
ಹೈಕೋರ್ಟ್ ಹಾಗೂ ಪಿಎಸ್‌ಐ ಹಗರಣದ ಆರೋಪಿ ಅಮೃತ್ ಪೌಲ್
ಹೈಕೋರ್ಟ್‌ನಲ್ಲಿ ಪಿಎಸ್‌ಐ ಹಗರಣದ ವಿಚಾರಣೆ| ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ಗೆ ಹಿನ್ನಡೆ
ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಇರಿಸಲಾಗಿದ್ದ ಅಲ್ಮೇರಾಗಳ ಕೀಗಳನ್ನು ನೀಡಿ ಅಕ್ರಮಕ್ಕೆ ಅನುವು ಮಾಡಿಕೊಡಲು ಪೌಲ್ ಅವರು ಐದು ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂದು ಗಂಭೀರ ಆರೋಪವಿದೆ.
ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಅಮಾನತಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಆರೋಪ ಪಟ್ಟಿ ಮತ್ತು ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ಈ ಮೂಲಕ ಪ್ರಕರಣದ ವಿಚಾರಣೆ ಮುಂದುವರೆಯಲು ಹಸಿರು ನಿಶಾನೆ ತೋರಿದೆ.
ತಮ್ಮ ವಿರುದ್ಧ ಸಿಐಡಿ ಪೊಲೀಸರು ಸಲ್ಲಿಸಿರುವ ಒಂದು ಪ್ರಾಥಮಿಕ ಮತ್ತು ಆರು ಹೆಚ್ಚುವರಿ ಆರೋಪ ಪಟ್ಟಿಗಳನ್ನು ರದ್ದುಪಡಿಸಬೇಕೆಂದು ಕೋರಿ ಅಮೃತ್ ಪೌಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಸಿಐಡಿ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಪೌಲ್ ಅವರು ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದು, ಉತ್ತರ ಪತ್ರಿಕೆಗಳಿದ್ದ (ಒಎಂಆರ್ ಶೀಟ್) ಸ್ಟ್ರಾಂಗ್ ರೂಂ ಕೀಯನ್ನು ಬಳಸಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರಬಲವಾಗಿ ವಾದಿಸಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಪೌಲ್ ಅವರ ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆ ಮುಂದುವರಿಸಲು ಆದೇಶಿಸಿದೆ.
ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಇರಿಸಲಾಗಿದ್ದ ಅಲ್ಮೇರಾಗಳ ಕೀಗಳನ್ನು ನೀಡಿ ಅಕ್ರಮಕ್ಕೆ ಅನುವು ಮಾಡಿಕೊಡಲು ಪೌಲ್ ಅವರು ಐದು ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂದು ಗಂಭೀರ ಆರೋಪವಿದೆ. ಈ ಹಗರಣದಲ್ಲಿ ಬಂಧಿತರಾಗಿರುವ ಮತ್ತೋರ್ವ ಆರೋಪಿ, ಅಂದಿನ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್‌ಪಿ ಶಾಂತಕುಮಾರ್, ಈ ಕುರಿತು ಹೇಳಿಕೆ ನೀಡಿದ್ದರು. ಇದೇ ಆಧಾರದ ಮೇಲೆ ಸಿಐಡಿ ತನಿಖೆ ನಡೆಸಿತ್ತು.
ಏನಿದು ವಿವಾದ
ರಾಜ್ಯದ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಈ ಹಗರಣದಲ್ಲಿ, ಹಲವು ಅಭ್ಯರ್ಥಿಗಳು ವಿದ್ಯುನ್ಮಾನ ಸಾಧನ ಬಳಸಿ ಮತ್ತು ಒಎಂಆರ್ ಶೀಟ್‌ಗಳನ್ನು ತಿದ್ದುವ ಮೂಲಕ ಅಕ್ರಮವಾಗಿ ಆಯ್ಕೆಯಾಗಿದ್ದರು ಎಂಬುದು ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, 2022ರ ಜುಲೈ 4ರಂದು ಅಮೃತ್ ಪೌಲ್ ಅವರನ್ನು ಬಂಧಿಸಿತ್ತು. ನಂತರ, 2023ರ ಸೆಪ್ಟೆಂಬರ್ 25ರಂದು ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಅವರ ವಿರುದ್ಧದ ವಿಚಾರಣೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು, ಪೌಲ್ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯ್ದೆ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.