
ಚಿತ್ತಾಪುರದಲ್ಲಿ ಪಥಸಂಚಲನ ಕಗ್ಗಂಟು; ದಲಿತ ಸಂಘಟನೆಗಳಿಂದಲೂ ಅನುಮತಿ ಕೋರಿ ಅರ್ಜಿ
ಸಾರ್ವಜನಿಕ ಸ್ಥಳದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಈಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬಳಿಕ ವಿವಾದ ತೀವ್ರಗೊಂಡಿತ್ತು.
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ 'ಪಥ ಸಂಚಲನ' ಪೈಫೋಟಿ ಆರಂಭವಾಗಿದೆ. ನ. 2ರಂದು ಪಥಸಂಚಲನಕ್ಕೆ ಅನುಮತಿ ಕೋರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಜಿಲ್ಲಾಡಳಿತಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಭೀಮ್ ಆರ್ಮಿ ಹಾಗೂ ದಲಿತ್ ಪ್ಯಾಂಥರ್ ಸಂಘಟನೆಗಳು ಸಹ ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ.
ಸಾರ್ವಜನಿಕ ಸ್ಥಳದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಈಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬಳಿಕ ವಿವಾದ ತೀವ್ರಗೊಂಡಿತ್ತು. ಅ.19 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ನಿರ್ಧರಿಸಲಾಗಿತ್ತು. ಆದರೆ, ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ ಸಂಘಟನೆಗಳು ಕೂಡ ಪಥ ಸಂಚಲನಕ್ಕೆ ಅನುಮತಿ ಕೋರಿದ್ದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮೂರೂ ಸಂಘಟನೆಗಳಿಗೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು.
ಅನುಮತಿ ನಿರಾಕರಿಸಿದ ತಾಲೂಕು ಆಡಳಿತದ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್ ಮುಖಂಡ ಅಶೋಕ ಪಾಟೀಲ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪೀಠವು, ನ.2ರಂದು ಪಥಸಂಚಲನ ನಡೆಸುವುದಾದರೆ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಅ.24ಕ್ಕೆ ಮುಂದೂಡಿತ್ತು.
ಹೈಕೋರ್ಟ್ ಸೂಚನೆಯಂತೆ ಆರ್‌ಎಸ್‌ಎಸ್ ಮುಖಂಡರು ಅ.19ರಂದೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ, ಜಿಲ್ಲಾಧಿಕಾರಿ ಲಭ್ಯವಾಗದ ಕಾರಣ ವಾಟ್ಸ್ಆ್ಯಪ್ ಹಾಗೂ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಲಿಖಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. 600 ಸ್ವಯಂ ಸೇವಕರು ಲಾಠಿಯೊಂದಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ದಲಿತ್ ಪ್ಯಾಂಥರ್ಸ್, ಭೀಮ್ ಆರ್ಮಿಯಿಂದ ಅರ್ಜಿ
ಚಿತ್ತಾಪುರದಲ್ಲಿ ನ.2ರಂದು ಸಂವಿಧಾನದ ಪೀಠಿಕೆ ಹಾಗೂ ನೀಲಿ ಧ್ವಜದೊಂದಿಗೆ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಕೋರಿ ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಮಿತಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ, ನಮಗೂ ಕೂಡ ಸಂವಿಧಾನದ ಪ್ರತಿ ಹಾಗೂ ಲಾಠಿ ಹಿಡಿದು ಪಥಸಂಚಲನ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಭೀಮ್ ಆರ್ಮಿಯ ಭಾರತ ಏಕತಾ ಮಿಷನ್ ರಾಜ್ಯ ಯುವ ಘಟಕದ ಮುಖಂಡರು ಕೂಡ ನ.2ರಂದು ಭೀಮ ಪಥ ಸಂಚಲನ ಜಾಥಾಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ. ಜಾಥಾದಲ್ಲಿ ಬಿದಿರಿನ ಕೋಲು, ರಾಷ್ಟ್ರಧ್ವಜದೊಂದಿಗೆ ಬೌದ್ಧಧರ್ಮದ ಪಂಚಶೀಲ ಧ್ವಜ ಹಾಗೂ ಸಂವಿಧಾನ ಪೀಠಿಕೆಯೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.