ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಲು ಶರತ್ತು ಹಾಕಿದ ಪ್ರೀತಂ ಗೌಡ
x

ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಲು ಶರತ್ತು ಹಾಕಿದ ಪ್ರೀತಂ ಗೌಡ


ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಲು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರು ಒಂದು ಷರತ್ತು ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಮಂಗಳವಾರ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಮನ್ವಯ ಸಭೆ ನಡೆಯಿತು. ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಮುನಿಸಿಕೊಂಡಿರುವ ಮಾಜಿ ಶಾಸಕ ಪ್ರೀತಂ ಗೌಡರ ಮನವೊಲಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ.

ಸಭೆ ಬಳಿಕ ವಿಜಯೇಂದ್ರ ಜೊತೆ ಪ್ರೀತಂಗೌಡ ನಗುತ್ತಲೇ ಹೊರ ಬಂದರು. ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡೋದಾಗಿ ಪ್ರೀತಂಗೌಡ ಸಮ್ಮತಿಸಿದ್ದಾರೆ, ಆದರೆ ಒಂದು ಶರತ್ತು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಗೆ ಮಾಜಿ ಶಾಸಕ ಎಟಿ ರಾಮಸ್ವಾಮಿ ಸಭೆಗೆ ಗೈರಾಗಿದ್ದರು.

ಪ್ರೀತಂ ಗೌಡ ಹೇಳಿದ್ದೇನು?

ʼʼಎಲ್ಲರೂ ಜೊತೆಯಲ್ಲೇ ಹೋಗಿ ನಾಮಪತ್ರ ಸಲ್ಲಿಕೆ ಮಾಡ್ತೀವಿ. ನಾನು ಕೂಡ ಅವತ್ತು ಹೋಗುತ್ತಿದ್ದು, ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ನಾನು ಮಾತನಾಡಲ್ಲ ಆದ್ರೆ ಕೆಲಸ ಮಾಡ್ತೀನಿʼʼ ಎಂದು ಹೇಳಿದ್ದಾರೆ.

ಆ ಬಳಿಕ ಮಾತನಾಡಿದ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ʼʼಇವತ್ತು ವಿಜಯೇಂದ್ರ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಹಾಸನ ಜಿಲ್ಲೆಯ ಬಿಜೆಪಿ ಮುಖಂಡರ ಸಭೆ ಕರೆದಿದ್ದರು. ಸಭೆಗೆ ಎನ್ಡಿಎ ಅಭ್ಯರ್ಥಿಯಾಗಿ ನನಗೆ ಆಹ್ವಾನ ಕೊಟ್ಟಿದ್ದರು. ಸಭೆಯಲ್ಲಿ ಮಾತುಕತೆ ನಡೆಸಲಾಗಿದೆʼʼ ಎಂದು ತಿಳಿಸಿದರು.

ʼʼವಿಜಯೇಂದ್ರ ಅವರು ಬಿಜೆಪಿ ಮುಖಂಡರ ಮನವೊಲಿಸುತ್ತಾರೆ. ಪ್ರೀತಂ ಗೌಡ ಜೊತೆಯಲ್ಲಿನ ಭಿನ್ನಮತ ಕೂಡ ಶಮನವಾಗಲಿದೆ. ಏಪ್ರಿಲ್ ನಾಲ್ಕರಂದು ಬೆಂಬಲಿಗರ ಜೊತೆ ಬಂದು ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಅವತ್ತು ಎಲ್ಲರೂ ಒಗ್ಗಟ್ಟಾಗಿ ಹೋಗಿ ನಾಮಪತ್ರ ಸಲ್ಲಿಸುತ್ತೇವೆʼʼ ಎಂದರು.

ಈ ಸಭೆಯಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್, ಸಿಮೆಂಟ್ ಮಂಜು, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Read More
Next Story