
ಇವಿಎಂ ಯಂತ್ರಗಳ ಎಥಿಕಲ್ ಹ್ಯಾಕಥಾನ್ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ಆಗ್ರಹ
ಕರ್ನಾಟಕದ ಈ ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಂಡು, ನ್ಯಾಯಾಲಯ ಮತ್ತು ಉದ್ಯಮ ತಜ್ಞರ ಮೇಲ್ವಿಚಾರಣೆಯಲ್ಲಿ ಇವಿಎಂ ಯಂತ್ರಗಳ ಸಮಗ್ರ ಆಡಿಟ್ ನಡೆಸಲು ಕರ್ನಾಟಕ ಸಿದ್ಧವಿದೆ ಎಂದು ಖರ್ಗೆ ಪ್ರಸ್ತಾಪಿಸಿದ್ದಾರೆ
ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತಾಂತ್ರಿಕ ಆಡಿಟ್ ಹಾಗೂ ಎಥಿಕಲ್ ಹ್ಯಾಕಥಾನ್ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಮತ್ತೊಮ್ಮೆ ಪತ್ರ ಬರೆದು ಆಗ್ರಹಿಸಿದ್ದಾರೆ. 2024ರ ಡಿಸೆಂಬರ್ 3ರಂದು ಸಲ್ಲಿಸಿದ್ದ ಮೊದಲ ಪ್ರಸ್ತಾವನೆಯ ಮುಂದುವರಿದ ಭಾಗವಾಗಿ, ಸೆಪ್ಟೆಂಬರ್ 6ರಂದು ಈ ಎರಡನೇ ಪತ್ರವನ್ನು ಸಲ್ಲಿಸಲಾಗಿದೆ.
ಇತ್ತೀಚೆಗೆ ಹರಿಯಾಣದ ಬುಆನಾ ಲಾಖು ಗ್ರಾಮದ ಪಂಚಾಯರ್ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು, ಇವಿಎಂಗಳಲ್ಲಿನ ತಾಂತ್ರಿಕ ದೋಷಗಳ ಸಾಧ್ಯತೆಯನ್ನು ಮುನ್ನೆಲೆಗೆ ತಂದಿದೆ. ಇದೇ ಸಂದರ್ಭದಲ್ಲಿ, ಬೆಂಗಳೂರಿನ ಮಹದೇವಪುರ ಮತ್ತು ಕಲಬುರಗಿಯ ಆಳಂದದಲ್ಲಿ ನಡೆದಿದೆ ಎನ್ನಲಾದ ಮತದಾರರ ಪಟ್ಟಿ ತಿದ್ದುಪಡಿ ಹಾಗೂ ಮತಗಳನ್ನು ತೆಗೆದುಹಾಕುವ ಪ್ರಯತ್ನಗಳು ಚರ್ಚೆಗೆ ಕಾರಣವಾಗಿವೆ. ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿವೆ.
ಕರ್ನಾಟಕದ ತಾಂತ್ರಿಕ ಶಕ್ತಿ ಬಳಸಿಕೊಳ್ಳುವ ಪ್ರಸ್ತಾಪ
ಪ್ರಿಯಾಂಕ್ ಖರ್ಗೆ ತಮ್ಮ ಪತ್ರದಲ್ಲಿ, ಕರ್ನಾಟಕವು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರವಾಗಿದ್ದು, 2,000ಕ್ಕೂ ಹೆಚ್ಚು ತಂತ್ರಜ್ಞಾನ ಕಂಪನಿಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ. ರಾಜ್ಯದ ಈ ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಂಡು, ನ್ಯಾಯಾಲಯ ಮತ್ತು ಉದ್ಯಮ ತಜ್ಞರ ಮೇಲ್ವಿಚಾರಣೆಯಲ್ಲಿ ಇವಿಎಂ ಯಂತ್ರಗಳ ಸಮಗ್ರ ಆಡಿಟ್ ನಡೆಸಲು ಕರ್ನಾಟಕ ಸಿದ್ಧವಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ. ಈ ಆಡಿಟ್, ಚುನಾವಣಾ ಪ್ರಕ್ರಿಯೆಯಲ್ಲಿನ ಸಂಭಾವ್ಯ ದೋಷಗಳನ್ನು ಗುರುತಿಸಿ, ಸರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಚುನಾವಣಾ ಆಯೋಗದ ವಿಳಂಬಕ್ಕೆ ಅಸಮಾಧಾನ
ತಮ್ಮ ಪ್ರಸ್ತಾವನೆಗೆ ಚುನಾವಣಾ ಆಯೋಗವು ಈವರೆಗೂ ಪ್ರತಿಕ್ರಿಯಿಸದಿರುವುದಕ್ಕೆ ಸಚಿವ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಚುನಾವಣಾ ಆಯೋಗವು ಜನರ ಆಶಯಗಳಿಗೆ ಸ್ಪಂದಿಸಿ, ಈ ಆಡಿಟ್‌ಗೆ ಒಪ್ಪಿಗೆ ನೀಡಬೇಕು," ಎಂದು ಅವರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ ಅವರೂ ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿದ್ದರು.
ತಾಂತ್ರಿಕ ದೋಷಗಳ ಕಾರಣ ನೀಡಿ ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳು 2009ರಲ್ಲೇ ಇವಿಎಂ ಬಳಕೆಯನ್ನು ಕೈಬಿಟ್ಟಿರುವುದನ್ನು ಭಾರತವು ಒಂದು ಪಾಠವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೆ, 2019ರ 'ಜರ್ನಲ್ ಆಫ್ ಸೈಬರ್‌ಸೆಕ್ಯುರಿಟಿ' ವರದಿಯನ್ನು ಉಲ್ಲೇಖಿಸಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವಿಎಂ ತಂತ್ರಜ್ಞಾನದ ದುರ್ಬಳಕೆಯಾಗುವ ಸಾಧ್ಯತೆಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.