
Karnataka Budget 2025 | ದೀರ್ಘಾಕಾಲೀನ ಬದಲಾವಣೆಗೆ ಮುನ್ನುಡಿ ಬರೆದ ಬಜೆಟ್ ಘೋಷಣೆಗಳು
ʼಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಆಶಯದಂತೆ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಕೆಲ ಘೋಷಣೆಗಳು ವಿವಿಧ ವರ್ಗಗಳಿಗೆ ದೀರ್ಘಾವಧಿಯಲ್ಲಿ ಸುಧಾರಣೆಯ ಹಾದಿ ತೆರೆಯಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 16ನೇ ಬಜೆಟ್‌ನಲ್ಲಿ ಯಾವುದೇ ದೊಡ್ಡ ಯೋಜನೆಗಳ ಘೋಷಣೆ ಇಲ್ಲದಿದ್ದರೂ ಸಮುದಾಯಗಳಲ್ಲಿ ಕ್ರಮೇಣ ದೊಡ್ಡ ಬದಲಾವಣೆಗೆ ಕಾರಣವಾಗಬಹುದಾದಂತಹ ದೂರದೃಷ್ಟಿಯ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ.
ʼಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಆಶಯದಂತೆ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಕೆಲ ಘೋಷಣೆಗಳು ವಿವಿಧ ವರ್ಗಗಳಿಗೆ ಅನುಕೂಲಕರವಾಗಿ ಪರಿಣಮಿಸಿವೆ. ಹಾಗಾದರೆ ಸಿಎಂ ಘೋಷಿಸಿರುವ ಕಾರ್ಯಕ್ರಮಳ ಯಾವ ರೀತಿ ಪರಿಣಾಮ ಬೀರಲಿವೆ ಎಂಬ ವರದಿ ಇಲ್ಲಿದೆ.
ರೈತರಿಗೆ ವರವಾದ ಕೃಷಿ ಹೊಂಡ
ರಾಜ್ಯಾದ್ಯಂತ 12 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಮಹತ್ವದ ಘೋಷಣೆ ಗ್ರಾಮೀಣ ಭಾಗದ ಸಾವಿರಾರು ರೈತರಿಗೆ ವರದಾನವಾಗಲಿದೆ. -
ಈಗಾಗಲೇ ರಾಜ್ಯವ್ಯಾಪಿ 3 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಬೇಸಿಗೆಯಲ್ಲಿ ರೈತರ ನೀರಿನ ಬವಣೆ ನೀಗಿಸುತ್ತಿವೆ. ಮಳೆಗಾಲದಲ್ಲಿ ನೀರು ಸಂಗ್ರಹಿಸಿ, ಬೇಸಿಗೆಯಲ್ಲಿ ಬೆಳೆ ಬೆಳೆಯಲು ಕೃಷಿಹೊಂಡಗಳು ಅನುಕೂಲಕರವಾಗಿವೆ. ಸಿಎಂ ಸಿದ್ದರಾಮಯ್ಯ ಅವರು ಮತ್ತೆ 12ಸಾವಿರ ಹೆಚ್ಚುವರಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಈ ಬಜೆಟ್‌ನಲ್ಲಿ ಒತ್ತು ನೀಡಿರುವುದು ರೈತರಿಗೆ ಪಾಲಿಗೆ ವರದಾನವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬೆಳೆಗಳ ನೈಜ ಸಮಯದ ಮಾಹಿತಿ
ತೋಟಗಾರಿಕಾ ಬೆಳೆಗಳ ಕುರಿತು ನೈಜ ಸಮಯದ (Real Time) ಆಧಾರದ ಮೇಲೆ ಮಾಹಿತಿ ಒದಗಿಸಲು ಜ್ಞಾನಕೋಶ ಯೋಜನೆಯು ಬೆಳೆಗಾರರಿಗೆ ಅನುಕೂಲವಾಗಿದೆ.
ಬೆಳೆಗಳು, ಮಾರುಕಟ್ಟೆ, ಬೆಳೆ ನಿರ್ವಹಣೆ, ಮಳೆ ಮಾರುತ ಇತ್ಯಾದಿ ವಿಚಾರಗಳ ಕುರಿತು ಕಾಲಕಾಲಕ್ಕೆ ಅಗತ್ಯ ಮಾಹಿತಿ ಒದಗಿಸುವುದು ಬೆಳೆ ರಕ್ಷಣೆ ಸಾಧ್ಯವಾಗಲಿದೆ. ಆ ಮೂಲಕ ತೋಟಗಾರಿಕಾ ಉತ್ಪಾದನೆ ಹೆಚ್ಚಲಿದೆ. ಈಗಾಗಲೇ ತೋಟಗಾರಿಕಾ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ʼಜ್ಞಾನಕೋಶʼ ಸೌಲಭ್ಯ ಪರಿಣಾಮಕಾರಿಯಾಗಿ ದೊರೆತರೆ ಉತ್ಪಾದನೆ ಇನ್ನಷ್ಟು ಹೆಚ್ಚಲಿದ್ದು, ರೈತರು ಆರ್ಥಿಕವಾಗಿ ಸಬಲರಾಗಬಹುದಾಗಿದೆ.
ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ
ಮೈಸೂರು ಭಾಗದ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡಲು ನಬಾರ್ಡ್ ಸಹಯೋಗದಲ್ಲಿ ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ರೈತರ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ರೇಷ್ಮೆ ಕೃಷಿಯೂ ಹೆಚ್ಚಲಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ.
ಪ್ರಸ್ತುತ ಮೈಸೂರು ಸುತ್ತಮುತ್ತಲಿನ ರೇಷ್ಮೆ ಬೆಳೆಗಾರರು ಗೂಡು ಮಾರಾಟಕ್ಕಾಗಿ ರಾಮನಗರ ರೇಷ್ಮೆ ಮಾರುಕಟ್ಟೆಗೆ ಬರಬೇಕಾಗಿದೆ. ಇದರಿಂದ ಸಾಗಣೆ ಸೇರಿದಂತೆ ಇತರೆ ವೆಚ್ಚಗಳು ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸಿವೆ.
ʼಅಕ್ಕ ಕೆಫೆʼ ಕ್ಯಾಂಟೀನ್ ಆರಂಭ
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗಾಗಿ ಅಕ್ಕ ಕೋ-ಆಪರೇಟಿವ್ ಸೊಸೈಟಿ, ಅಕ್ಕ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಕುರಿತು ಘೋಷಣೆ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಅಕ್ಕ ಕ್ಯಾಂಟೀನ್‌ಗಳನ್ನು ಸ್ಥಾಪಿಸುವುದರಿಂದ ಸಾವಿರಾರು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಲಿದೆ. ಜೊತೆಗೆ ಅಕ್ಕ ಕೋ-ಆಪರೇಟಿವ್ ಸೊಸೈಟಿಗಳ ಆರಂಭದಿಂದ ಗೃಹಲಕ್ಷ್ಮಿ ಯೋಜನೆಯ ಹಣ ಉಳಿಸಿ, ಕುಟುಂಬದ ಅಗತ್ಯಗಳಿಗೆ ಬಳಕೆಯಾಗಲಿದೆ. ಇದರಿಂದ ಸಂಸಾರ ನಿರ್ವಹಣೆ ಸುಲಭವಾಗಲಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಬಲತುಂಬಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಮೀನುಗಾರರಿಗೆ ನೆರವು
ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಬಳಸುತ್ತಿರುವ 15ವರ್ಷಗಳಿಗಿಂತ ಹಳೆಯ ಮೋಟರ್ ದೋಣಿಗಳಿಗೆ ಹೊಸ ಎಂಜಿನ್ ಖರೀದಿಸಲು ರಾಜ್ಯ ಸರ್ಕಾರ ಶೇ 50ರಷ್ಟು ಸಹಾಯಧನವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಸಾವಿರಾರು ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದು, ಸಹಾಯಧನದಲ್ಲಿ ಎಂಜಿನ್ ವಿತರಿಸುವುದರಿಂದ ಅನುಕೂಲವಾಗಲಿದೆ. ಮತ್ಸೋದ್ಯಮ ಕೂಡ ಬೆಳವಣಿಗೆ ಕಾಣಲಿದೆ ಎಂದು ಹೇಳಲಾಗಿದೆ.
500 ಕರ್ನಾಟಕ ಪಬ್ಲಿಕ್ ಶಾಲೆ
ರಾಜ್ಯದಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುಸಿ ವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ವಿಸ್ತರಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದರಿಂದ ಸಹಸ್ರಾರು ಸಂಖ್ಯೆ ಬಡ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ವಿದ್ಯಾಭ್ಯಾಸ ದೊರೆಯಲಿದೆ. ಈ 500 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,500 ಕೋಟಿ ರೂ. ನೆರವು ಒದಗಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಇನ್ನು ಮುಂದೆ ವಾರದಲ್ಲಿ ಆರು ದಿನಕ್ಕೆ ವಿಸ್ತರಣೆ ಮಾಡಿ ಘೋಷಿಸಲಾಗಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ʼಅಕ್ಷರ ಆವಿಷ್ಕಾರʼ ಯೋಜನೆಯಡಿ 200 ಕೋಟಿ ರೂ. ವೆಚ್ಚದಲ್ಲಿ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪರಿಶಿಷ್ಟರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ
ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೊಂದರಂತೆ ಒಟ್ಟು 31 ವಸತಿ ಶಾಲೆ, ಪಿಯು ಕಾಲೇಜುಗಳನ್ನು ಉನ್ನತೀಕರಿಸಲು ಸರ್ಕಾರ ನಿರ್ಧರಿಸಿದೆ.
ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 26 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಪರಿಶಿಷ್ಟ ಜಾತಿಯ 40, ಪರಿಶಿಷ್ಟ ಪಂಗಡದ ಏಳು ಹಾಗೂ ಹಿಂದುಳಿದ ವರ್ಗಗಳ 14 ವಸತಿ ಶಾಲೆ ಸೇರಿದಂತೆ ನಿವೇಶನ ಲಭ್ಯವಿರುವ ಒಟ್ಟು 61 ವಸತಿ ಶಾಲೆಗಳಿಗೆ 1,292 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸುವುದಾಗಿ ಸಿಎಂ ಘೋಷಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಧ್ಯಯನ ಮಾಡಿರುವ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಫ್ ಯೋಜನೆಯಡಿ ಒಂದು ಕೋಟಿ ಅನುದಾನ ಒದಗಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ
ರಾಜ್ಯದ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸಲು ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಅಲ್ಲದೇ ಅರಣ್ಯದಂಚಿನ ಹಾಡಿಗಳಲ್ಲಿ ವಾಸವಿರುವ ಸೋಲಿಗ, ಜೇನುಕುರುಬ, ಹಲಸರು, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯಾ, ಕಾಡುಕುರುಬ, ಇರುಳಿಗ, ಕೊರಗ, ಬೆಟ್ಟ ಕುರುಬ, ಯರವ, ಪಣಿಯನ್ ಸೇರಿದಂತೆ ಇತರೆ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯ ಕಲ್ಪಿಸಲು 200 ಕೋಟಿ ಅನುದಾನ ಘೋಷಿಸಲಾಗಿದೆ.