ಸಿಎಂ ಪತ್ನಿ ಆಸ್ತಿ ಸರ್ಕಾರಕ್ಕೆ ಹೋಗಿದೆ, ಬದಲಾಗಿ ನಿವೇಶನ ನೀಡಿದ್ದಾರೆ, ಇದರಲ್ಲಿ ತಪ್ಪೇನಿದೆ?: ಸಿಎಂ ಪರ ಡಿಕೆಶಿ ಬ್ಯಾಟಿಂಗ್‌
x

ಸಿಎಂ ಪತ್ನಿ ಆಸ್ತಿ ಸರ್ಕಾರಕ್ಕೆ ಹೋಗಿದೆ, ಬದಲಾಗಿ ನಿವೇಶನ ನೀಡಿದ್ದಾರೆ, ಇದರಲ್ಲಿ ತಪ್ಪೇನಿದೆ?: ಸಿಎಂ ಪರ ಡಿಕೆಶಿ ಬ್ಯಾಟಿಂಗ್‌


ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಿವೇಶನ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.‌

ಚೆನ್ನಪಟ್ಟಣ ತಾಲೂಕಿನ ಬೈರಾಪಟ್ಟಣದಲ್ಲಿ ಮಾಧ್ಯಮದವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) 4 ಸಾವಿರ ಕೋಟಿ ರೂ. ಹಗರಣವಾಗಿದೆ ಹಾಗೂ ಮುಖ್ಯಮಂತ್ರಿಗಳ ಪತ್ನಿಗೂ ನಿವೇಶನ ನೀಡಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ʻʻಸಿಎಂ ಅವರ ಪತ್ನಿ ಯಾಕೆ ಹಗರಣ ಮಾಡುತ್ತಾರೆ? ಅವರ ಆಸ್ತಿ ಸರ್ಕಾರಕ್ಕೆ ಹೋಗಿದೆ, ಅದಕ್ಕೆ ಬದಲಾಗಿ ನಿವೇಶನ ನೀಡಿದ್ದಾರೆ, ಇದರಲ್ಲಿ ತಪ್ಪೇನಿದೆ?ʼʼ ಎಂದಿದ್ದಾರೆ.

ʻʻಬಿಜೆಪಿಯವರ ಸರ್ಕಾರದಲ್ಲೇ ಹಂಚಿಕೆ ಮಾಡಲಾಗಿದೆ. ಸಿಎಂ ಅವರ ಪತ್ನಿ ಡಿನೋಟಿಫೈ ಮಾಡಿಕೊಳ್ಳದೆ ಪರಿಹಾರ ಪಡೆದಿದ್ದಾರಲ್ಲ ಅದಕ್ಕೆ ಸಂತೋಷ ಪಡಬೇಕು. ಇದರಲ್ಲಿ ತಪ್ಪೇನಿದೆ, ಅವರು ಅರ್ಹರಿದ್ದಾರೆ, ಅದಕ್ಕೆ ತೆಗೆದುಕೊಂಡಿದ್ದಾರೆ. ಇದು ಭ್ರಷ್ಟಾಚಾರ ಹೇಗಾಗುತ್ತದೆʼʼ ಎಂದು ಡಿಕೆಶಿ ಮರುಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ʻʻಇದು ಬಿಜೆಪಿಯವರ ಕಾಲದಲ್ಲಿ ಆಗಿದ್ದು. 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಿನಲ್ಲಿದೆ. ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕುಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ," ಎಂದು ಶಿವಕುಮಾರ್‌ ಹೇಳಿದರು.

ʻʻಕಾನೂನು ಪ್ರಕಾರ 50:50 ಅನುಪಾತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿದೆ. ಆದರೆ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೆ ಆಯ್ತು. ಅದಕ್ಕೆ ಮುಡಾದವರು ನಿಮಗೆ 50:50 ಅನುಪಾತದಲ್ಲಿ ಜಮೀನು ಕೊಡುತ್ತೇವೆ ಎಂದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ? ಕಾನೂನಿನ ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆʼ ಮುಖ್ಯಮಂತ್ರಿ ತಿಳಿಸಿದ್ದಾರೆ.

Read More
Next Story