ಲಂಚ ನೀಡಲು ನಿರಾಕರಿಸಿದ ಕೈದಿಗೆ ಹಲ್ಲೆ: ಮಹಿಳಾ ಆಯೋಗಕ್ಕೆ ದೂರು ನೀಡಿದ ತಾಯಿ
x

ಪರಪ್ಪನ ಅಗ್ರಹಾರ 

ಲಂಚ ನೀಡಲು ನಿರಾಕರಿಸಿದ ಕೈದಿಗೆ ಹಲ್ಲೆ: ಮಹಿಳಾ ಆಯೋಗಕ್ಕೆ ದೂರು ನೀಡಿದ ತಾಯಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಬಳಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೆ ಆತನಿಗೆ ಹಲ್ಲೆ ನಡೆಸಲಾಗಿದೆ ಎಂದು ಆತನ ತಾಯಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.


ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ವಿರುದ್ಧ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಕೈದಿ ಬಳಿ ಲಂಚಕ್ಕೆ ಬೇಡಿಕೆ ಇಡುವುದರ ಜೊತೆಗೆ ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಆತನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

2024ರಲ್ಲಿ ಸೊಲದೇವನಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟ ಹಮೀದ್ ಎಂಬಾತ ಅಕ್ಟೋಬರ್ 4ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾಧೀನ ಕೈದಿಗಳ ವಿಭಾಗದಲ್ಲಿ ಇರಿಸಲಾಗಿದೆ. ಆತನ ಬಳಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಕೊಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆತನ ತಾಯಿ ದೂರಿದ್ದಾರೆ.

ದೂರಿನಲ್ಲೇನಿದೆ?

ಏಪ್ರಿಲ್ 5ರ ರಾತ್ರಿ 6 ರಿಂದ 7 ಅಧಿಕಾರಿಗಳು ತನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ 30 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದಾರಂತೆ. ಹಣ ನೀಡದಿದ್ದರೆ ಮತ್ತಷ್ಟು ಸಮಸ್ಯೆ ಮಾಡುವುದಾಗಿ ಬೆದರಿಸಿದ್ದಾರೆ. ಹಲ್ಲೆಯ ಗಾಯಗಳಿಗೆ ಚಿಕಿತ್ಸೆ ಕೊಡಿಸದೇ, ಆಹಾರ ನೀಡದೇ ಕಿರುಕುಳ ನೀಡಿದ್ದಾರೆ ಎಂದು ಹಮೀದ್​ನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದ ಅಕ್ರಮಗಳು ಪದೇ ಪದೇ ಬಯಲಾಗುತ್ತಿದ್ದು, ಕಳೆದ ವರ್ಷ ನಟ ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ಕೊಟ್ಟ ಆರೋಪ ಬಯಲಾಗಿತ್ತು. ಅಕ್ರಮ ಚಟುವಟಿಕೆಗಳ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೈಲನ್ನು ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಇನ್ನೂ ಕಾರ್ಯಗತವಾಗಿಲ್ಲ.

Read More
Next Story