ್ಯಮಾಪನ ಮಾಡಿಸಲಾಗಿದೆ. ಹಾಗೇ ಕನ್ನಡ ಶಿಕ್ಷಕರು ಇಂಗ್ಲಿಷ್ ಭಾಷಾ ಪತ್ರಿಕೆ ಮೌಲ್ಯ ಮಾಪನ ಮಾಡಿದ್ದನ್ನೂ ನಾವು ಕಂಡಿದ್ದೇವೆ” ಎಂದು ಆಘಾತಕಾರಿ ಸಂಗತಿಗಳನ್ನು ಬಯಲುಗೊಳಿಸಿದರು!

“ಅಷ್ಟೇ ಅಲ್ಲದೆ, ಕೆಲವು ಮೌಲ್ಯಮಾಪನ ಕೇಂದ್ರಗಳಲ್ಲಿ ಹಿಂದಿ, ಇಂಗ್ಲಿಷ್, ಗಣಿತದಂತಹ ಕಠಿಣ ವಿಷಯದ ಉತ್ತರಪತ್ರಿಕೆಗಳಿಗೆ ಅಂಕ ನಮೂದಿಸದೆ ಕೇವಲ ರೈಟ್ ಮಾರ್ಕ್ ಹಾಕಿ, ಮೌಲ್ಯ ಮಾಪಕರ ಸಹಿ ಮಾಡಿ ಬಂಡಲ್ ಮಾಡಲಾಗಿದೆ. ಆ ಮೂಲಕ ಆಯಾ ಶಾಲೆಯವರೇ ಅವರಿಗೆ ಬೇಕಾದಷ್ಟು ಅಂಕ ಕೊಟ್ಟುಕೊಳ್ಳಲು ಪರೋಕ್ಷ ಸೂಚನೆ ನೀಡಲಾಗಿದೆ. ಒಟ್ಟಾರೆ ಈ ಬಾರಿ ಮೌಲ್ಯಮಾಪನ ಎಂಬುದು ಒಂದು ರೀತಿಯಲ್ಲಿ ಕಾಟಾಚಾರದ ಆಚರಣೆಯಂತಾಗಿತ್ತು” ಎಂದೂ ಅವರು ವಾಸ್ತವಾಂಶ ವಿವರಿಸಿದರು.

"ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು" ಎಂಬ ಘೋಷವಾಕ್ಯವನ್ನು ಹೊಂದಿರುವ ರಾಜ್ಯ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಕ್ಕಳ ಶಿಕ್ಷಣ ಕಲಿಕೆಯ ಗುಣಮಟ್ಟ ಮಾಪನದ ಮಾನದಂಡವಾಗಿ ಪಬ್ಲಿಕ್‌ ಪರೀಕ್ಷೆಯನ್ನು ನಡೆಸುತ್ತಿರುವುದಾಗಿ ನ್ಯಾಯಾಲಯದಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆದರೆ, ಇದೀಗ ಅಂತಹ ಮಹತ್ವಾಕಾಂಕ್ಷೆಯ ಪರೀಕ್ಷೆ ನಡೆಸಿದ ಬಳಿಕ ಮೌಲ್ಯಮಾಪನದ ವಿಷಯದಲ್ಲಿ ಇಲಾಖೆ ಅವಾಂತರಗಳನ್ನೇ ಮೈಮೇಲೆ ಎಳೆದುಕೊಂಡಿದೆ ಎಂಬುದಕ್ಕೆ ಮೌಲ್ಯಮಾಪನದ ಕುರಿತು ಕೇಳಿಬರುತ್ತಿರುವ ಗಂಭೀರ ಆರೋಪಗಳೇ ಸಾಕ್ಷಿ. ಮೌಲ್ಯಮಾಪನದ ಎಡವಟ್ಟುಗಳಿಗೆ ಸಂಬಂಧಿಸಿದಂತೆ ʼದ ಫೆಡರಲ್‌ ಕರ್ನಾಟಕʼಕ್ಕೆ ಅರೆಬರೆ ಮೌಲ್ಯಮಾಪನವಾಗಿರುವ ಉತ್ತರಪತ್ರಿಕೆಗಳ ಪ್ರತಿಗಳೂ ಲಭ್ಯವಾಗಿವೆ(ಫೋಟೋ ಗಮನಿಸಿ). ಅಲ್ಲದೆ, ಮೌಲ್ಯಮಾಪನದ ಗಂಭೀರ ಲೋಪಗಳ ಕುರಿತ ವಿಡಿಯೋ ಇಲ್ಲಿದೆ.

ಒಟ್ಟಾರೆ, ಈ ಎಲ್ಲಾ ಅವಾಂತರಗಳ ಹಿನ್ನೆಲೆಯಲ್ಲಿ 5, 8 ಮತ್ತು 9ನೇ ತರಗತಿಯ ಫಲಿತಾಂಶ ವಿಳಂಬವಾಗುವ ಸಾಧ್ಯತೆಗಳಿವೆ. ವಿಳಂಬವಿಲ್ಲದೆ ನಿಗದಿತ ದಿನಾಂಕದಂದೇ ಫಲಿತಾಂಶ ಕೊಡಲು ಇಲಾಖೆ ಮುಂದಾದರೆ ಈ ಅವಾಂತರಗಳು ಪರೀಕ್ಷೆ ಬರೆದು ಫಲಿತಾಂಶ ಎದುರುನೋಡುತ್ತಿರುವ ಬರೋಬ್ಬರಿ 28 ಲಕ್ಷ ಮಕ್ಕಳ ಫಲಿತಾಂಶವನ್ನೇ ಅಸ್ತವ್ಯಸ್ಥಗೊಳಿಸುವ ಸಾಧ್ಯತೆ ಹೆಚ್ಚಿದೆ.

Read More
Next Story