
ಲೋಕಾಯುಕ್ತ ತನಿಖಾ ಸಂಸ್ಥೆಗೇ ತನಿಖೆ? ಭ್ರಷ್ಟಾಚಾರ ಪತ್ತೆಗೆ ಅಂತರಿಕ ನಿಗಾ ಘಟಕ ಪ್ರಸ್ತಾಪ
ಲೋಕಾಯುಕ್ತಕ್ಕೆ 'ಒಂಬಡ್ಸ್‌ಮನ್' ನೇಮಕ ಮಾಡಲಾಗುವುದು ಎಂಬ ಚರ್ಚೆಗಳು ಕೇಳಿಬಂದಿದ್ದವು. ಲೋಕಾಯುಕ್ತ ಹುದ್ದೆಯೇ ವಾಸ್ತವವಾಗಿ 'ಒಂಬಡ್ಸ್‌ಮನ್' ಆಗಿರುವುದರಿಂದ, ಇನ್ನೊಂದು 'ಒಂಬಡ್ಸ್‌ಮನ್' ನೇಮಕ ಸಮಂಜಸವಲ್ಲ ಎಂಬ ಚರ್ಚೆಗಳು ನಡೆದಿವೆ
ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ಸ್ಥಾಪಿತವಾಗಿರುವ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಆಗಾಗ್ಗೆ ಅವ್ಯವಹಾರದ ಆರೋಪಗಳು ಕೇಳಿಬರುತ್ತಿದ್ದು, ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳು ಮೂಡಿವೆ.
ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕರ್ತವ್ಯಲೋಪದ ದೂರುಗಳು ದಾಖಲಾಗುತ್ತಿದ್ದರೂ, ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಸಂಸ್ಥೆಯಲ್ಲಿಯೇ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ನಿಗಾವಹಿಸಲು ಆಂತರಿಕ ನಿಗಾ ಘಟಕ ಸ್ಥಾಪಿಸಲು ಲೋಕಾಯುಕ್ತ ಸಂಸ್ಥೆ ಮುಂದಾಗಿದೆ.
'ಒಂಬಡ್ಸ್‌ಮನ್' ಬದಲು 'ಆಂತರಿಕ ನಿಗಾ ಘಟಕ'ಕ್ಕೆ ಒತ್ತು
ಸಂಸ್ಥೆಗೆ 'ಒಂಬಡ್ಸ್‌ಮನ್' ನೇಮಕ ಮಾಡಲಾಗುವುದು ಎಂಬ ಚರ್ಚೆಗಳು ಆರಂಭದಲ್ಲಿ ಕೇಳಿಬಂದಿದ್ದವು. ಆದರೆ, ಲೋಕಾಯುಕ್ತ ಹುದ್ದೆಯೇ ವಾಸ್ತವವಾಗಿ 'ಒಂಬಡ್ಸ್‌ಮನ್' ಆಗಿರುವುದರಿಂದ, ಅದಕ್ಕೆ ಇನ್ನೊಂದು 'ಒಂಬಡ್ಸ್‌ಮನ್' ನೇಮಕ ಮಾಡುವುದು ಸಮಂಜಸವಲ್ಲ ಎಂಬ ಚರ್ಚೆಗಳು ನಡೆದಿವೆ. ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಸಹ ಈ ವದಂತಿಯನ್ನು ತಳ್ಳಿಹಾಕಿದ್ದು, ಲೋಕಾಯುಕ್ತ ಸಂಸ್ಥೆಯಲ್ಲಿ ಯಾವುದೇ 'ಒಂಬಡ್ಸ್‌ಮನ್' ಹುದ್ದೆ ರಚಿಸುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್ ಅಥವಾ ಯಾವುದೇ ಉನ್ನತ ಸಂಸ್ಥೆ ಪ್ರತ್ಯೇಕ ವ್ಯಕ್ತಿ/ ಸಂಸ್ಥೆಯಿಂದ ಒಂದು ಸಂಸ್ಥೆಯ ಹಗರಣ ಅಥವಾ ವಿವಾದಗಳ ತನಿಖೆ ನಡೆಸಲು ನೇಮಕವಾದ ವ್ಯಕ್ತಿ ಒಂಬಡ್ಸ್‌ಮನ್. ಲೋಕಾಯುಕ್ತ ಸಂಸ್ಥೆಯೂ ಒಂಬಡ್ಸ್‌ಮನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈಗ ಲೋಕಾಯುಕ್ತ ತನಿಖೆಯಲ್ಲೇ ಹಗರಣದ ಅರೋಪ ಬಂದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಒಂಬಡ್ಸ್‌ಮನ್ ನೇಮಕವಾಗಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಆದರೆ, ಈಗ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ನಿಗಾವಹಿಸಲು 'ಆಂತರಿಕ ನಿಗಾ ಘಟಕ'ವನ್ನು ಸ್ಥಾಪಿಸಲು ಲೋಕಾಯುಕ್ತ ಸಂಸ್ಥೆಯು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟಕವು ಲೋಕಾಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸುವ ಹುದ್ದೆಯಾಗಿರುತ್ತದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಪ್ರತಿಯಾಗಿ ಹೈಕೋರ್ಟ್ ನ್ಯಾಯಮೂರ್ತಿ ಉಸ್ತುವಾರಿಗೆ ಒತ್ತಾಯ
ಲೋಕಾಯುಕ್ತ ಸಂಸ್ಥೆಯು ಜೂನ್ 23ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಆಂತರಿಕ ನಿಗಾ ಘಟಕವನ್ನು ಆರಂಭಿಸಲು ಕೋರಿದೆ. ಈ ಘಟಕಕ್ಕೆ ಜಿಲ್ಲಾ ನ್ಯಾಯಾಧೀಶರ ವೃಂದದ ಹುದ್ದೆಯೊಂದಿಗೆ ಪೂರಕ ಅಧಿಕಾರಿ, ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸುವಂತೆ ಮನವಿ ಮಾಡಲಾಗಿದೆ. ಆದರೆ, ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ, ಜಿಲ್ಲಾ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಆಂತರಿಕ ನಿಗಾ ಘಟಕ ಸ್ಥಾಪನೆ ಮಾಡುವ ಬದಲು ಹೈಕೋರ್ಟ್ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ನೇಮಕ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆರ್‌ಟಿಐ ಕಾರ್ಯಕರ್ತ ಹೆಚ್.ಎಂ. ವೆಂಕಟೇಶ್ ಈ ಬಗ್ಗೆ ಮಾತನಾಡಿ, "ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಆರಂಭಿಸಲಾಗಿದೆ. ಆದರೆ, ಲೋಕಾಯುಕ್ತ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಲೋಕಾಯುಕ್ತರ ಅಧೀನದಲ್ಲಿ ಹುದ್ದೆ ಸ್ಥಾಪನೆ ಮಾಡುವುದಕ್ಕಿಂತ ಅವರ ಮೇಲೆ ಉಸ್ತುವಾರಿ ನೋಡಿಕೊಳ್ಳಲು ಹುದ್ದೆ ಸೃಷ್ಟಿಸಬೇಕು. ಅದಕ್ಕಾಗಿ ಜಿಲ್ಲಾ ನ್ಯಾಯಾಧೀಶರ ಬದಲು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಲೋಕಾಯುಕ್ತದಲ್ಲಿ ಕೇಳಿಬಂದ ಭ್ರಷ್ಟಾಚಾರ ಆರೋಪಗಳು
ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪಗಳು ಹೊಸದೇನಲ್ಲ. ಈ ಹಿಂದೆ, ನಿವೃತ್ತ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಮತ್ತು ಅವರ ತಂಡವು ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಭ್ರಷ್ಟಾಚಾರವನ್ನು ತಡೆಯಲು ವಿಫಲರಾಗಿದ್ದಕ್ಕೆ ಅಂದಿನ ಲೋಕಾಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು.
ಇದೀಗ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಎಸ್‌ಪಿ ಆಗಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿದೆ. ಆರೋಪಿ ನಿಂಗಪ್ಪ ಜತೆಗೂಡಿ, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಶ್ರೀನಾಥ್ ಜೋಶಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪಗಳಿಗೆ ಸಾಕ್ಷಿಗಳು ಲಭ್ಯವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಸಾವಿರಾರು ಪ್ರಕರಣಗಳ ಬಾಕಿ, ಸಿಬ್ಬಂದಿ ಕೊರತೆ
ಲೋಕಾಯುಕ್ತ ಸಂಸ್ಥೆ ಸದ್ಯಕ್ಕೆ ಹಳೆಯ ಪ್ರಕರಣಗಳ ಭಾರವನ್ನು ಹೊತ್ತುಕೊಂಡಿದೆ. ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರ ಬಳಿ ಏಳು ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. 2023ರ ಏಪ್ರಿಲ್ 1ಕ್ಕೂ ಮೊದಲು 4048 ಪ್ರಕರಣಗಳು ಬಾಕಿ ಇದ್ದವು. ನಂತರ 6491 ಹೊಸ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 3429 ಪ್ರಕರಣಗಳು ವಿಲೇವಾರಿಯಾಗಿ, ಪ್ರಸ್ತುತ 7110 ಪ್ರಕರಣಗಳು ಬಾಕಿ ಇವೆ. ಅದೇ ರೀತಿ, ಲೋಕಾಯುಕ್ತ-1 ನ್ಯಾ. ಕೆ.ಎನ್. ಫಣೀಂದ್ರ ಬಳಿ 6927 ಪ್ರಕರಣಗಳು, ಮತ್ತು ಲೋಕಾಯುಕ್ತ-2 ನ್ಯಾ. ಬಿ. ವೀರಪ್ಪ ಬಳಿ 8647 ಪ್ರಕರಣಗಳು ಬಾಕಿ ಉಳಿದಿವೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ಭ್ರಷ್ಟಾಚಾರ ನಿಗ್ರಹ ದಳ (ACB) ರದ್ದುಗೊಂಡ ನಂತರ, ACBಯಿಂದ ಲೋಕಾಯುಕ್ತ ಸಂಸ್ಥೆಗೆ 2159 ಪ್ರಕರಣಗಳು ಪೊಲೀಸ್ ವಿಭಾಗಕ್ಕೆ ವರ್ಗಾವಣೆಯಾಗಿವೆ. ಅಲ್ಲದೆ, ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ 205 ದಾಳಿ ಪ್ರಕರಣಗಳು, 645 ಟ್ರ್ಯಾಪ್ ಪ್ರಕರಣಗಳು ಮತ್ತು 77 ಇತರೆ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದೆ.
ಸಂಸ್ಥೆ ಬಲವರ್ಧನೆಗೆ ಹುದ್ದೆಗಳ ಭರ್ತಿಗೆ ಒತ್ತಾಯ
ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಲು ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಪ್ರಥಮ ಸಹಾಯಕರು-20, ದ್ವಿತೀಯ ದರ್ಜೆ ಸಹಾಯಕರು-18 ಮತ್ತು ಕ್ಲರ್ಕ್-ಕಂ-ಟೈಪಿಸ್ಟ್-28 ಹುದ್ದೆಗಳನ್ನೊಳಗೊಂಡಂತೆ ಒಟ್ಟು 66 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕೋರಲಾಗಿದೆ. ಈ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಬಾಕಿ ಇದೆ. ಅಲ್ಲದೆ, ಎಂಟು ಪೊಲೀಸ್ ಅಧೀಕ್ಷಕರ ಹುದ್ದೆಗಳು ಖಾಲಿ ಇವೆ. ಹೊಸದಾಗಿ ಒಟ್ಟು 339 ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸುವಂತೆ ಹಾಗೂ ಸಂಸ್ಥೆಯ ಕಾನೂನು ಕೋಶಕ್ಕೆ ಹೊಸದಾಗಿ 12 ಅಧಿಕಾರಿ, ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ.
ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಚೇರಿಯ ನಾಮಫಲಕ, ಸಹಾಯವಾಣಿ ಸಂಖ್ಯೆ ಮತ್ತು ದೂರು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ನಾಮಫಲಕ ಮತ್ತು ಸಹಾಯವಾಣಿ ಅಳವಡಿಸಿಕೊಳ್ಳದೇ ಇರುವ ಕಚೇರಿಗಳಲ್ಲಿ ಅವುಗಳನ್ನು ಅಳವಡಿಸಲು ಜಿಲ್ಲಾಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಂಸ್ಥೆ ತಿಳಿಸಿದೆ.