ವಿಕೋಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಪೊಲೀಸರಿಂದ ಲಾಠಿ ಚಾರ್ಜ್
ಲಿಂಗಾಯುತ ಪಂಚಮಸಾಲಿ ಸಮುದಾಯದ ಕೋಟಾ ಬೇಡಿಕೆಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ನಿಂದ ಹಲವರು ಗಾಯಗೊಂಡಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮುದಾಯದ ಕೋಟಾ ಬೇಡಿಕೆಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ನಿಂದ ಹಲವರು ಗಾಯಗೊಂಡಿದ್ದಾರೆ.
ಪಂಚಮಸಾಲಿ ಸಮುದಾಯದ ಸ್ವಾಮೀಜಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದರು.
ಈ ಅಧಿವೇಶನದ ಮೊದಲ ದಿನವಾದ ಸೋಮವಾರ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಭಟನಾಕಾರರು ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯದ ಸದಸ್ಯರ ನಡುವೆ ಮುಖಾಮುಖಿಯಾಗಿದ್ದು, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕಾಂಗ್ರೆಸ್ ಸಹವರ್ತಿಗಳೊಂದಿಗೆ ವಾಗ್ವಾದ ನಡೆಸಿದರು. ಪಂಚಮಸಾಲಿ ಲಿಂಗಾಯತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಮಂಗಳವಾರ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಆಕ್ರೋಶಗೊಂಡ ಪ್ರತಿಭಟನಾಕಾರರು ಸರ್ಕಾರಿ ವಾಹನಗಳು ಮತ್ತು ಶಾಸಕರು ಮತ್ತು ಎಂಎಲ್‌ಸಿಗಳಿಗೆ ಸೇರಿದ ವಾಹನಗಳಿಗೆ ಹಾನಿ ಮಾಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ), ಕಾನೂನು ಮತ್ತು ಸುವ್ಯವಸ್ಥೆ ಆರ್ ಹಿತೇಂದ್ರ ಅವರು ಲಾಠಿ ಚಾರ್ಜ್‌ಗೆ ಆದೇಶಿಸಿದ್ದಾರೆ. ದಾರಿಯಲ್ಲಿ ಬಂದವರನ್ನೆಲ್ಲ ಪೊಲೀಸರು ಥಳಿಸಿದ್ದರಿಂದ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದರು. ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸೇರಿದಂತೆ ಹಲವರನ್ನ ಪೋಲಿಸರ ವಶಕ್ಕೆ ಪಡೆದರು.
ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಅನ್ನು ಪ್ರತಿಭಟನಾಕಾರರು ತಳ್ಳಿಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬಸವ ಜಯ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಿ, ಸರ್ಕಾರಿ ಉದ್ಯೋಗದಲ್ಲಿ ಶೇ 15ರಷ್ಟು ಮೀಸಲಾತಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು. ಪ್ರಸ್ತುತ, ಸಮುದಾಯವು 3B ವರ್ಗದಲ್ಲಿ ಐದು ಶೇಕಡಾ ಮೀಸಲಾತಿಯನ್ನು ಪಡೆಯುತ್ತಿದೆ.
ಹೋರಾಟಕ್ಕೆ ವಿರೋಧವಿಲ್ಲ;ಮೀಸಲಾತಿ ಸಾಧ್ಯತೆ ಕಡಿಮೆ
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಪಂಚಮಸಾಲಿ ಸಮುದಾಯದ ಮುಖಂಡರನ್ನು ಚರ್ಚೆಗೆ ಕರೆದಿದ್ದರೂ, ಅವರು ಆಗಮಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ ಕೈಗೊಳ್ಳಲು ಅವಕಾಶವಿದ್ದು, ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಬೆಳಗಾವಿಯಲ್ಲಿ ಮಂಗಳವಾರ ಹೇಳಿಕೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕಾದರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಬೇಕು. ಆಯೋಗ ಸಲ್ಲಿಸುವ ವರದಿ ಆಧಾರದ ಮೇಲೆ ಮೀಸಲಾತಿ ಬೇಡಿಕೆ ಪರಿಶೀಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. 2ಎ ಮೀಸಲಾತಿ ಕುರಿತು ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಸುಪ್ರೀಂಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ. ಇದರ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಅದನ್ನು ಸದನ ಮುಂದೆ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಪ್ರಕಟಿಸಿದ್ದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತಂತೆ ಪತ್ರಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ್ದ ಅವರು, ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಯುತ್ತಿದೆ. ನಾನು ಮುಖ್ಯಮಂತ್ರಿ ಆದ ಬಳಿಕ ಜಯಮೃತ್ಯುಂಜಯ ಸ್ವಾಮೀಜಿ ಸೇರಿ ಹಲವು ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ನಾನು ಅಡ್ಡಿಯಾಗಿಲ್ಲ. ಆದರೆ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಿಸಲಾಗಿದೆ. ವೀರಶೈವ ಲಿಂಗಾಯತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಆದರೆ, ಪಂಚಮಸಾಲಿಗಳನ್ನು 2ಎ ಗೆ ಸೇರಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಾಟಗಾರರಿಗೆ ತಿಳಿಸಿದ್ದೇನೆ. ಹಿಂದಿನ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿಗಳನ್ನು 2ಎ ಸೇರಿಸಿರಲಿಲ್ಲ. ಬದಲಾಗಿ, ಅಲ್ಪಸಂಖ್ಯಾತ ಮುಸ್ಲಿಮರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿ ರದ್ದುಪಡಿಸಿ, 3ಎ ಹಾಗೂ 3ಬಿ ಗೆ ತಲಾ ಶೇ 2 ರಂತೆ ಹಂಚಿಕೆ ಮಾಡಿದ್ದರು. ಇದನ್ನು ಆಕ್ಷೇಪಿಸಿ ಮುಸ್ಲಿಮರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಇದೇ ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸುವುದಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ ಎಂದು ಪ್ರಮಾಣಪತ್ರ ಸಲ್ಲಿಸಿದೆ. ಇದರ ಆಧಾರದ ಮೇಲೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.