
ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದರು
ಸಿದ್ದರಾಮಯ್ಯ ಬಜೆಟ್ ಮಂಡನೆಗೆ ರಾಹುಕಾಲ ನೋಡಿದರೆ? ಚರ್ಚೆಗೆ ಕಾರಣವಾದ ಅವರ ನಡೆ
ತಮ್ಮ 15ನೇ ಬಜೆಟ್ ಅಂದರೆ, 2024ರ ಫೆಬ್ರವರಿ 16ರಂದು ಮಂಡಿಸಿದ ಬಜೆಟ್ ಕೂಡಾ ರಾಹುಕಾಲಕ್ಕೆ ಮುನ್ನವೇ ನಿಗದಿಯಾಗಿತ್ತು ಎನ್ನಲಾಗಿದೆ. ಈ ಬಾರಿಯೂ ಅದೇ ಸಂಪ್ರದಾಯವನ್ನು ಅವರು ಪಾಲಿಸಿ 16ನೆ ದಾಖಲೆಯ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೆಯ ಬಜೆಟ್ ಮಂಡಿಸಿದ್ದಾರೆ. ತಮ್ಮ ಮಂಡಿ ನೋವಿನ ನಡುವೆಯೂ, ವಿವಿಧ ಇಲಾಖೆಗಳು, ವಲಯಗಳು ಹಾಗೂ ವಿಷಯತಜ್ಞರ ಸಲಹೆ, ವರದಿ ಪಡೆದು, ದಾಖಲೆಯ ಬಜೆಟ್ ಮಂಡಿಸಿದ ಅನುಭವ ಧಾರೆ ಎರೆದು 2025ರ ಸಾಲಿನ ಬಜೆಟ್ ಸಿದ್ಧಪಡಿಸಿದ್ದಾರೆ.
ಆದರೆ, ಮೂಢನಂಬಿಕೆ ವಿರೋಧಿ ನಿಲುವನ್ನು ತಮ್ಮ ಸುದೀರ್ಘ ರಾಜಕೀಯ ಅನುಭವದಲ್ಲಿ ಪ್ರದರ್ಶಿಸುತ್ತಾ ಜನಮೆಚ್ಚುಗೆ ಪಡೆಸಿದ್ದ ಸಮಾಜವಾದಿ ಸಿದ್ದರಾಮಯ್ಯ, ಬಜೆಟ್ ಮಂಡನೆ ಮುನ್ನ ರಾಹುಕಾಲದ ಮೊರೆ ಹೋಗಿದ್ದಾರೆಯೆ? ಹೌದೆನ್ನುತ್ತವೆ ಮೂಲಗಳು.
ತಮ್ಮ 15ನೇ ಬಜೆಟ್ ಅಂದರೆ, 2024ರ ಫೆಬ್ರವರಿ 16ರಂದು ಮಂಡಿಸಿದ ಬಜೆಟ್ ಕೂಡಾ ರಾಹುಕಾಲಕ್ಕೆ ಮುನ್ನವೇ ನಿಗದಿಯಾಗಿತ್ತು ಎನ್ನಲಾಗಿದೆ. ಈ ಬಾರಿಯೂ ಅದೇ ಸಂಪ್ರದಾಯವನ್ನು ಅವರು ಪಾಲಿಸಿ 16ನೆ ದಾಖಲೆಯ ಬಜೆಟ್ ಮಂಡಿಸಿದ್ದಾರೆ.
ದೇವರ ಬಗ್ಗೆ, ನಿರೀಶ್ವರವಾದದ ಬಗ್ಗೆ, ನಾಸ್ತಿಕ ವಾದದ ಬಗ್ಗೆ ಆಗಾಗ ಭಾಷಣ ಮಾಡುತ್ತಾ, ʼಪ್ರಗತಿಪರ"ರಾಗಿ ಕಂಗೊಳಿಸುತ್ತಿದ್ದ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ ಮಂಡನೆಯ ಸಮಯ ಬದಲಾವಣೆ ಮಾಡಿರುವುದು ಈಗ ಟೀಕೆಗೆ ಒಳಗಾಗಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು 11 ಗಂಟೆಗೆ ಬಜೆಟ್ ಅಧಿವೇಶನ ಆರಂಭಿಸಬೇಕಿತ್ತು. ಆದರೆ, ರಾಹುಕಾಲ ೧ಗೆ ಆರಂಭವಾಗುವುದರಿಂದ ಅದಕ್ಕಿಂತ ಮುನ್ನವೇ ಅಂದರೆ 10.30 ಬಜೆಟ್ ಮಂಡನೆ ಸಮಯವನ್ನು ಬದಲಾಯಿಸಲಾಯಿತು ಎನ್ನಲಾಗಿದೆ.
ಈ ಬಗ್ಗೆ ಲೇಖಕ ಹಾಗೂ ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. "ಸಂವಿಧಾನದ 51ಎ(ಎಚ್) ವಿಧಿ ಪ್ರಕಾರ ನಾಗರಿಕರು ಪಾಲಿಸಬೇಕಾದ ಮೂಲಭೂತ ಬಾಧ್ಯತೆಗಳಲ್ಲಿ 'ವೈಜ್ಞಾನಿಕ ಮನೋಭಾವ' ಕೂಡ ಸೇರಿದೆ.
ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ "ಅವೈಜ್ಞಾನಿಕ ಮನೋಭಾವ" ಸಂವಿಧಾನದ ಆಶಯದ ನೈತಿಕ ಉಲ್ಲಂಘನೆ ಎನ್ನಿಸಿಕೊಳ್ಳುತ್ತದೆ! ಸಮಾಜವಾದಿ ಸಿದ್ದರಾಮಯ್ಯ ಬರುಬರುತ್ತಾ ಸನಾತನವಾದದತ್ತ ಸಾಗುತ್ತಿದ್ದಾರಾ...?!" ಎಂದವರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ, ಕರ್ನಾಟಕದಲ್ಲಿ ವಿವಾದಿತ ಮೂಢನಂಬಿಕೆ ನಿರ್ಮೂಲನೆ ಕಾಯಿದೆಯನ್ನು ಜಾರಿಗೆ ತರಲು ಸಿದ್ದರಾಮಯ್ಯ ಅವರೇ ಕಾರಣಕರ್ತರಾಗಿದ್ದರು. ಅವರು ಮೊದಲನೆ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ಅಂದರೆ, ೨೦೧೭ರಲ್ಲಿ "ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮಾಟಮಂತ್ರ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಮಸೂದೆ, 2017" ಎಂಬ ಹೆಸರಿನಲ್ಲಿ ವಿಧಾನಸಭೆಯಲ್ಲಿ ಅಂಗೀಕೃತವಾಗಿತ್ತು. ಜತೆಗೆ, ಸಿದ್ದರಾಮಯ್ಯ ಅವರು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಆದ ಬಳಿಕವೂ ಭೇಟಿಯಾಗಿ, "ಆ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ," ಎಂಬ ಮೂಢನಂಬಿಕೆಯನ್ನು ತೊಡೆದುಹಾಕಿದ್ದರು.
ಕೇರಳದ ಗುರವಾಯೂರು ದೇವಳದಲ್ಲಿ ಅಂಗಿ ಕಳಚಿ ದೇವರ ದರ್ಶನ ಮಾಡಬೇಕೆಂಬ ನಂಬಿಕೆಯನ್ನು ಅವರು ವಿರೋಧಿಸಿ ದರ್ಶನಕ್ಕೇ ತೆರಳದೆ ಬುದ್ಧಿಜೀವಿಗಳ ವಲಯದಲ್ಲಿ ಪ್ರಶಂಸೆಪಡೆದ್ದರು. ಆದರೆ, ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ, ಧರ್ಮಸ್ಥಳ ದೇವಾಲಯಕ್ಕೆ ಭೇಟಿ ಸಂದರ್ಭದಲ್ಲಿ ಅಂಗಿ ಕಳಚಿ ದೇವರ ದರ್ಶನ ಮಾಡಿದ್ದರು. ಈಗ ರಾಹುಕಾಲಕ್ಕಾಗಿ ಬಜೆಟ್ ಮಂಡನೆ ಸಮಯುವನ್ನೇ ಬದಲಾಯಿಸಿರುವುದು ನಿಜವಾಗಿದ್ದರೆ, ಅವರು ಸಿದ್ಧಾಂತಗಳು ಎಲ್ಲಿ ಹೋದವು ಎಂಬ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ.
ಚಂದ್ರಕಾಂತ ವಡ್ಡು ಅವರು, " ನಮ್ಮ 'ಸಮಾಜವಾದಿ ಮುಖ್ಯಮಂತ್ರಿ'ಗೆ ಮನವರಿಕೆ ಮಾಡುವ, ಪ್ರೇರೇಪಿಸುವ, ಆಗ್ರಹಿಸುವ ಕರ್ತವ್ಯವನ್ನು ಪ್ರಗತಿಪರ ಚಿಂತಕರ ಬಳಗ ನಿರ್ವಹಿಸಬೇಕಿದೆ," ಎಂದು ವಿಶ್ಲೇಷಿಸಿದ್ದಾರೆ.
೨೦೨೪ರಲ್ಲಿ ಸಿದ್ದರಾಮಯ್ಯ ರಾಹುಕಾಲ ಆರಂಭವಾಗುವುದಕ್ಕೆ ಮುನ್ನ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಬಿಜೆಪಿ ನಾಯಕ, ಹಾಗೂ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, "ಮುಖ್ಯಮಂತ್ರಿಗಳ "ರಾಹುಕಾಲ" ನಂಬಿಕೆ. ಬೇರೆಯವರ ನಂಬಿಕೆ ಕುರಿತು ಪಾಠ ಹೇಳುವುದು, ಕುಟುಕುವುದು, ವ್ಯಂಗ್ಯ ಮಾಡುವುದು ಸುಲಭ, ಅಲ್ಲವೇ ಮುಖ್ಯಮಂತ್ರಿಗಳೇ?" ಎಂದು ವ್ಯಂಗ್ಯವಾಡಿದ್ದರು.