Internal Reservation | ಒಳಮೀಸಲಾತಿ ದತ್ತಾಂಶ ಸಂಗ್ರಹ ಸಮೀಕ್ಷೆ; ತಂತ್ರಾಂಶದ ಸಮಸ್ಯೆಗೆ ಗಣತಿದಾರರ ಬೇಸರ
x

ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು.

Internal Reservation | ಒಳಮೀಸಲಾತಿ ದತ್ತಾಂಶ ಸಂಗ್ರಹ ಸಮೀಕ್ಷೆ; ತಂತ್ರಾಂಶದ ಸಮಸ್ಯೆಗೆ ಗಣತಿದಾರರ ಬೇಸರ

ಒಳ ಮೀಸಲಾತಿ ಸಮೀಕ್ಷೆಯ ತರಬೇತಿ ಅವಧಿಯಲ್ಲಿ ಪರಿಚಯಿಸಿದ ಡೆಮೋ ಎಪಿಕೆ ತಂತ್ರಾಂಶದಲ್ಲಿ ಸಮಸ್ಯೆ ಕಂಡುಬಂದಿದ್ದು, ಹಲವರ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಆಗುತ್ತಿರಲಿಲ್ಲ. ತಂತ್ರಾಂಶ ಅಪ್‌ಡೆಟ್‌ ಮಾಡಿದ್ದರೂ ಸಮಸ್ಯೆಗಳು ಉಳಿದಿದ್ದು, ಗಣತಿದಾರರು ಪರದಾಡುವಂತಾಗಿದೆ.


ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ಉಪಜಾತಿಗಳ ದತ್ತಾಂಶ ಸಂಗ್ರಹಣೆಗೆ ಮೇ 5 ರಿಂದ ಸಮೀಕ್ಷೆ ಶುರುವಾಗಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ. ದತ್ತಾಂಶ ಸಂಗ್ರಹಿಸಲು ಅಭಿವೃದ್ಧಿಪಡಿಸಿರುವ ಎಪಿಕೆ ತಂತ್ರಾಂಶದಲ್ಲಿ ಲೋಪ ಕಾಣಿಸಿಕೊಂಡಿದ್ದು, ಗಣತಿದಾರರು ಬೇಸರ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಿದ್ದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಸಮಗ್ರ ಮಾಹಿತಿ ಕಲೆಹಾಕಲು ಎಪಿಕೆ ತಂತ್ರಾಂಶ ಅಭಿವೃದ್ಧಿಪಡಿಸಿತ್ತು.

ಕಲಬುರಗಿಯ ಕೆಲವೆಡೆ ಮೊದಲ ದಿನವೇ ತಂತ್ರಾಂಶದಲ್ಲಿ ಸಮಸ್ಯೆ ಕಂಡುಬಂದಿದೆ. ತರಬೇತಿ ಅವಧಿಯಲ್ಲಿ ಪರಿಚಯಿಸಿದ ಡೆಮೋ ಎಪಿಕೆ ತಂತ್ರಾಂಶದಲ್ಲಿ ಸಮಸ್ಯೆಗಳು ಕಂಡು ಬಂದಿದ್ದವು. ಮೇ 5 ರಂದು ತಂತ್ರಾಂಶ ಅಪ್‌ಡೆಟ್‌ ಮಾಡಲಾಗಿತ್ತು. ಆದಾಗ್ಯೂ ಹಲವರ ಮೊಬೈಲ್‌ಗಳಲ್ಲಿ ಎಪಿಕೆ ಫಾರ್ಮೆಟ್‌ ನಲ್ಲಿರುವ ತಂತ್ರಾಂಶ ಡೌನ್‌ಲೋಡ್‌ ಆಗಿರಲಿಲ್ಲ. ಕೆಲವರ ಮೊಬೈಲ್‌ನಲ್ಲಿ ಲಾಗಿನ್‌ ಸಮಸ್ಯೆ ಎದುರಾಗಿದೆ. ದತ್ತಾಂಶ ಸಂಗ್ರಹಣೆ ವೇಳೆ ಏಕಾಏಕಿ ತಂತ್ರಾಂಶ ಸ್ಥಗಿತಗೊಳ್ಳುತ್ತಿದೆ. ಆಗ ಮೊದಲಿನಿಂದ ಪ್ರಕ್ರಿಯೆ ಆರಂಭಿಸಬೇಕಾಗಿದ್ದು, ತಂತ್ರಾಂಶದ ಬಗ್ಗೆ ಗಣತಿದಾರರು ಬೇಸರ ಹೊರಹಾಕಿದ್ದಾರೆ.

"ಶಿಕ್ಷಕರು ಎಪಿಕೆ ತಂತ್ರಾಂಶ ಲಾಗಿನ್‌ ನಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ತಾಂತ್ರಿಕ ತಂಡ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದೆ. ಕೆಲ ಶಿಕ್ಷಕರು ಅಪ್‌ಡೆಟ್‌ ಆಗದ ತಂತ್ರಾಂಶ ಬಳಸುತ್ತಿರುವುದರಿಂದ ಈ ರೀತಿಯ ಸಮಸ್ಯೆ ಎದುರಾಗಿದೆʼʼ ಎಂದು ಕಲಬುರುಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ. ಅಲ್ಲಾಬಕಾಷ್‌ ತಿಳಿಸಿದ್ದಾರೆ.

ಸಮೀಕ್ಷೆಗೆ 100 ಕೋಟಿ ರೂ.ವೆಚ್ಚ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ 100 ಕೋಟಿ ರೂ. ವ್ಯಯಿಸಲಾಗುತ್ತಿದೆ. ಹೀಗಿದ್ದರೂ ತಂತ್ರಾಂಶ ಲೋಪ ಕಂಡು ಬರುತ್ತಿರುವುದು ಹಲವರ ಟೀಕೆಗೆ ಗುರಿಯಾಗಿದೆ.

ಸಮೀಕ್ಷೆಯು ಮೇ 23ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ. 65 ಸಾವಿರ ಶಿಕ್ಷಕರು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ತಂತ್ರಾಂಶ ಬಳಕೆ ಸಂಬಂಧ ಗಣತಿದಾರರು, ಮೇಲ್ವಿಚಾರಕರಿಗೆ ಅಗತ್ಯ ತರಬೇತಿ ನೀಡಲಾಗಿದೆ.

ವೈಜ್ಞಾನಿಕ ದತ್ತಾಂಶ ಅಗತ್ಯ

ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಿರ್ದಿಷ್ಟ ಮಾಹಿತಿ ಅಗತ್ಯತೆ ಕುರಿತು ಸುಪ್ರೀಂಕೋರ್ಟ್‌, ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ನ್ಯಾ.ನಾಗಮೋಹನದಾಸ್‌ ನೇತೃತ್ವದ ಆಯೋಗ ಹೇಳಿತ್ತು. ವೈಜ್ಞಾನಿಕ ದತ್ತಾಂಶ ಸಂಗ್ರಹಿಸುವ ಆಯೋಗ 60 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ.

Read More
Next Story