ದೇವೇಗೌಡರ ಭೂ ಕಬಳಿಕೆ ಫ್ಲೆಕ್ಸ್ ವಿರೋಧಿಸಿ ಪ್ರತಿಭಟನೆ: ಸಾರಾ ಮಹೇಶ್ ಸೇರಿ ಹಲವರು ಪೊಲೀಸರ ವಶಕ್ಕೆ
x

ದೇವೇಗೌಡರ ಭೂ ಕಬಳಿಕೆ ಫ್ಲೆಕ್ಸ್ ವಿರೋಧಿಸಿ ಪ್ರತಿಭಟನೆ: ಸಾರಾ ಮಹೇಶ್ ಸೇರಿ ಹಲವರು ಪೊಲೀಸರ ವಶಕ್ಕೆ


ಮೈಸೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಜನಾಂದೋಲನ ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಹಲವೆಡೆ ʻಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮೈಸೂರಿನಲ್ಲಿ ಭೂ ಕಬಳಿಕೆ ಪಕ್ಷಿನೋಟʼ ಎಂಬ ಫ್ಲೆಕ್ಸ್​ ಹಾಕಲಾಗಿದೆ. ಅದನ್ನು ಖಂಡಿಸಿ ಜೆಡಿಎಸ್​ ಕಾರ್ಯಕರ್ತರು ಮಾಜಿ ಸಚಿವ ಸಾ.ರಾ. ಮಹೇಶ್​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಸಾ.ರಾ. ಮಹೇಶ್‌ ಹಾಗೂ ಇತರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶದ ಪ್ರಯುಕ್ತ ಮೈಸೂರು ನಗರದಲ್ಲಿ ‘ಕೈ’ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸೋನಿಯಾಗಾಂಧಿ‌, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್​ ಶಾಸಕರ ಫ್ಲೆಕ್ಸ್‌ಗಳು ಎಲ್ಲೆಡೆ ಕಾಣಿಸುತ್ತಿವೆ. ಈ ನಡುವೆ ವಿಭಿನ್ನ ಫ್ಲೆಕ್ಸ್‌ವೊಂದು ಮೈಸೂರಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. 2023 ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತು ಎಂಬ ಅಡಿ ಬರಹದ ಕೆಳಗೆ "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ" ಎಂಬ ಫ್ಲೆಕ್ಸ್​ ಹಾಕಲಾಗಿದೆ. ಅದರಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಹಾಗೂ ಆ ಕುಟುಂಬದ ಸದಸ್ಯರ ಭೂ ಕಬಳಿಕೆ ವಿವರಗಳನ್ನು ಹಾಕಲಾಗಿದೆ.

ಈ ಬಗ್ಗೆ ಜೆಡಿಎಸ್‌ ಮೈಸೂರು ಘಟಕ ಹಾಗೂ ಮಾಜಿ ಸಚಿವ, ಜೆಡಿಎಸ್​ ಮುಖಂಡ ಸಾ.ರಾ.ಮಹೇಶ್​ ನೇತೃತ್ವದಲ್ಲಿ ಫ್ಲೆಕ್ಸ್​ಗಳನ್ನು ಹಾಕಿರುವ ಕಡೆ ಆಗಮಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದ್ದರಿಂದ ಸಾ.ರಾ. ಮಹೇಶ್​​​ ಹಾಗೂ ಇತರ ಮೈಸೂರು ನಗರದ ಜೆಡಿಎಸ್​ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಸದ್ಯ ಎಲ್ಲರನ್ನು ನಗರದ ಸಿಆರ್​ ಗ್ರೌಂಡ್‌ನಲ್ಲಿ ಇರಿಸಲಾಗಿದೆ. ಅಲ್ಲಿಯೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಜೆಡಿಎಸ್‌ ಕಾರ್ಯಕರ್ತರು ಆಗಮಿಸುತ್ತಿದ್ದು, ಫ್ಲೆಕ್ಸ್‌ಗಳನ್ನು ಹಾಕಿರುವ ಕಡೆ ಹೆಚ್ಚುವರಿ ಪೊಲೀಸ್​ ಬಂದೋಬಸ್ತ್‌ ಮಾಡಲಾಗಿದೆ.

Read More
Next Story