
ಆಗಸ್ಟ್ 31ರಿಂದ ಸ್ಥಿರಾಸ್ತಿ ನೋಂದಣಿ ಶುಲ್ಕ ಶೇ. 2ಕ್ಕೆ ಹೆಚ್ಚಳ: ನೆರೆ ರಾಜ್ಯಗಳ ದರಕ್ಕೆ ಸಮೀಕರಣ
ಹೊಸ ಶುಲ್ಕ ಜಾರಿಗೆ ಬರುವುದರಿಂದ, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಿರುವ ಸಾರ್ವಜನಿಕರಿಗೆ ಇಲಾಖೆಯು ಕೆಲವು ಸೂಚನೆಗಳನ್ನು ನೀಡಿದೆ.
ರಾಜ್ಯ ಸರ್ಕಾರವು ಸ್ಥಿರಾಸ್ತಿ ವ್ಯವಹಾರಗಳ ಮೇಲಿನ ನೋಂದಣಿ ಶುಲ್ಕವನ್ನು ಶೇ. 1ರಿಂದ ಶೇ. 2ಕ್ಕೆ ಪರಿಷ್ಕರಿಸಿದ್ದು, ಈ ಹೊಸ ದರವು ಆಗಸ್ಟ್ 31, 2025ರಿಂದ ಜಾರಿಗೆ ಬರಲಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಕಡಿಮೆ ಇದ್ದು, ಅದನ್ನು ಇತರ ರಾಜ್ಯಗಳ ದರಗಳೊಂದಿಗೆ ಸಮೀಕರಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಮುಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಷ್ಕರಣೆಗೂ ಮುನ್ನ ಕರ್ನಾಟಕದಲ್ಲಿ ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್‌ಗಳನ್ನು ಸೇರಿ ಒಟ್ಟು ಶೇ. 6.6ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಇದೇ ವೇಳೆ, ನೆರೆಯ ರಾಜ್ಯಗಳಾದ ತಮಿಳುನಾಡಿನಲ್ಲಿ ಶೇ. 9, ಕೇರಳದಲ್ಲಿ ಶೇ. 10, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ಶೇ. 7.5ರಷ್ಟು ಶುಲ್ಕ ವಿಧಿಸಲಾಗುತ್ತಿದೆ.
ಸಾರ್ವಜನಿಕರಿಗೆ ಶುಲ್ಕ
ಹೊಸ ಶುಲ್ಕ ಜಾರಿಗೆ ಬರುವುದರಿಂದ, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಿರುವ ಸಾರ್ವಜನಿಕರಿಗೆ ಇಲಾಖೆಯು ಕೆಲವು ಸೂಚನೆಗಳನ್ನು ನೀಡಿದೆ. ಹಳೆಯ ನೋಂದಣಿ ಶುಲ್ಕವನ್ನು ಪಾವತಿಸಿ, ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಇನ್ನೂ ಅಪಾಯಿಂಟ್‌ಮೆಂಟ್ ಪಡೆಯದವರು, ಪರಿಷ್ಕೃತ ದರದ ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕವೇ ಪಾವತಿಸಬೇಕು. ಇದಕ್ಕಾಗಿ ಹಿಂದೆ ಬಳಸಿದ ಲಾಗಿನ್ ಐಡಿಯನ್ನೇ ಬಳಸಬೇಕಾಗುತ್ತದೆ. ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈ ಕುರಿತು ಎಸ್‌ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗುವುದು.
ಈಗಾಗಲೇ ನೋಂದಣಿಗೆ ಸಲ್ಲಿಸಲಾಗಿದ್ದು, ಪರಿಶೀಲನಾ ಹಂತದಲ್ಲಿರುವ ದಸ್ತಾವೇಜುಗಳಿಗೂ ಪರಿಷ್ಕೃತ ಶೇ. 2ರ ನೋಂದಣಿ ಶುಲ್ಕ ಅನ್ವಯವಾಗುತ್ತದೆ. ಶುಲ್ಕ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಅರ್ಜಿದಾರರಿಗೆ ಈ ಪರಿಷ್ಕೃತ ಮೊತ್ತದ ಬಗ್ಗೆ ಮಾಹಿತಿ ನೀಡಲಾಗುವುದು.
ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ಎಲ್ಲಾ ಅರ್ಜಿದಾರರು ಈ ನವೀಕರಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಹಂತ-ಹಂತದ ವಿವರವಾದ ಸೂಚನೆಗಳಿಗಾಗಿ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.