ಬಿಬಿಎಂಪಿ ಆಸ್ತಿ ತೆರಿಗೆ ‘ಒಟಿಎಸ್’ ಕಾಲಾವಕಾಶ ವಿಸ್ತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
x
ಡಿ ಕೆ ಶಿವಕುಮಾರ್‌

ಬಿಬಿಎಂಪಿ ಆಸ್ತಿ ತೆರಿಗೆ ‘ಒಟಿಎಸ್’ ಕಾಲಾವಕಾಶ ವಿಸ್ತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು ಎಂದೂ ಸಚಿವರು ಹೇಳಿದ್ದಾರೆ


“ಬಿಬಿಎಂಪಿ ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ತೀರುವಳಿ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜು.31) ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಡದ ಮೇರೆಗೆ ಅದನ್ನು ಮತ್ತೆ ಒಂದು ತಿಂಗಳ ಕಾಲ; ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.

11ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಅವರು, “ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಕೆಲವರು ಚೆಕ್ ನೀಡಿದ್ದು, ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ; ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು.

“ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ” ಎಂದೂ ಅವರು ಭರವಸೆ ನೀಡಿದರು.

ಬಿಜೆಪಿ ಪಾದಯಾತ್ರೆಯಲ್ಲಿ ವಿಷಯವೂ ಇಲ್ಲ, ಅರ್ಥವೂ ಇಲ್ಲ

ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಜನಾಂದೋಲನ ಯಾತ್ರೆ ಬಗ್ಗೆ ಕೇಳಿದಾಗ, “ಬಿಜೆಪಿಯ ಪಾದಯಾತ್ರೆಗೆ ಅರ್ಥ ಅಥವಾ ವಿಷಯ ಯಾವುದೂ ಇಲ್ಲ. ಅವರ ಪಾದಯಾತ್ರೆ ವಿಚಾರ ಏನು? ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಹೊಸ ಹಗರಣಗಳಿದ್ದರೆ ಅವರು ಹೇಳಲಿ. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ. ಹೀಗಾಗಿ ನಾವು ಅವರ ಕಾಲದ ಹಗರಣಗಳ ಬಗ್ಗೆ, ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರತಿನಿತ್ಯ ಮೂರ್ನಾಲ್ಕು ಪ್ರಶ್ನೆ ಕೇಳುತ್ತೇವೆ, ಅವರು ಉತ್ತರ ನೀಡಲಿ” ಎಂದು ಸವಾಲೆಸೆದರು.

“ಪಾದಯಾತ್ರೆ ಮೂಲಕ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತದೆ ಎಂದು ಅವರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರನ್ನು ಹೆದರಿಸಿ, ಬೆದರಿಸಿ ಪಾದಯಾತ್ರೆಗೆ ಒಪ್ಪಿಸಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅದು ಅವರವರ ವಿಚಾರ. ಅವರ ಒಪ್ಪಿಗೆಯ ಗುಟ್ಟು ಏನು ಎಂದು ಅವರನ್ನೇ ಕೇಳಿ” ಎಂದು ಲೇವಡಿ ಮಾಡಿದರು.

ಈ ಜನಾಂದೋಲನ ಸಭೆ ರಾಜ್ಯಾದ್ಯಂತ ಮಾಡುತ್ತೀರಾ ಎಂದು ಕೇಳಿದಾಗ, “ನಾವು ಮೊದಲು ಅವರ ಅವಧಿಯಲ್ಲಿ ಈ ರೀತಿಯ ಅಕ್ರಮಗಳು ನಡೆದಿದ್ದವು, ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡುತ್ತೇವೆ. ಅವರು ಉತ್ತರ ನೀಡಲಿ. ಆಮೇಲೆ ನಾವು ರಾಜ್ಯ ಮಟ್ಟದ ಬಗ್ಗೆ ಆಲೋಚನೆ ಮಾಡುತ್ತೇವೆ” ಎಂದು ತಿಳಿಸಿದರು.

ನನ್ನ ಮೇಲೆ ದಾಳಿ ಮಾಡಲು ಇಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ, ನಾನು ಚಹಾ, ಬಿಸ್ಕೆಟ್ ರೆಡಿ ಮಾಡಿಕೊಂಡು ಕಾಯುತ್ತಿದ್ದೇನೆ ಎಂಬ ರಾಹುಲ್ ಗಾಂಧಿ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. ಅವರು ಅವರದೇ ಆದ ರೀತಿಯಲ್ಲಿ ಮಾಹಿತಿ ಪಡೆದಿರುತ್ತಾರೆ. ಇನ್ನು ಸಂವಿಧಾನಿಕ ಸಂಸ್ಥೆಗಳು ಯಾವ ರೀತಿ ವರ್ತಿಸುತ್ತಿವೆ ಎಂದು ನೀವೆಲ್ಲರೂ ನೋಡುತ್ತಿದ್ದೀರಿ. ತನಿಖೆ ಹೆಸರಲ್ಲಿ ಅಧಿಕಾರಿಗಳಿಗೆ ಒತ್ತಡ ಹಾಕಿ ಮುಖ್ಯಮಂತ್ರಿ, ನನ್ನ ಹೆಸರು ಹೇಳುವಂತೆ ಬೆದರಿಸುವುದು ನಡೆಯುತ್ತಿದೆ. ಸಿಬಿಐ ಏನೇನು ಮಾಡುತ್ತಿದೆ ಎಂಬ ಪಟ್ಟಿ ನನ್ನ ಬಳಿ ಇದೆ. ನಿಧಾನವಾಗಿ ಅದರ ಬಗ್ಗೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.

Read More
Next Story