
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು
ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ, ತಿಮರೋಡಿ ಅವರ ಉಪಸ್ಥಿತಿಯು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಆಧಾರದ ಮೇಲೆ ಪುತ್ತೂರು ಉಪವಿಭಾಗಾಧಿಕಾರಿಗಳು ಈ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಪ್ರಖರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ಅವರ ವಿರುದ್ಧ ದಾಖಲಾಗಿದ್ದ 32 ಪ್ರಕರಣಗಳನ್ನು ಆಧರಿಸಿ, ಪುತ್ತೂರು ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಅವರು, ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ. ಕಾನೂನು ಪ್ರಕಾರ, ಒಬ್ಬ ವ್ಯಕ್ತಿಯ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಆತ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಕೃತ್ಯಗಳನ್ನು ಪದೇ ಪದೇ ಎಸಗುತ್ತಿದ್ದರೆ, ಆ ವ್ಯಕ್ತಿಯನ್ನು ನಿರ್ದಿಷ್ಟ ಪ್ರದೇಶದಿಂದ ಹೊರಗೆ ಕಳುಹಿಸುವ ಪ್ರಕ್ರಿಯೆಯೇ ಗಡಿಪಾರು.
ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿದ್ದವು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 'ಬುರುಡೆ ಪ್ರಕರಣ' ಮತ್ತು 'ಶವ ಹೂತಿಟ್ಟ ಪ್ರಕರಣ'ದಲ್ಲಿ ಪ್ರಮುಖ ದೂರುದಾರನಾಗಿದ್ದ ಚಿನ್ನಯ್ಯ ಎಂಬಾತನಿಗೆ ತಿಮರೋಡಿ ಆಶ್ರಯ ನೀಡಿದ್ದರು ಎಂಬ ಆರೋಪವೂ ಇದೆ.
ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ, ತಿಮರೋಡಿ ಅವರ ಉಪಸ್ಥಿತಿಯು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಆಧಾರದ ಮೇಲೆ ಪುತ್ತೂರು ಉಪವಿಭಾಗಾಧಿಕಾರಿಗಳು ಈ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಸಹಾಯಕ ಆಯುಕ್ತರ ಈ ಗಡಿಪಾರು ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಇದೆ. ಅವರು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ವಿಶೇಷವಾಗಿ ಸೌಜನ್ಯ ಪ್ರಕರಣದ ಹೋರಾಟದ ಹಿನ್ನೆಲೆಯಲ್ಲಿ, ತೀವ್ರ ಚರ್ಚೆಗೆ ಗ್ರಾಸವಾಗಿದೆ.