ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಿಂದ ಸಿಬಿಎಸ್‌ಇ, ಐಸಿಎಸ್‌ಇ ಅನುಸರಣೆ ನಿಷೇಧ
ರಾಜ್ಯ ಪಠ್ಯಕ್ರಮ ಅನುಮತಿ ಇರುವ ಅನೇಕ ಖಾಸಗಿ ಶಾಲೆಗಳಲ್ಲಿ ರಾಜ್ಯ ಸಿಲೆಬಸ್ ಜತೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಸಿ) ಅಥವಾ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್‌ಸಿ) ಪಠ್ಯಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ
ರಾಜ್ಯ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದ ಖಾಸಗಿ ಶಾಲೆಗಳು ಸಿಬಿಎಸ್‌ಸಿ ಅಥವಾ ಐಸಿಎಸ್‌ಸಿ ಪಠ್ಯಕ್ರಮಗಳನ್ನು ಮಕ್ಕಳಿಗೆ ಬೋಧಿಸುವಂತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.
ರಾಜ್ಯ ಪಠ್ಯಕ್ರಮ ಅನುಮತಿ ಇರುವ ಅನೇಕ ಖಾಸಗಿ ಶಾಲೆಗಳಲ್ಲಿ ರಾಜ್ಯ ಸಿಲೆಬಸ್ ಜತೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಸಿ) ಅಥವಾ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್‌ಸಿ) ಪಠ್ಯಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಪ್ರಮುಖವಾಗಿ ಪ್ರೌಢ ಶಿಕ್ಷಣದಲ್ಲಿ ರಾಜ್ಯ ಪಠ್ಯಕ್ರಮ ಬಿಟ್ಟು ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಪಠ್ಯಕ್ರಮ ಅನುಸರಿಸಿ, ಪಿಯುಸಿ ಫಲಿತಾಂಶಗಳ ಶೇಖಡಾವಾರು ಅಂಕಗಳ ಹೆಚ್ಚಳಕ್ಕೆ ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ.
ಜತೆಗೆ, ಇಂತಹ ಶಾಲೆಗಳು ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಬೋರ್ಡ್ ಪರವಾನಗಿ ಪಡೆಯಲೂ ಯತ್ನಿಸುತ್ತಿವೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದ ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳನ್ನೇ ಅನುಸರಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದ, ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಶಾಲೆಗಳೂ ರಾಜ್ಯ ಪಠ್ಯಕ್ರಮ ಹೊರತುಪಡಿಸಿ ಇತರೆ ಯಾವುದೇ ಪಠ್ಯಕ್ರಮ, ಪಠ್ಯಪುಸ್ತಕ ಅನುಸರಿಸುವಂತಿಲ್ಲ, ಹಾಗೆ ಮಾಡಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುವುದು," ಎಂದು ಇಲಾಖೆಯ ಆಯುಕ್ತರು ಹೇಳಿದ್ದಾರೆ.