Muniratna Honeytrap Case | ಹನಿಟ್ರ್ಯಾಪ್‌ಗೆ ಎಚ್‌ಐವಿಪೀಡಿತರ ಬಳಕೆ ಸಾಬೀತು; ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ
ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತನಿಖಾಧಿಕಾರಿಗಳು ಶಾಸಕ ಮುನಿರತ್ನ ವಿರುದ್ಧ 2,481 ಪುಟಗಳ ದೋಷಾರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತನಿಖಾಧಿಕಾರಿಗಳು ಶಾಸಕ ಮುನಿರತ್ನ ವಿರುದ್ಧ 2,481 ಪುಟಗಳ ದೋಷಾರೋಪ ಪಟ್ಟಿಯನ್ನು ಈಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಶಾಸಕ ಮುನಿರತ್ನ ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್ ಗೆ ಬೀಳಿಸಲು ಎಚ್ಐವಿ ಪೀಡಿತ ಮಹಿಳೆಯರನ್ನು ಬಳಸಿರುವ ಆರೋಪ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.
ಮುನಿರತ್ನ ದುಷ್ಕೃತ್ಯಕ್ಕೆ ಸಹಕಾರ ನೀಡಿದ ಆರೋಪ ಹೊತ್ತಿರುವ ಸುಧಾಕರ್, ಪಿ.ಶ್ರೀನಿವಾಸ್ ಹಾಗೂ ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧದ ಆರೋಪವೂ ಸಾಬೀತಾಗಿದೆ ಎಂದು ಸಿಐಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಆರ್ ಅಶೋಕ್ ಅವರಿಗೂ ಎಚ್‌ಐವಿ ಹರಡಲು ಯತ್ನ?
ಡಿ.17 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. 2,481 ಪುಟಗಳ ದೋಷಾರೋಪ ಪಟ್ಟಿಯಲ್ಲಿ 146 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಮ್ಯಾಜಿಸ್ಟ್ರೇಟ್ ಎದುರು ಸಿಆರ್ಪಿಸಿ 164ರಡಿ 8 ಮಂದಿ ನೀಡಿರುವ ಹೇಳಿಕೆ ಸೇರಿ ಒಟ್ಟು 850 ದಾಖಲೆಗಳನ್ನು ಒದಗಿಸಲಾಗಿದೆ. ಪೊಲೀಸರು ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿ ಚಿತ್ರೀಕರಿಸಿದ ವಿಡಿಯೋಗಳನ್ನು ರಿಟ್ರೀವ್ ಮಾಡಿರುವುದನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಮುನಿರತ್ನ ಹಾಗೂ ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ಸೇರಿ ಆಗಿನ ಕಂದಾಯ ಸಚಿವರಾಗಿದ್ದ ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೂ ಎಚ್ಐವಿ ಸೋಂಕಿತರ ರಕ್ತವನ್ನು ಚುಚ್ಚುಮದ್ದು ರೀತಿ ನೀಡಲು ಸಂಚು ರೂಪಿಸಿದ್ದರು. ಆದರೆ, ಸಂಚು ವಿಫಲವಾಯಿತು ಎಂಬುದು ದೋಷಾರೋಪ ಪಟ್ಟಿಯಲ್ಲಿದೆ.
ಕೋವಿಡ್ ಅವಧಿಯಲ್ಲಿ ಮುನಿರತ್ನ ತನ್ನೊಂದಿಗೆ ಸ್ನೇಹ ಬೆಳೆಸಿದರು. ಬಳಿಕ ಶಾಸಕ ಸೇರಿ ಏಳು ಜನ ನಿರಂತರ ಅತ್ಯಾಚಾರ ಮಾಡಿದರು. ಈ ಕೃತ್ಯವನ್ನು ವೀಡಿಯೊ ಮಾಡಿದ್ದರು. ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಬಿಜೆಪಿ ಕಾರ್ಯಕರ್ತೆ ಎನ್ನಲಾದ 40ವರ್ಷದ ಮಹಿಳೆ ಸೆ.18ರಂದು ರಾಮನಗರದ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಚ್‌ಐವಿ ಪೀಡಿತ ಮಹಿಳೆಯರನ್ನು ಬಳಸಿ ತಮ್ಮ ರಾಜಕೀಯ ವಿರೋಧಿಗಳನ್ನು ಹನಿಟ್ರ್ಯಾಪ್‌ಗೆ ಬೀಳಿಸುತ್ತಿದ್ದರು ಎಂದು ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದರು.
ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿತ್ತು. ಈ ಕುರಿತು ತನಿಖೆ ನಡೆಸಿದ ಎಸ್ಐಟಿ ತನಿಖಾಧಿಕಾರಿಗಳು, ಶಾಸಕ ಮುನಿರತ್ನ, ಸಹಚರರಾದ ಶ್ರೀನಿವಾಸ್, ಸುಧಾಕರ್ ಹಾಗೂ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಯಾವ ಸೆಕ್ಷನ್‌ಗಳಡಿ ಚಾರ್ಜ್‌ಶೀಟ್?
376(2)ಎನ್ (ನಿರಂತರ ಅತ್ಯಾಚಾರ), 308 (ಅಪರಾಧಿಕ ಸಂಚು), 504 (ಉದ್ದೇಶ ಪೂರ್ವಕ ಅವಮಾನ), 506 (ಜೀವ ಬೆದರಿಕೆ), 270 (ಅಪಾಯಕಾರಿ ರೋಗ ಹರಡುವಿಕೆ) ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಲೈಂಗಿಕ ಕಿರುಕುಳಕ್ಕಾಗಿ ಐಪಿಸಿ 354ಎ, ಅನುಮತಿ ಇಲ್ಲದೆ ಮಹಿಳೆಯ ಅಶ್ಲೀಲ ದೃಶ್ಯ ಸೆರೆಹಿಡಿದದ್ದಕ್ಕೆ ಸೆಕ್ಷನ್ 354 ಸಿ, ಸಂತ್ರಸ್ತೆಯ ಕೊಲ್ಲುವ ಉದ್ದೇಶಕ್ಕೆ ಸೆಕ್ಷನ್ 308, ಅಪರಾಧಿಕ ಒಳಸಂಚಿಗೆ ಸೆಕ್ಷನ್ 120 ಬಿ ಹಾಗೂ ಐಟಿ ಕಾಯ್ದೆ 2000ರ ಸೆಕ್ಷನ್ 66E ಅನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ 4 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ದಾಖಲಿಸಿದ್ದ ಜಾತಿನಿಂದನೆ ಪ್ರಕರಣದಲ್ಲಿ ಈಗಾಗಲೇ ಸಿಐಡಿ ಅಧಿಕಾರಿಗಳು 509ಪುಟಗಳ ದೋಷಾರೋಪ ಪಟ್ಟಿಯಲ್ಲಿ ಡಿಸೆಂಬರ್ ಮೊದಲವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇನ್ನು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕುರಿತ ವಿಚಾರಣೆಗಾಗಿ ಕಾಯುತ್ತಿದ್ದು, ಇನ್ನೂ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿಲ್ಲ.