
ಪ್ರಿಯಾಂಕ್ ಖರ್ಗೆ
"ಜಲಜೀವನ್ ಮಿಷನ್ ಹೆಸರಿಗೆ ಕೇಂದ್ರದ್ದು, ಹೊರೆ ರಾಜ್ಯದ್ದು"; ಪ್ರಿಯಾಂಕ್ ಖರ್ಗೆ ಕಿಡಿ
ಯೋಜನೆಯ ವಾಸ್ತವದ ಬಗ್ಗೆ ತಿಳಿಸಿದ ಸಚಿವರು, ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ವಾಸ್ತವದಲ್ಲಿ ಕರ್ನಾಟಕದ ಪಾಲಿಗೆ ಇದು "ಕೇಂದ್ರ ತಿರಸ್ಕೃತ" ಯೋಜನೆಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಜಲಜೀವನ್ ಮಿಷನ್' (JJM) ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ ಎಂದು ರಾಜ್ಯ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸದೇನಲ್ಲ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಯೋಜನೆಯ ವಾಸ್ತವದ ಬಗ್ಗೆ ತಿಳಿಸಿದ ಸಚಿವರು, ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ವಾಸ್ತವದಲ್ಲಿ ಕರ್ನಾಟಕದ ಪಾಲಿಗೆ ಇದು "ಕೇಂದ್ರ ತಿರಸ್ಕೃತ" ಯೋಜನೆಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ. ತಮ್ಮ ವಾದಕ್ಕೆ ಪುಷ್ಟಿಯಾಗಿ ಅವರು ಈ ಕೆಳಗಿನ ಅಂಕಿಅಂಶಗಳನ್ನು ನೀಡಿದ್ದಾರೆ.
ಪ್ರಸಕ್ತ ಸಾಲಿನವರೆಗೆ ರಾಜ್ಯದಲ್ಲಿ ಯೋಜನೆಗಾಗಿ ಒಟ್ಟು 35,698.58 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಭರಿಸಿರುವ ವೆಚ್ಚವೇ ಸಿಂಹಪಾಲಾಗಿದ್ದು, ಬರೋಬ್ಬರಿ 24,598.45 ಕೋಟಿ ರೂಪಾಯಿಗಳನ್ನು ಆದರೆ, ಕೇಂದ್ರ ಸರ್ಕಾರ ಇದುವರೆಗೂ ನೀಡಿರುವುದು ಕೇವಲ 11,786.63 ಕೋಟಿ ರೂಪಾಯಿ ಮಾತ್ರ. ಪ್ರಸಕ್ತ ಸಾಲಿನವರೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 13,004.63 ಕೋಟಿ ರೂಪಾಯಿ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಬೇಕಿದೆ ಎಂದು ಹೇಳಿದ್ದಾರೆ.
2024-25ನೇ ಸಾಲಿನ ಅನುದಾನದಲ್ಲೂ ಭಾರೀ ಕಡಿತ
ಕೇಂದ್ರದ ತಾರತಮ್ಯ ನೀತಿಯನ್ನು ಎತ್ತಿ ತೋರಿಸಿದ ಖರ್ಗೆ, "2024-25ನೇ ಆರ್ಥಿಕ ಸಾಲಿನಲ್ಲಿ ಯೋಜನೆಗಾಗಿ ಕೇಂದ್ರವು ಕರ್ನಾಟಕಕ್ಕೆ 3,804.41 ಕೋಟಿ ರೂಪಾಯಿ ಹಂಚಿಕೆ ಮಾಡಿತ್ತು. ಆದರೆ, ವಾಸ್ತವವಾಗಿ ಬಿಡುಗಡೆಯಾದ ಮೊತ್ತ ಕೇವಲ 570.66 ಕೋಟಿ ರೂಪಾಯಿ ಮಾತ್ರ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆಯ ಜಾರಿಗಾಗಿ ರಾಜ್ಯ ಸರ್ಕಾರವೇ ಹೆಚ್ಚಿನ ಆಸಕ್ತಿ ವಹಿಸಿ ಹಣ ಖರ್ಚು ಮಾಡುತ್ತಿದ್ದರೂ, ಕೇಂದ್ರದ ಅನ್ಯಾಯ ಮಾತ್ರ ಮುಂದುವರೆದಿದೆ ಎಂದು ಅವರು ದೂರಿದ್ದಾರೆ.
ಬಿಜೆಪಿ ನಾಯಕರ ಮೌನಕ್ಕೆ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆಯೇ ಬಾಕಿ ಹಣ ಬಿಡುಗಡೆಗೆ ಕೇಂದ್ರವನ್ನು ಒತ್ತಾಯಿಸಿದ್ದರು ಮತ್ತು ಈಗಲೂ ಒತ್ತಾಯಿಸುತ್ತಿದ್ದಾರೆ ಎಂದು ನೆನಪಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಆರ್ಥಿಕ ಪ್ರಗತಿಗೆ ಪೆಟ್ಟು ಬೀಳುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಮೌನವಾಗಿರುವುದನ್ನು ಪ್ರಶ್ನಿಸಿದ್ದಾರೆ. "ರಾಜ್ಯದ ಪರವಾಗಿ ಧ್ವನಿ ಎತ್ತದ, ನ್ಯಾಯ ಕೇಳದ ಬಿಜೆಪಿ ನಾಯಕರ ನಡೆ ಅವರ ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ. ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ಒತ್ತಾಯಕ್ಕೆ ದನಿಗೂಡಿಸಿ ಬದ್ಧತೆ ಪ್ರದರ್ಶಿಸಲಿ" ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಸವಾಲ್ ಹಾಕಿದ್ದಾರೆ.

