ಮಂಡ್ಯ ಸಾಹಿತ್ಯ ಸಮ್ಮೇಳನ | ಕೊನೆಗೂ ಮೊಟ್ಟೆ ವಿತರಿಸಿ ಆಹಾರ ಅಸಮಾನತೆಗೆ ಇತಿಶ್ರೀ ಹಾಡಿದ ಸರ್ಕಾರ
x

ಮಂಡ್ಯ ಸಾಹಿತ್ಯ ಸಮ್ಮೇಳನ | ಕೊನೆಗೂ ಮೊಟ್ಟೆ ವಿತರಿಸಿ ಆಹಾರ ಅಸಮಾನತೆಗೆ ಇತಿಶ್ರೀ ಹಾಡಿದ ಸರ್ಕಾರ

ಮೊದಲ ಎರಡು ದಿನ ಬಾಡೂಟ ಹಂಚಿಕೆಗೆ ಮುಂದಾಗಿರಲಿಲ್ಲ. ಆದರೆ, ಮೂರನೇ ಹಾಗೂ ಕೊನೆಯ ದಿನವಾದ ಭಾನುವಾರ ರಾಜ್ಯ ಸರ್ಕಾರ 25 ಸಾವಿರ ಜನರಿಗೆ ಊಟಕ್ಕೆ ಮೊಟ್ಟೆ ವಿತರಿಸಿ ಆಹಾರ ಅಸಮಾನತೆಗೆ ತಿಲಾಂಜಲಿ ಇಟ್ಟಿದೆ. ಇದಕ್ಕೂ ಮುನ್ನ ವಿವಿಧ ಸಂಘಟನೆಗಳ ಮುಖಂಡರು ಬಾಡೂಟ ಹಂಚಿಕೆ ಮಾಡಿದರು. ಚಿಕನ್‌ ಕಬಾಬ್‌, ರಾಗಿ ಮುದ್ದೆ, ಚಿಕನ್‌ ಸಾರು ಹಾಗೂ ಮೊಟ್ಟೆ ವಿತರಿಸಿದರು


ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ರಾತ್ರಿ ಊಟಕ್ಕೆ ಮೊಟ್ಟೆ ವಿತರಿಸುವ ರಾಜ್ಯ ಸರ್ಕಾರ ಹೊರ ಸಂಪ್ರದಾಯಕ್ಕೆ ನಾಂದಿ ಹಾಡಿತು.

ಸಮ್ಮೇಳನದಲ್ಲಿ ಭಾಗವಹಿಸಿದ್ದ 25 ಸಾವಿರ ಜನರಿಗೆ ಮೊಟ್ಟೆ ವಿತರಣೆ ಮಾಡಲಾಯಿತು. 87 ವರ್ಷಗಳ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿ ಹಿಂದೆಂದೂ ಮೊಟ್ಟೆ ವಿತರಣೆ ಮಾಡಿರಲಿಲ್ಲ. ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರಕ್ಕೂ ಅವಕಾಶ ನೀಡುವಂತೆ ಪ್ರಗತಿಪರರು, ವಿವಿಧ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ದವು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಾಂಸಾಹಾರ ಸೇವಿಸಿ ಬಾಡೂಟ ಮಂಡ್ಯ ನೆಲದ ಆಹಾರ ಸಂಸ್ಕೃತಿ. ಬಾಡೂಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದ್ದವು.

ಆದರೆ, ಜಿಲ್ಲಾಡಳಿತ ಮಾಂಸಾಹಾರ ವಿತರಣೆಗೆ ಅವಕಾಶ ನೀಡಿರಲಿಲ್ಲ. ಈ ಮಧ್ಯೆ ಕೊನೆಯ ದಿನ ಮಧ್ಯಾಹ್ನ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಮಂಡ್ಯ ಬಾಡೂಟ ಬಳಗದ ಪದಾಧಿಕಾರಿಗಳು ಮಾಂಸಾಹಾರ ವಿತರಿಸಿದ್ದರು. ಪೊಲೀಸರು ಮಾಂಸಾಹಾರ ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಸರ್ಕಾರವೇ ರಾತ್ರಿ ಊಟಕ್ಕೆ ಮೊಟ್ಟೆ ವಿತರಿಸುವ ಮೂಲಕ ಆಹಾರ ಸಮಾನತೆಯನ್ನು ಎತ್ತಿಹಿಡಿದಿದೆ.

ಮಾಂಸಾಹಾರ ವಿತರಿಸಿದ ಪ್ರಗತಿಪರ ಸಂಘಟನೆಗಳು

ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆಗೆ ಪಟ್ಟು ಹಿಡಿದಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂವು ಭಾನುವಾರ ಸಮ್ಮೇಳನದ ಊಟದ ಕೌಂಟರ್‌ನಲ್ಲಿಯೇ ಸಾಹಿತ್ಯಾಸಕ್ತರಿಗೆ ಬಾಡೂಟ ಬಡಿಸಿತು. ಬಾಡೂಟ ವಿತರಣೆಯ ವಿಷಯದಲ್ಲಿ ಪೊಲೀಸರು ಹಾಗೂ ಚಿಂತಕರ ನಡುವೆ ವಾಗ್ವಾದವೂ ನಡೆಯಿತು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ನೀಡುವಂತೆ ಆರಂಭದಿಂದಲೇ ಪ್ರಗತಿಪರ ಸಂಘಟನೆಗಳು, ಬಾಡೂಟ ಬಳಗ ಒತ್ತಾಯಿಸಿತ್ತು. ಆದರೆ, ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿರಲಿಲ್ಲ. ಆದಾಗ್ಯೂ ಪ್ರಗತಿಪರರು ಬಾಡೂಟ ಹಂಚಿಕೆಗೆ ನಿರ್ಧರಿಸಿ ಮನೆ ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನ ನಡೆಸಿದ್ದರು.

ಸಮ್ಮೇಳನದ ಮೊದಲ ಎರಡು ದಿನ ಬಾಡೂಟ ಹಂಚಿಕೆಗೆ ಮುಂದಾಗಿರಲಿಲ್ಲ. ಆದರೆ, ಮೂರನೇ ಹಾಗೂ ಕೊನೆಯ ದಿನವಾದ ಭಾನುವಾರ ಸಂಘಟನೆಗಳ ಮುಖಂಡರು ಸೀದಾ ಊಟದ ಕೌಂಟರ್‌ಗೆ ಧಾವಿಸಿ ಬಾಡೂಟ ಹಂಚಿಕೆ ಮಾಡಿದರು. ಚಿಕನ್‌ ಕಬಾಬ್‌, ರಾಗಿ ಮುದ್ದೆ, ಚಿಕನ್‌ ಸಾರು ಹಾಗೂ ಮೊಟ್ಟೆ ವಿತರಿಸಲಾಯಿತು.

ಬಾಡೂಟಕ್ಕೆ ಜನರು ಮುಗಿಬೀಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಪ್ರಗತಿಪರರು, ಸಂಘಟನೆಗಳ ಮುಖಂಡರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

ವಾಗ್ವಾದದ ಬಳಿಕವೂ ಪ್ರಗತಿಪರರು ಸಮ್ಮೇಳನದ ಊಟದ ಕೌಂಟರ್ನಲ್ಲೇ ಮಾಂಸಾಹಾರ ವಿತರಣೆ ಮಾಡಿದರು. ಜನರು ಮಾಂಸದೂಟಕ್ಕೆ ಮುಗಿಬಿದ್ದಿದ್ದರು. ಆಗ ಪೊಲೀಸರು ಮಾಂಸದೂಟ ವಶಕ್ಕೆ ಪಡೆದುಕೊಂಡರು.

ಸಮ್ಮೇಳನದ ಎರಡನೇ ದಿನವಾದ ಶನಿವಾರವೂ ಪ್ರಗತಿಪರರು ಬಾಡೂಟ ಸವಿದಿದ್ದಾರೆ ಎಂದು ತಿಳಿದುಬಂದಿದೆ. ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತರು ಬಾಡೂಟ ಹಂಚಿಕೆಯನ್ನು ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ.

Read More
Next Story