
ಭಾರತದ ಮೇಲೆ ಶೇ 25 ರಷ್ಟು ಸುಂಕ ; ʼಹೌಡಿ ಮೋದಿʼ ಕಾಣಿಕೆ ಎಂದ ಪ್ರಿಯಾಂಕ್ ಖರ್ಗೆ
ಅಮೆರಿಕ ಶೇ 25 ಸುಂಕ ಹಾಗೂ ದಂಡ ಹೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.
ಭಾರತದ ಮೇಲೆ ಶೇ 25ರಷ್ಟು ಸುಂಕ ಹಾಗೂ ದಂಡ ಹೇರುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಬರೆ ಎಳೆದಿದ್ದಾರೆ. ಹೊಸ ಸುಂಕ ನೀತಿ ಆಗಸ್ಟ್ 1ರಿಂದ ಜಾರಿಯಾಗಲಿದ್ದು, ಭಾರತದಿಂದ ರಫ್ತಾಗುವ ಉತ್ಪನ್ನಗಳಿಗೆ ಇದು ಅನ್ವಯವಾಗಲಿದೆ.
ಅಮೆರಿಕ ಶೇ 25 ಸುಂಕ ಹಾಗೂ ದಂಡ ಹೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.
ʼಹೌಡಿ ಮೋದಿʼ ಕಾಣಿಕೆಯೇ?
‘ನಮಸ್ತೆ ಟ್ರಂಪ್’, ‘ಹೌಡಿ ಮೋದಿ’, ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಭಾರತಕ್ಕೆ ನಿಜವಾಗಿಯೂ ಏನು ನೀಡಿತು?ಮೋದಿಜಿಯವರ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರ ಸ್ನೇಹದ ಕಾಣಿಕೆಯು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸರಕುಗಳ ಮೇಲೆ ಶೇ25 ಸುಂಕ ವಿಧಿಸಲಾಗಿದೆ. ಇದರಿಂದ ಅಮೆರಿಕ-ಭಾರತದ ವಾಣಿಜ್ಯ ವ್ಯವಹಾರಗಳಿಗೆ ಹಾನಿಯಾಗಲಿದೆ. ಭಾರತದ ವ್ಯಾಪಾರ ನೀತಿಗಳನ್ನು ಟ್ರಂಪ್ “ಅಸಹ್ಯಕರ” ಎಂದು ಅವಮಾನಿಸಿರುವುದು ಕೇಂದ್ರ ಸರ್ಕಾರಕ್ಕೆ ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ರಷ್ಯಾದ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ್ದಕ್ಕಾಗಿ ಭಾರತಕ್ಕೆ ದಂಡನೀಯ ರೂಪದಲ್ಲಿ ಸುಂಕ ಹೇರಲಾಗುತ್ತಿದೆ. ಇದು ಭಾರತದ ಕಾರ್ಯತಂತ್ರ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಿದೆ. ಭಾರತ-ಪಾಕಿಸ್ತಾನದ ವಿದೇಶಾಂಗ ನೀತಿ, ಭಾರತದ ದ್ವಿಪಕ್ಷೀಯ ನಿಲುವನ್ನು ಅವಮಾನಿಸಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಯಾವುದೇ ರಾಷ್ಟ್ರ ಹಾಗೂ ಮಿತ್ರರಾಷ್ಟ್ರಗಳು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಕ್ರಮವನ್ನು ಬೆಂಬಲಿಸಲಿಲ್ಲ ಎಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಅವರು ಪದೇ ಪದೇ ಹೇಳಿಕೊಳ್ಳುತ್ತಾ ಭಾರತದ ದುರ್ಬಲ ಜಾಗತಿಕ ನಿಲುವನ್ನು ಬಹಿರಂಗಪಡಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಗೆಲುವು, ಐಎಂಎಫ್ ನಿಂದ ಸಾಲ ವಿತರಣೆ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಆತಿಥ್ಯ ನೀಡಿದ ಅಮೆರಿಕದ ಕ್ರಮವು ಪರೋಕ್ಷವಾಗಿ ಭಾರತಕ್ಕೆ ಛೀಮಾರಿ ಹಾಕಿದಂತಿದೆ ಎಂದು ಹೇಳಿದ್ದಾರೆ.
ಮೋದಿಯವರ "ವೈಯಕ್ತಿಕ" ರಾಜತಾಂತ್ರಿಕತೆಯ ಹೊರತಾಗಿಯೂ ಯಾವುದೇ ಸುಂಕ ವಿನಾಯಿತಿ ಸಿಕ್ಕಿಲ್ಲ. ಪ್ರಧಾನಿ ಮೋದಿಯವರ ಮಾಸ್ಟರ್‌ಸ್ಟ್ರೋಕ್‌ಗಳು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಿವೆ. ಅಲ್ಲದೇ ರಾಜತಾಂತ್ರಿಕವಾಗಿ ಕುಗ್ಗಿಸಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಿಯೂಶ್ ಗೋಯಲ್-ಜೈಶಂಕರ್ ಭೇಟಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ಘೋಷಿಸುತ್ತಲೇ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಆ. 15ರಂದು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಬರಲಿದ್ದು, ಅಮೆರಿಕ ನೀತಿಯ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೆರಿಕವು ಪ್ರಸ್ತುತ, ಪರಿಷ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 1.3 ರಷ್ಟು ಸುಂಕ ಹಾಕುತ್ತಿದೆ. ಚಿನ್ನಾಭರಣದ ಮೇಲೆ ಶೇ 5.5 ರಷ್ಟು, ಟೆಕ್ಸ್‌ಟೈಲ್ ಮೇಲೆ ಶೇ 14ರಿಂದ 32 ರಷ್ಟು ಸುಂಕ ಜಾರಿಯಲ್ಲಿದೆ. ಹೊಸ ನೀತಿಯಿಂದ ಇದು ಶೇ25ಕ್ಕೆ ನಿಗದಿಯಾಗಲಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇಕಡ 26ರಷ್ಟು ಸುಂಕ ಹೇರಿತ್ತು. ಈಗ ಅದನ್ನು ಶೇ 25ರಷ್ಟು ಸುಂಕ ವಿಧಿಸಿದೆ.