ದರ್ಶನ್‌ ಬಂಧನ; ನೂರು ಕೋಟಿ ಹೂಡಿದ ನಿರ್ಮಾಪಕರು ಕಂಗಾಲು?
x

ದರ್ಶನ್‌ ಬಂಧನ; ನೂರು ಕೋಟಿ ಹೂಡಿದ ನಿರ್ಮಾಪಕರು ಕಂಗಾಲು?

ಸದ್ಯಕ್ಕೆ ದರ್ಶನ್‌ ಅವರು ತಮ್ಮ ʻಡೆವಿಲ್-ದ ಹೀರೋʼ ಚಿತ್ರದ ಚಿತ್ರೀಕರಣ ನಡೆದಿದೆ. ದರ್ಶನ್‌ ಬಂಧನದಿಂದ ಚಿತ್ರ ಬಿಡಗಡೆಗೆ ತೊಂದರೆಯಾಗುವುದು ಬಹುತೇಕ ಖಚಿತ! ಇನ್ನು ಕೆಲವು ನಿರ್ಮಾಪಕರು ದರ್ಶನ್‌ ಕಾಲ್‌ಶೀಟ್‌ ಪಡೆದುಕೊಂಡಿದ್ದು, ಮುಂಗಡ ಹಣವನ್ನು ಕೊಟ್ಟಿದ್ದಾರೆನ್ನಲಾಗಿದೆ. ದರ್ಶನ್‌ ಅವರ ಮೇಲೆ ಹೂಡಿರುವ ಬಂಡವಾಳದ ಒಟ್ಟು ಮೊತ್ತ ನೂರು ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.


ಮಂಗಳವಾರ ಕನ್ನಡ ಚಿತ್ರರಂಗಕ್ಕೆ ಶುಭ ದಿನಗಳಂತೆ ಕಾಣುತ್ತಿಲ್ಲ. ಮೈಕೊಡವಿಕೊಂಡು ಚಿತ್ರಮಂದಿರಗಳ ಬಾಗಿಲು ತೆರೆಯುವ ಮುನ್ನವೇ, ಚಿತ್ರಮಂದಿರಗಳ ಗಲ್ಲಾ ಪೆಟ್ಟಿಗೆಯನ್ನು ತುಂಬು ನಟ, ಚಾಲೆಂಜಿಂಗ್‌ ಸ್ಟಾರ್‌, ʻಡಿʼ ಬಾಸ್‌ ದರ್ಶನ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಚಿತ್ರರಂಗದ ನಾಡಿ ಮಿಡಿತ ಒಂದು ಕ್ಷಣ ನಿಂತಂತಾಯಿತು.

ದರ್ಶನ್‌ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದದ್ದು ಚಿತ್ರರಂಗಕ್ಕೆ ಅಂಥ ಆಘಾತವನ್ನೇನೂ ಉಂಟುಮಡಿದಂತೆ ಕಾಣಲಿಲ್ಲ. ಅವರ ಚಿತ್ರಗಳ ಮೇಲೆ ಬಂಡವಾಳ ಹೂಡಿದವರ ಎದೆ ಬಡಿತ ಮಾತ್ರ ಏರಿಳಿತ ಕಂಡಿತ್ತು. ಸ್ಟಾರ್‌ ಚಿತ್ರಗಳಿಲ್ಲದೆ, ಆದಾಯವಿಲ್ಲದೆ ನರಳುತ್ತಿರುವ ಚಿತ್ರಮಂದಿರಗಳ ಮಾಲೀಕರ ಸ್ಥಿತಿ ಇದಕ್ಕಿಂತ ಭಿನ್ನವೇನೂ ಆಗಿರಲಿಲ್ಲ. ನಿಜವಾಗಿ ಆಘಾತವಾಗಿದ್ದು, ʼಡಿʼ ಬಾಸ್‌ ಅಭಿಮಾನಿಗಳಿಗೆ. ಒಂದು ಪ್ರಕರಣದಿಂದ ಮುಕ್ತವಾಗಿದ್ದಂತೆ ಕಂಡಿದ್ದ ದರ್ಶನ್‌ ಮತ್ತೊಂದು ಪ್ರಕರಣದಲ್ಲಿ ಆರೋಪಿಯ ಸ್ಥಾನದಲ್ಲಿ ನಿಂತಿರುವುದನ್ನು ಯಾವ ʻಅಭಿಮಾನಿʼ ತಾನೇ ಸಹಿಸಿಕೊಳ್ಳಲು ಸಾಧ್ಯ?

ದರ್ಶನ್‌ ಬಂಧನದಿಂದ ಬೆಚ್ಚಿಬಿದ್ದ ಚಿತ್ರರಂಗದ ಮತ್ತೊಂದು ಅಂಗವೆಂದರೆ ಪ್ರದರ್ಶಕ ವಲಯ ಎಂಬುದನ್ನು ಯಾವುದೇ ಎಗ್ಗಿಲ್ಲದೆ ಹೇಳಬಹುದು. ನಿಜ. ಈ ಬೆಳವಣಿಗೆಯನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ, ವಾಸ್ತವವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.

ನೆನಪಾಗುವ ಸಲ್ಮಾನ್‌ ಖಾನ್‌ ಪ್ರಕರಣ

ದರ್ಶನ್‌ ಪ್ರಕರಣ ಇಂದು ತೀವ್ರ ಚರ್ಚೆಗೆ ಗುರಿಯಾಗಿರುವಾಗ ನೆನಪಾಗುವುದು ಸಲ್ಮಾನ್‌ ಖಾನ್‌, ೧೯೯೮ರಲ್ಲಿ ರಾಜಸ್ಥಾನದಲ್ಲಿ ಹಮ್‌ ಸಾತ್‌ ಸಾತ್‌ ಹೈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಬಂಧಿಯಾದಾಗ, ಸೆಪ್ಟೆಂಬರ್‌ ೨೦೦೨ರಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆ ಪ್ರಕರಣದಲ್ಲಿ ಅವರು ಸಿಕ್ಕಿಹಾಕಿಕೊಂಡ ಘಟನೆಗಳು. ಈ ಎರಡೂ ಸಂದರ್ಭದಲ್ಲಿ ಬಾಲಿವುಡ್‌ ಗಾಭರಿಗೊಳಗಾದದ್ದು, ಅವರ ಮೇಲೆ ಹೂಡಿದ ಭಾರಿ ಬಂಡವಾಳದ ಕಾರಣಕ್ಕೆ. ಸದಾ ತಮ್ಮದೇ ನಡತೆಯ ಕಾರಣ ವಿವಾದದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಿದ್ದ ಸಲ್ಮಾನ್‌ ಖಾನ್‌ ಬಗ್ಗೆ ಚಿತ್ರರಂಗಕ್ಕೆ ಯಾವ ಅನುಕಂಪವೂ ಇದ್ದಂತೆ ಆಗ ಕಾಣಲಿಲ್ಲ. ಅವರಿಗಿದ್ದದ್ದು, ಅವರ ಚಿತ್ರಗಳ ಮೇಲೆ ಹೂಡಿದ್ದ, ನೂರಾರು ಕೋಟಿ ರೂಪಾಯಿಗಳ ಬಂಡವಾಳ ಹಿಂದಿರುಗುವುದು ಕಷ್ಟ ಎಂಬ ಆತಂಕ ಮಾತ್ರ. ದರ್ಶನ್‌ ಅವರು ಬಂಧನಕ್ಕೊಳಗಾಗಿರುವ ಇಂದಿನ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಂತಹುದೇ ವಾತಾವರಣ ನಿರ್ಮಾಣವಾಗಿದೆ.

“ದರ್ಶನ್‌ ಅವರ ಇತ್ತೀಚಿನ ದಿನಗಳ ವರ್ತನೆಯನ್ನು ಗಮನಿಸಿದರೆ, ಇಂಥಾ ಅನಾಹುತವೇನಾದರೂ ಆಗಬಹುದೆಂಬ ಭಾವ ಕಾಡುತ್ತಿತ್ತು. ಆದರೆ ಈ ಪ್ರಮಾಣದ್ದು, ಅಥವಾ ಈ ರೀತಿಯದು ಎಂದುಕೊಂಡಿರಲಿಲ್ಲ. ʻಕಾಟೇರಾʼ ಚಿತ್ರ ಬಿಡುಗಡೆಯಾದ ಮೇಲೆ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿತ್ತು. ಅವರೊಂದಿಗೆ ಚಿತ್ರಮಾಡುವುದು ಕಷ್ಟ ಎಂಬ ಭಾವನೆ ದೊಡ್ಡ ದೊಡ್ಡ ನಿರ್ಮಾಪಕರಲ್ಲಿಯೂ ಮೂಡಿತ್ತು”, ಎಂದು ಹೆಸರು ಬಹಿರಂಗಗೊಳಿಸಲು ಬಯಸದ ನಿರ್ಮಾಪರೊಬ್ಬರು ಹೇಳಿದ ಮಾತುಗಳಲ್ಲಿ ಅರ್ಥವಿತ್ತು.

ಆಭಿಷೇಕ್‌ ಅಂಬರೀಶ್‌, ರಾಕಲೈನ್‌ ವೆಂಕಟೇಶ್‌ ಮುಂತಾದವರೊಂದಿಗೆ ಪಡಖಾನೆಯೊಂದರಲ್ಲಿ ಕುಡಿದು, ಕುಣಿದು ಕುಪ್ಪಳಿಸಿ, ಪೊಲೀಸರಿಂದ ನೊಟೀಸ್ ಪಡೆದು, ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು, ದರ್ಶನ್‌ ಅವರ ಪ್ರೀತಿಯ ನಾಯಿ ಪಕ್ಕದ ಮನೆಯಾಕೆಯನ್ನು ಬೆದರಿಸಿದ್ದು, ಎಲ್ಲವೂ, ಅವರ ಬದಲಾಗುತ್ತಿರುವ ಮನಃಸ್ಥಿತಿಗೆ ಕನ್ನಡಿ ಹಿಡಿದಂತಿತ್ತು. ಹಾಗಾಗಿ ದರ್ಶನ್‌ ಅವರ ಭವಿಷ್ಯಕ್ಕಿಂತ ಅವರ ಚಿತ್ರಗಳ ಬಂಡವಾಳ ಹೂಡಿದವರ ಬಗ್ಗೆ ಆತಂಕವಾಗುತ್ತಿತ್ತು, ಎನ್ನುವುದು ಮತ್ತೊಬ್ಬ ನಿರ್ದೇಶಕ-ನಿರ್ಮಾಪಕರ ಸಂಕಟ.

ಸದ್ಯಕ್ಕೆ ದರ್ಶನ್‌ ಅವರು ತಮ್ಮ ʻಡೆವಿಲ್-ದ ಹೀರೋʼ ಚಿತ್ರದ ಚಿತ್ರೀಕರಣ ನಡೆದಿದೆ. ಈ ಚಿತ್ರವನ್ನು ಪ್ರಕಾಶ್‌ ವೀರ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಈ ವರ್ಷದ ಕೊನೆಯಲ್ಲಿ ಹೆಚ್ಚೂಕಡಿಮೆ ಕ್ರಿಸ್ಮಸ್‌ ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗು್ ಸಾಧ್ಯತೆ ಇದೆ. ಆದರೆ ಈ ಪ್ರಕರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿತ್ರ ಬಿಡಗಡೆಗೆ ತೊಂದರೆಯಾಗುವುದು ಖಚಿತ ಎಂಬ ಮಾತು ಈಗಾಗಲೇ ಚಿತ್ರರಂಗಲ್ಲಿ ತೇಲಾಡುತ್ತಿದೆ. ಇನ್ನು ಕೆಲವು ನಿರ್ಮಾಪಕರ ತಮ್ಮ ಮುಂದಿನ ಚಿತ್ರಗಳಿಗೆ ದರ್ಶನ್‌ ಅವರ ಕಾಲ್ಷೀಟ್‌ ಪಡೆದುಕೊಂಡಿದ್ದು, ಅನಧಿಕೃತವಾಗಿ ಮುಂಗಡ ಹಣವನ್ನು ಕೊಟ್ಟಿದ್ದಾರೆಂದು ಚಿತ್ರರಂಗದ ಮೂಲಗಳು ಹೇಳುತ್ತಿವೆ. ಒಟ್ಟಾರೆಯಾಗಿ ದರ್ಶನ್‌ ಅವರ ಮೇಲೆ ಹೂಡಿರುವ ಬಂಡವಾಳದ ಒಟ್ಟು ಮೊತ್ತ ನೂರು ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. “ಈ ಬಂಡವಾಳ ಹೂಡಿರುವವರ ಸ್ಥಿತಿ ಚಿಂತಾಜನಕವಾಗುವ ಸಾಧ್ಯತೆ ಇದೆ” ಎಂಬುದು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಊಹಾಪೋಹ.

ಆದಾಯವಿಲ್ಲದೆ ಕರ್ನಾಟಕದಲ್ಲಿ ಒಂದರ ಹಿಂದೆ ಒಂದಂತೆ ಕಣ್ಣುಮುಚ್ಚುತ್ತಿರುವ ಚಿತ್ರಮಂದಿರಗಳ ಮಾಲೀಕರು, ಒಂದು ಸ್ಟಾರ್‌ ಚಿತ್ರ ಬಿಡುಗಡೆಯಾದರೆ, ತಮ್ಮ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಕನಸು ಕಾಣುತ್ತಿದ್ದರು. ಆಗಸ್ಟ್‌ ೧೫ರಂದು ಶಿವರಾಜ್‌ ಕುಮಾರ್‌ ಅವರ ʻಭೈರತಿ ರಣಗಲ್‌ʼ ಬಿಡುಗಡೆಯ ನಾಲ್ಕು ತಿಂಗಳ ನಂತರ ʻಡೆವಿಲ್‌ʼ ಬಿಡುಗಡೆಯಾದರೆ, ಸ್ವಲ್ಪ ಸುಧಾರಿಸಿಕೊಳ್ಳಬಹುದೆಂದು ಭಾವಿಸಿದ್ದ ಪ್ರದರ್ಶಕರು, ಈ ಪ್ರಕರಣದಿಂದ ಕಂಗಾಲಾಗಿದ್ದಾರೆ. “ತಮ್ಮ ಮೇಲೆ ಚಿತ್ರರಂಗ ಬಂಡವಾಳ ಹೂಡಿದೆ. ಚಿತ್ರರಂಗ ನಿಂತರೆ ಒಬ್ಬ ನಟ, ನಿರ್ದೇಶಕ ಎಲ್ಲರೂ ಬದುಕಲ್ ಸಾಧ್ಯ ಎಂದು ಅರ್ಥಮಾಡಿಕೊಂಡು ವಿವೇಕದಿಂದ ನಡೆದುಕೊಳ್ಳಲು ʻತಾರಾʼ ನಟರಿಗೇಕೆ ಸಾಧ್ಯವಾಗುತ್ತಿಲ್ಲ?” ಎಂಬುದು ಅವರೆಲ್ಲರ ಪ್ರಶ್ನೆ.

ದರ್ಶನ್‌ ಮೊದಲು ಹೀಗಿರಲಿಲ್ಲ. ಒಂದು ದಶಕದಿಂದೀಚೆಗೆ ಅವರ ವರ್ತನೆಯಲ್ಲಿ ಉದ್ಧಟತನ ಎದ್ದು ಕಾಣುತ್ತಿದೆ. ಪತ್ರಕರ್ತರು- ಮಾಧ್ಯಮದ ಜೊತೆಗೂ ಘರ್ಷಣೆ. ಹಾಗಾಗಿ ಪತ್ರಕರ್ತರು ಅವರನ್ನು ಬಹಿಷ್ಕರಿಸಿದ್ದೂ ಇತ್ತು. ಅದೆಲ್ಲ ಸುಖಾಂತಗೊಂಡು, ದರ್ಶನ್‌ ಮಾಧ್ಯಮದೊಂದಿಗೆ ರಾಜಿ ಮಾಡಿಕೊಂಡಿದ್ದರು. ಆದರೆ, ತಮ್ಮನ್ನು ಸರಿಪಡಿಸಿಕೊಳ್ಳುವ ರೀತಿಯಲ್ಲಿಯೇ ದೋಷವಿದೆ ಎನ್ನುವ ಅನುಮಾನ ಕೋಡ ಈಗ ಕಾಡುತ್ತಿದೆ.

ಸದ್ಯಕ್ಕಂತೂ ಚಿತ್ರಮಂದಿರವನ್ನು ಕಾಡುತ್ತಿರುವ ಪ್ರಶ್ನೆಯೆಂದರೆ, ದರ್ಶನ್‌ ಈ ಪ್ರಕರಣದಿಂದ ಪಾರಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವರೇ? ಮತ್ತೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತಂದಾರೆ? ಈಗಷ್ಟೇ ಪ್ರಕರಣ ಬಯಲಿಗೆ ಬಂದಿದೆ, ಬೆಳವಣಿಗೆಯನ್ನು ಕಾದುನೋಡಬೇಕಿದೆ.

Read More
Next Story