PSI ಪರಶುರಾಮ ಸಾವು ಪ್ರಕರಣ | ಶಾಸಕ ಚೆನ್ನಾರೆಡ್ಡಿ ಕಚೇರಿಯಲ್ಲಿ ಸಿಐಡಿ ಶೋಧ
x

PSI ಪರಶುರಾಮ ಸಾವು ಪ್ರಕರಣ | ಶಾಸಕ ಚೆನ್ನಾರೆಡ್ಡಿ ಕಚೇರಿಯಲ್ಲಿ ಸಿಐಡಿ ಶೋಧ


ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ‌, ಇಡೀ ಕಚೇರಿಯನ್ನು ಪರಿಶೀಲನೆ ನಡೆಸಿದೆ.

ಇತ್ತೀಚೆಗೆ ಸಿಐಡಿ ಅಧಿಕಾರಿಗಳು ಪೊಲೀಸ್​ ವಸತಿ ಗೃಹದ ಪರಶುರಾಮ್ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್​ ಹೆಡ್​ ಪತ್ತೆಯಾಗಿತ್ತು. ಸದ್ಯ ಇದೀಗ ಮಹತ್ತರ ಮಾಹಿತಿ ಕಲೆ ಹಾಕಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಶಾಸಕ ಚೆನ್ನಾರೆಡ್ಡಿ ಪಾಟೀಲ್‌‌ ಅವರಿಗೆ ಆತಂಕ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಸಿಐಡಿ ಅಧಿಕಾರಿಗಳು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಪೊಸ್ಟಿಂಗ್ ವಿಚಾರವಾಗಿ ಪಿಎಸ್ಐ ಪರಶುರಾಮ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಇದೇ ಶಾಸಕರ ಕಚೇರಿಯಲ್ಲಿ ಚೆನ್ನಾರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ವಿಚಾರವಾಗಿ ಮೃತ ಪಿಎಸ್ಐ ಪರಶುರಾಮ್ ಅವರು ಶಾಸಕ ಚೆನ್ನಾರೆಡ್ಡಿ ಅವರನ್ನು ಎಷ್ಟು ಬಾರಿ ಭೇಟಿಯಾಗಿದ್ದರು? ಯಾವ ವಿಚಾರಕ್ಕೆ ಭೇಟಿಯಾಗಿರಬಹುದು? ಎನ್ನುವ ಹಲವು ವಿಚಾರಗಳ ಬಗ್ಗೆ ಸಿಐಡಿ ಅಧಿಕಾರಿಗಳ ತಂಡ ಮಾಹಿತಿ ಪಡೆಯುತ್ತಿದೆ.

ಶಾಸಕ ಚೆನ್ನಾರೆಡ್ಡಿ ಅವರನ್ನು ಪಿಎಸ್ಐ ಪರಶುರಾಮ್ ಭೇಟಿ ಮಾಡಿರುವ ವಿಡಿಯೋ ಕಲೆ ಹಾಕಲು ಸಿಐಡಿ ಮುಂದಾಗಿದೆ. ಕಚೇರಿಗೆ ಭೇಟಿ ನೀಡಿ ಸಿಐಡಿ ತನಿಖಾ ತಂಡ ಮಾಹಿತಿ ಪಡೆದಿರುವುದಲ್ಲದೆ ಈ ವೇಳೆ ಶಾಸಕರ ಪುತ್ರ ಪಂಪನಗೌಡ ಬಗ್ಗೆಯು ಮಾಹಿತಿ ಕಲೆ ಹಾಕಿಲಾಗಿದೆ. ಈಗಾಗಲೇ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ದ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಕ್ಕೆ ಪುಷ್ಟಿ ನೀಡುವಂತೆ ಪಿಎಸ್ಐ ಪರಶುರಾಮ್‌ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಖಾಲಿ ಲೇಟರ್ ಹೆಡ್ ಪತ್ತೆಯಾಗಿದೆ.

Read More
Next Story