
ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು
ಬೆಂಗಳೂರಿನ ಫುಟ್ಪಾತ್ಗೆ ನೆದರ್‌ಲ್ಯಾಂಡ್ಸ್ ನಾಗರಿಕರ ಫಿದಾ; 'ಪ್ರಾಜೆಕ್ಟ್ ವಾಕಲೂರು' ಯಶಸ್ವಿ!
ನಗರದಲ್ಲಿ ಇದೇ ಮೊದಲ ಬಾಶರಿಗೆ ಪಾದಚಾರಿಗಳ ಸುರಕ್ಷತೆಗಾಗಿ ಬೆಸ್ಕಾಂ ತಂಡ ವಿದ್ಯುತ್ ಕಂಬಗಳ ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ಸ್ವಿಚ್‌ಗಳ ಎತ್ತರವನ್ನು ಹೆಚ್ಚಿಸಿರುವುದು ನಡಿಗೆಯ ವೇಳೆ ಕಂಡುಬಂದಿತು.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ನಮ್ಮ ದೇಶಕ್ಕಿಂತ ಉತ್ತಮವಾಗಿ, ಸುಗಮವಾಗಿ ನಡೆಯಲು ಸಹಕಾರಿಯಾಗಿವೆ. ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಪಾಡಲಾಗಿದ್ದು ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ ಎಂದು ನೆದರ್‌ಲ್ಯಾಂಡ್ಸ್ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ(ಜ.10) ಉತ್ತರ ನಗರ ಪಾಲಿಕೆಯ ಕಮ್ಮನಹಳ್ಳಿ ಹಾಗೂ ಕಲ್ಯಾಣ ನಗರ ಪ್ರದೇಶದಲ್ಲಿ "ಪ್ರಾಜೆಕ್ಟ್ ವಾಕಲೂರು" ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐದು ಕಿ.ಮೀ ನಡಿಗೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲು ಪಾದಾಚಾರಿ ಮಾರ್ಗದಲ್ಲಿ 25 ಅಡೆತಡೆಗಳು ಎದುರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೋ ಒಂದು ಕಡೆ ಮಾತ್ರ ತಡೆ ಉಂಟಾಗಿದ್ದು, ಐದು ಕಿ.ಮೀ. ನಡಿಗೆ ಉತ್ತಮವಾಗಿತ್ತು ಎಂದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ "ಪ್ರಾಜೆಕ್ಟ್ ವಾಕಲೂರು" ನಡಿಗೆಗೆ ಹಸಿರು ನಿಶಾನೆ ತೋರಿದರು. ಈ ಐದು ಕಿ.ಮೀ. ನಡಿಗೆ ಕಾರ್ಯಕ್ರಮದಲ್ಲಿ ಆಯುಕ್ತರು ಹಾಗೂ ಜಂಟಿ ಆಯುಕ್ತರು 120ಕ್ಕೂ ಹೆಚ್ಚು ನಡಿಗೆದಾರರ ಜೊತೆ ಹೆಜ್ಜೆ ಹಾಕಿದರು. ಸ್ಥಳೀಯ ನಿವಾಸಿಗಳ ಜೊತೆಗೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡಿಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಚಿಕ್ಕ ಮಕ್ಕಳಿಂದ ಹಿಡಿದು 80 ವರ್ಷದ ವಯೋ ವೃದ್ಧರು ಪೂರ್ತಿ ಮಾರ್ಗವನ್ನು ಪೂರ್ಣಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉತ್ತರ ಪಾಲಿಕೆಯ ಕಮ್ಮನಹಳ್ಳಿಯಲ್ಲಿ ನಡೆದ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೆದರ್‌ಲ್ಯಾಂಡ್ ನಾಗರಿಕರು.
ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 34 ಕಿ.ಮೀ ನಡಿಗೆ ಪೂರ್ಣ
ಫುಟ್ಪಾತ್ ವಾಕ್‌ನೊಂದಿಗೆ ಬೆಂಗಳೂರು ನಗರದಲ್ಲಿ ವಾಕಲೂರು ಯೋಜನೆಯಡಿ ಒಟ್ಟಾರೆಯಾಗಿ 72 ಕಿ.ಮೀ. ಪಾದಚಾರಿ ಮಾರ್ಗದ ನಡಿಗೆಯನ್ನು ಪೂರ್ಣಗೊಳಿಸಾಲಾಗಿದ್ದು, ಅದರಲ್ಲಿ ಈಗಾಗಲೇ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬಾಣಸವಾಡಿಯಲ್ಲಿ 5 ಕಿ.ಮೀ., ಥಣಿಸಂದ್ರದಲ್ಲಿ 7 ಕಿ.ಮೀ., ಯಲಹಂಕದಲ್ಲಿ 10 ಕಿ.ಮೀ. ಮತ್ತು ಹೆಬ್ಬಾಳದ ಆರ್‌ಟಿ ನಗರದಲ್ಲಿ 7 ಕಿ.ಮೀ., ಹಾಗೂ ಹೊಸ ವರ್ಷದ ಆರಂಭದ ದಿನದಂದು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಜೆ.ಸಿ. ನಗರ ದಿಂದ ಮೇಖ್ರಿ ವೃತ್ತ ಪ್ರದೇಶಗಳಲ್ಲಿ ಪಾದಚಾರಿ ನಡಿಗೆಯನ್ನು ಕೈಗೊಳ್ಳಲಾಗಿತ್ತು. ಇಂದಿನ 5.2 ಕಿ.ಮೀ. ಸೇರಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 34 ಕಿ.ಮೀ ಪಾದಚಾರಿ ನಡಿಗೆ ಪೂರ್ಣಗೊಂಡಂತಾಗಿದೆ.
ಪಾದಚಾರಿಗಳ ಸುರಕ್ಷತೆಗೆ ಆದ್ಯತೆ
ಪಾದಚಾರಿಗಳ ಸುರಕ್ಷತೆಗಾಗಿ ಬೆಸ್ಕಾಂ ತಂಡ ವಿದ್ಯುತ್ ಕಂಬಗಳ ಟ್ರಾನ್ಸ್‌ಫಾರ್ಮರ್‌ಗಳಲ್ಲಿನ ಸ್ವಿಚ್‌ಗಳ ಎತ್ತರವನ್ನು ಹೆಚ್ಚಿಸಿರುವುದು ನಡಿಗೆಯ ವೇಳೆ ಕಂಡುಬಂದಿತು. ಇದು ಇಡೀ ಬೆಂಗಳೂರಿನಲ್ಲಿ ಮೊದಲ ಬಾರಿ ಮಾಡಲಾಗಿದ್ದು, ಹಿಂದಿನ ನಡಿಗೆಗಳಲ್ಲಿ ಇಂತಹ ಅಡೆತಡೆಗಳ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಬೆಸ್ಕಾಂ ಸಿಬ್ಬಂದಿಗಳ ಕೆಲಸವನ್ನು ಇಂದಿನ ವಾಕಲೂರು ನಡಿಗೆಯ ವೇಳೆ ನಾಗರಿಕರು ಗುರುತಿಸಿ ಸಂತಸ ವ್ಯಕ್ತಪಡಿಸಿದರು.
ವಾಕಲೂರು ಯೋಜನೆಯ ಸಂಯೋಜಕ ಅರುಣ್ ಪೈ ಮಾತನಾಡಿ, 9ನೇ ಆವೃತ್ತಿಯ ಫುಟ್ಪಾತ್ ವಾಕ್ 5 ಕಿ.ಮೀ ಕ್ರಮಿಸಿತು. ಯೋಜನೆ ಅಡಿ ಇಲ್ಲಿಯವರೆಗೆ 72 ಕಿ.ಮೀ ನಡಿಗೆಯನ್ನು ಪೂರೈಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ 100 ಕಿ.ಮೀ ಪೂರೈಸುವ ಉದ್ದೇಶವಿದೆ. ಎಲ್ಲಾ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿಯೂ ಈ ಕಾರ್ಯಕ್ರಮವನ್ನು ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದರು.
ನಡಿಗೆ ವೇಳೆ ಪಾದಚಾರಿ ಮಾರ್ಗವನ್ನು ನಿರ್ಬಂಧಿಸುವ ಪಾರ್ಕ್ ಮಾಡಿದ ಒಂದು ಕಾರು, ಪಾದಚಾರಿ ಅತಿಕ್ರಮಣ ಮಾಡಿರುವ ಒಂದು ದೇವಾಲಯ, ಮೊಕದ್ದಮೆ ಹೂಡಿರುವ ಒಂದು ಆಸ್ತಿ ಹಾಗೂ ಒಂದು ಬೆಸ್ಕಾಂ ಅಡೆತಡೆಗಳ ಎದುರಾಗಿವೆ ಎಂದು ತಿಳಿಸಿದರು.

