Progressives write to CM seeking justice for the most backward nomadic community
x

ಸಿಎಂ ಸಿದ್ದರಾಮಯ್ಯ

ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಿ; ಮುಖ್ಯಮಂತ್ರಿಗೆ ಪ್ರಗತಿಪರರಿಂದ ಪತ್ರ

ನ್ಯಾ. ನಾಗಮೋಹನ್‌ ದಾಸ್‌ ಆಯೋಗವು ಅತಿ ಹಿಂದುಳಿದ 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ʼಎʼಎಂದು ವರ್ಗೀಕರಿಸಿ ಶೇ 1 ರಷ್ಟು ಒಳ ಮೀಸಲಾತಿ ಕಲ್ಪಿಸಿತ್ತು. ಈಗ ಆ ಜಾತಿಗಳನ್ನು ಸ್ಪೃಶ್ಯ ಜಾತಿಗಳಿಗೆ ಸೇರಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.


ಅತಿ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ನ್ಯಾ.ನಾಗಮೋಹನ್‌ ದಾಸ್‌ ಆಯೋಗ ನೀಡಿದಂತೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ, ಮೀಸಲಾತಿ ಒದಗಿಸಬೇಕೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಸೇರಿದಂತೆ 270 ಕ್ಕೂ ಹೆಚ್ಚು ಪ್ರಗತಿಪರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ 6,6,5 ರಂತೆ ಒಳ ಮೀಸಲಾತಿ ನಿಗದಿಪಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ. ಹಿಂದುಳಿದ ಅಲೆಮಾರಿಗಳನ್ನು ಪ್ರಬಲ ಜಾತಿಗಳಾದ ಲಂಬಾಣಿ, ಭೋವಿ ಸಮುದಾಯಗಳಿರುವ ಗುಂಪಿಗೆ ಸೇರಿಸುವ ಮೂಲಕ ಅನ್ಯಾಯ ಎಸಗಿದೆ. ಕೂಡಲೇ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಗುಂಪು ಮಾಡಿ, ಮೀಸಲಾತಿ ನೀಡಬೇಕು ಮನವಿ ಮಾಡಿದ್ದಾರೆ.

ಈಗಾಗಲೇ ಅಲೆಮಾರಿ ಸಮುದಾಯ ಪ್ರತಿಭಟನೆ ಹಾದಿ ತುಳಿದಿದೆ. ಪರಿಶಿಷ್ಟ ಜಾತಿಯ ಎಡಗೈ, ಬಲಗೈ ಸಮುದಾಯಗಳು ಸೇರಿ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಅಲೆಮಾರಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?

ಹಿಂದುಳಿದಿರುವ ಸಮುದಾಯಗಳ ಬಗ್ಗೆ ನೀವು ತೋರಿದ ಕಾಳಜಿ ಶ್ಲಾಘನೀಯ. ತಾವು ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಾಗಲೂ ಸಮುದಾಯಗಳ ಬಗ್ಗೆ ನಿರಂತರ ಕಾಳಜಿ ತೋರಿಸಿದ್ದೀರಿ. ಒಳ ಮೀಸಲಾತಿ ಕುರಿತ ಮೂರು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿದ್ದೀರಿ, ಅದು ನಿಮ್ಮ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ.

ನ್ಯಾ.ನಾಗಮೋಹನ್‌ದಾಸ್ ವರದಿ ಆಧರಿಸಿ ತಾವು ಸಚಿವ ಸಂಪುಟದಲ್ಲಿ ಪ್ರವರ್ಗ ಎ, ಪ್ರವರ್ಗ ಬಿ ಹಾಗು ಪ್ರವರ್ಗ ಸಿ ಎಂದು ವಿಭಾಗಿಸಿ ಅವರವರ ಸಾಮಾಜಿಕ ಸ್ಥಿತಿಗತಿ ಮತ್ತು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಿದ್ದೀರಿ. ಈ ವಿಷಯವನ್ನು ಸದನದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದೀರಿ. ಇದು ವೈಜ್ಞಾನಿಕವಾದ ಮತ್ತು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಕೊಡಮಾಡುವ ಮುಂದಾಲೋಚನೆಯ ಕ್ರಮವಾಗಿದೆ. ಆದರೆ, ಆಯೋಗವು ಅತಿ ಹಿಂದುಳಿದವರೆಂದು ಗುರುತಿಸಿದ್ದ 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ʼಎʼಎಂದು ವರ್ಗೀಕರಿಸಿ ಶೇ 1 ರಷ್ಟು ಒಳ ಮೀಸಲಾತಿಯನ್ನು ಕಲ್ಪಿಸಲು ಶಿಫಾರಸ್ಸು ಮಾಡಿತ್ತು. ತಾವು ಇದನ್ನು ಪ್ರವರ್ಗ ʼಸಿʼಗೆ ಸೇರಿಸುವ ಮೂಲಕ ಈ ಸಮುದಾಯಗಳಿಗೆ ಘೋರ ಅನ್ಯಾಯವೆಸಗಿದ್ದೀರಿ. ಈ ತಬ್ಬಲಿ ಸಮುದಾಯಗಳನ್ನು ಗುರುತಿಸಿರುವ ವಿಧಾನ ಹಾಗೂ ವರ್ಗೀಕರಣ ಸಮರ್ಥನೀಯವಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರ ಅವಕಾಶ ವಂಚಿತ ಸಮುದಾಯವನ್ನು ಮತ್ತಷ್ಟು ಅವಕಾಶಗಳಿಂದ ವಂಚಿಸಲಿದೆ. ಈ ತಳಸ್ತರದ ಜನರಿಗೆ ನ್ಯಾಯ ದೊರೆತಾಗ ಮಾತ್ರ ಸಾಮಾಜಿಕ ನ್ಯಾಯದ ಆಶಯ ಈಡೇರಲು ಸಾಧ್ಯ ಎಂದಿದ್ದಾರೆ.

ಭಿಕ್ಷೆ ಬೇಡಿ ಬದುಕು ಕಟ್ಟಿಕೊಳ್ಳುವ ಸ್ಥಿತಿ

ಅಲೆಮಾರಿ ಸಮುದಾಯಗಳನ್ನು ಮುಂದುವರಿದ ಜಾತಿಗಳ ಜೊತೆಗೆ ಸೇರಿಸಿರುವುದು ಸಾಮಾಜಿಕ ನ್ಯಾಯ ಎನಿಸುವುದಿಲ್ಲ. ಈ ಅಲೆಮಾರಿ ಸಮುದಾಯಗಳಿಗೆ ಮೊದಲೇ ಶಿಕ್ಷಣದ ಅರಿವಿಲ್ಲ. ಸಾಮಾಜಿಕ ಆರ್ಥಿಕ ಸಮಾನತೆ ದೂರದ ಮಾತು. ಈ ಸಮುದಾಯಗಳು ತಮ್ಮ ಬದುಕಿಗಾಗಿ ಹಲವು ವೇಷಗಳನ್ನು ಧರಿಸಿ ಬೀದಿಯಲ್ಲಿ ಭಿಕ್ಷೆ ಬೇಡುತಾ ಬದುಕನ್ನು ಕಟ್ಟಿಕೊಳ್ಳಲು ಊರಿಂದ ಊರಿಗೆ ತಿರುಗುವ ಪರಿಸ್ಥಿತಿ ಇದೆ. ಈ ಸಮುದಾಯಗಳು ಒಂದೆಡೆ ನೆಲೆಗೊಳ್ಳುವ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಅಲೆಮಾರಿಗಳಿಗೆ ಮೊದಲು ಆದ್ಯತೆ ಸಿಗಲಿ

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ, ಶೈಕ್ಷಣಿಕ ಸವಲತ್ತುಗಳಿಲ್ಲದೇ ಉದ್ಯೋಗಗಳನ್ನು ಪಡೆಯದೆ ಅಲೆಯುತ್ತಲೇ ಬದುಕು ಸಾಗಿಸುತ್ತಿದ್ದಾರೆ. ಈ ಸಮುದಾಯಗಳ ಅಭಿವೃದ್ಧಿ ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ . ಈ ಹಿಂದೆ ನಿಮ್ಮ ನಾಯಕತ್ವದಲ್ಲಿಯೇ ಅಲೆಮಾರಿ ಸಮುದಾಯಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಿರಿ ಎಂದು ನೆನಪಿಸಿದ್ದಾರೆ.

ತಳಸಮುದಾಯ ಅಭಿವೃದ್ಧಿಯಿಂದ ರಾಜ್ಯ ಅಭಿವೃದ್ಧಿ ಸಾಧ್ಯ

ಅಲೆಮಾರಿ ಹಾಗೂ ತಳ ಸಮುದಾಯಗಳ ಸಂಸ್ಕೃತಿ, ಆಚರಣೆ, ಬದುಕು ನಮ್ಮ ನಾಡಿನ ಜನಮಾನಸದ ಭಾಗವಾಗಿದೆ. ಅವರು ಬಳಸುವ ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿ ಮತ್ತು ಬದುಕು ನಮ್ಮ ನಾಡಿನ ಅಸ್ಮಿತೆಗೆ ‘ಮೆರುಗು’ ನೀಡುತ್ತದೆ. ಈ ಸಮುದಾಯಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿಯಾಗುತ್ತದೆ. ಇವರ ಬದುಕು ವೈವಿಧ್ಯತೆ ಮತ್ತು ಅಸ್ಮಿತೆಯ ಭಾಗವಾಗಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ‘ಮೆರುಗು’ ತಂದಿದೆ. ಅಲೆಮಾರಿಗಳ ಬದುಕು ಹಸನಾಗಿ ಸುಸ್ಥಿರವಾಗಿದ್ದರೆ ಮಾತ್ರ ಅವರ ಸಂಸ್ಕೃತಿ, ಭಾಷೆ ಮತ್ತು ಆ ಸಮುದಾಯ ಉಳಿಯುತ್ತದೆ. ಈ ಎಲ್ಲವನ್ನೂ ಅರಿತಿರುವ ಸಿಎಂ ಸಿದ್ದರಾಮಯ್ಯ ಅವರು ನ್ಯಾ. ನಾಗಮೋಹನ್‌ದಾಸ್ ಆಯೋಗ ಗುರುತಿಸಿದ್ದಂತೆ 59 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ವರ್ಗವೆಂದು ವಿಂಗಡಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story