
ಆರ್‌ಎಸ್‌ಎಸ್‌ಗೆ ಸ್ವಯಂಸೇವಕರಿಂದಲೇ ದೇಣಿಗೆ: ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಸರಣಿ ಪ್ರಶ್ನೆ
ಸ್ವಯಂಸೇವಕರಿಂದಲೇ ದೇಣಿಗೆ ಪಡೆಯುವುದಾದರೆ, ಆ ಸ್ವಯಂಸೇವಕರು ಯಾರು ಮತ್ತು ಅವರನ್ನು ಹೇಗೆ ಗುರುತಿಸಲಾಗುತ್ತದೆ? ದೇಣಿಗೆಯ ಪ್ರಮಾಣ ಮತ್ತು ಸ್ವರೂಪವೇನು? ಎಂದು ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆಯು ತನ್ನ ಸ್ವಯಂಸೇವಕರು ನೀಡುವ ದೇಣಿಗೆಯಿಂದ ಕಾರ್ಯನಿರ್ವಹಿಸುತ್ತದೆ ಎಂಬ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂಘಟನೆಯ ಹಣಕಾಸು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸ್ವಯಂಸೇವಕರಿಂದಲೇ ದೇಣಿಗೆ ಪಡೆಯುವುದಾದರೆ, ಆ ಸ್ವಯಂಸೇವಕರು ಯಾರು ಮತ್ತು ಅವರನ್ನು ಹೇಗೆ ಗುರುತಿಸಲಾಗುತ್ತದೆ? ದೇಣಿಗೆಯ ಪ್ರಮಾಣ ಮತ್ತು ಸ್ವರೂಪವೇನು? ಯಾವ ಮಾರ್ಗಗಳ ಮೂಲಕ ಈ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದಾದರೆ, ತನ್ನದೇ ನೋಂದಾಯಿತ ಅಸ್ತಿತ್ವದ ಅಡಿಯಲ್ಲಿ ನೇರವಾಗಿ ದೇಣಿಗೆಯನ್ನು ಏಕೆ ಸ್ವೀಕರಿಸುವುದಿಲ್ಲ ಎಂದು ಅವರು ಕೇಳಿದ್ದಾರೆ.
ಸಂಬಳ ಯಾರು ಕೊಡುತ್ತಾರೆ?
ಯಾವುದೇ ನೋಂದಾಯಿತ ಸಂಸ್ಥೆಯಾಗಿರದಿದ್ದರೂ ಆರ್‌ಎಸ್‌ಎಸ್ ತನ್ನ ಹಣಕಾಸು ಮತ್ತು ಸಾಂಸ್ಥಿಕ ರಚನೆಯನ್ನು ಹೇಗೆ ನಿರ್ವಹಿಸುತ್ತಿದೆ? ಸಂಘಟನೆಯ ಪೂರ್ಣಾವಧಿ ಪ್ರಚಾರಕರಿಗೆ ಯಾರು ಸಂಬಳ ನೀಡುತ್ತಾರೆ ಮತ್ತು ದಿನನಿತ್ಯದ ನಿರ್ವಹಣಾ ವೆಚ್ಚಗಳನ್ನು ಯಾರು ಭರಿಸುತ್ತಾರೆ? ಬೃಹತ್ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಇನ್ನಿತರ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸ್ಥಳೀಯ ಕಚೇರಿಗಳಲ್ಲಿ ಸ್ವಯಂಸೇವಕರು ಸಮವಸ್ತ್ರ ಅಥವಾ ಇತರ ಸಾಮಗ್ರಿಗಳನ್ನು ಖರೀದಿಸಿದಾಗ ಆ ಹಣ ಎಲ್ಲಿಗೆ ಹೋಗುತ್ತದೆ? ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚವನ್ನು ಯಾರು ಭರಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೂಲಭೂತ ಸಮಸ್ಯೆಯನ್ನು ಒತ್ತಿಹೇಳುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶದಾದ್ಯಂತ ಅಪಾರ ಪ್ರಭಾವ ಮತ್ತು ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದರೂ ಆರ್‌ಎಸ್‌ಎಸ್ ಏಕೆ ಇನ್ನೂ ನೋಂದಾಯಿತ ಸಂಸ್ಥೆಯಾಗಿಲ್ಲ? ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಗಳು ಹಣಕಾಸಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದ ನಿಯಮವಿದ್ದರೂ, ಆರ್‌ಎಸ್‌ಎಸ್‌ಗೆ ಅಂತಹ ಹೊಣೆಗಾರಿಕೆ ಏಕೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

