ಮಂಡ್ಯ ಸಾಹಿತ್ಯ ಸಮ್ಮೇಳನ | ಬಾಡೂಟ ಬೇಡಿಕೆ: ಡಿಸಿ ಕಚೇರಿ ಎದುರು ಮಾಂಸಾಹಾರ ಸೇವಿಸಿ ಪ್ರತಿಭಟನೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು 'ಆಹಾರ ಕ್ರಾಂತಿಗೆ ಆಹ್ವಾನ' ಎಂಬ ಘೋಷಣೆಯೊಂದಿಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಚಿಕನ್ ಸಾಂಬಾರ್, ಮುದ್ದೆ, ಮೊಟ್ಟೆ ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದಲ್ಲಿ ಡಿ.20 ರಿಂದ ಆರಂಭವಾಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಷಯದಲ್ಲಿ ನಾಡು-ನುಡಿ ವಿಚಾರದ ಚರ್ಚೆಗಿಂತ ಬಾಡೂಟದ ಚರ್ಚೆ, ಒತ್ತಾಯಗಳು ಹೆಚ್ಚು ಸದ್ದು ಮಾಡುತ್ತಿವೆ.
ಸಮ್ಮೇಳನದಲ್ಲಿ ಸಸ್ಯಾಹಾರದಂತೆ ಮಾಂಸಾಹಾರಕ್ಕೂ ಪ್ರಾತಿನಿಧ್ಯ ನೀಡಬೇಕೆಂದು ವಿವಿಧ ಸಂಘ ಸಂಸ್ಥೆಗಳು, ಪ್ರಗತಿಪರರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾಡಳಿತದ ಮೇಲೆ ಒತ್ತಡ ತರುತ್ತಿದ್ದಾರೆ.
ಬಾಡೂಟಕ್ಕೆ ಅವಕಾಶ ನೀಡದಿದ್ದರೆ ಮನೆ ಮನೆಗೆ ತೆರಳಿ ಕೋಳಿ ಸಂಗ್ರಹಿಸುವುದಾಗಿ ಬಾಡೂಟ ಬಳಗ ಈ ಮುನ್ನ ಎಚ್ಚರಿಸಿತ್ತು. ಈ ಮಧ್ಯೆ ಸಿಐಟಿಯು ನೇತೃತ್ವದಲ್ಲಿ ಹಲವು ಪ್ರಗತಿಪರರು, ಚಿಂತಕರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮೊಟ್ಟೆ ತಿಂದು ಪ್ರತಿಭಟನೆ ಮಾಡಿದ್ದರು. ಶನಿವಾರ (ಡಿ.14) ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಂಸಾಹಾರ ಸೇವಿಸುವ ಮೂಲಕ ಹಕ್ಕೊತ್ತಾಯ ಮಾಡಿದ್ದಾರೆ.
'ಆಹಾರ ಕ್ರಾಂತಿಗೆ ಆಹ್ವಾನ' ಎಂಬ ಘೋಷಣೆಯೊಂದಿಗೆ ಚಿಕನ್ ಸಾಂಬಾರ್, ಮುದ್ದೆ, ಮೊಟ್ಟೆ ತಿನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ʼಕರುನಾಡು ಸೇವಕರುʼ ಸಂಘಟನೆಯ ಮುಖಂಡ ಎಂ.ಬಿ.ನಾಗಣ್ಣಗೌಡ ಮಾತನಾಡಿ, 'ಸಮ್ಮೇಳನದಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಸರಿಯಲ್ಲ. ಮಾಂಸಾಹಾರವು ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ಆಹಾರ. ಹಾಗಾಗಿ ಬಾಡೂಟಕ್ಕೆ ಅವಕಾಶ ನೀಡುವ ಕುರಿತು ಆಹಾರ ಸಮಿತಿ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪರಿಶೀಲನೆ ನಡೆಸಬೇಕು' ಎಂದು ಆಗ್ರಹಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, 'ಆಹಾರ ವಿಷಯದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಪರಿಶಿಷ್ಟ ಜಾತಿ-ಪರಿಶಿಷ್ಟ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನಿವಾರಣೆ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ಸಮ್ಮೇಳದನಲ್ಲಿ ಬಾಡೂಟಕ್ಕೆ ಅವಕಾಶ ನೀಡದಿದ್ದರೆ ಸಮ್ಮೇಳನದಲ್ಲಿ ಸಾರ್ವಜನಿಕವಾಗಿ ಚಿಕನ್ ಬಿರಿಯಾನಿ ಹಂಚಲಾಗುವುದು ಎಂದು ಈ ಹಿಂದೆ ವಿವಿಧ ಸಂಘಟನೆಗಳು ಹಾಗೂ ಬಾಡೂಟ ಬಳಗ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದವು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಯರಾಂ, ನೆಲದನಿ ಬಳಗದ ಮಂಗಲ ಲಂಕೇಶ್, ವಕೀಲರಾದ ಜೆ. ರಾಮಯ್ಯ, ಚೀರನಹಳ್ಳಿ ಲಕ್ಷ್ಮಣ್, ಬಿ.ಟಿ. ವಿಶ್ವನಾಥ್, ಮುಖಂಡರಾದ ನರಸಿಂಹಮೂರ್ತಿ, ಹನಕೆರೆ ಗಂಗಾಧರ್, ಕೆಂಚನಹಳ್ಳಿ ಸತೀಶ್, ಪ್ರದೀಪ್ ಇತರರು ಭಾಗವಹಿಸಿದ್ದರು.