ಬೈಕ್‌ನಿಂದ ಬಿದ್ದು ಗಾಯಗೊಂಡ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ
ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ನೆರವಿಗೆ ಮುಸ್ಲಿಂ ಬಾಂಧವರು ಧಾವಿಸಿದ್ದಾರೆ.
ಬೈಕ್‌ನಿಂದ ರಸ್ತೆ ಬಿದ್ದು ಗಾಯಗೊಂಡ ಅರ್ಚಕರೊಬ್ಬರಿಗೆ ಮಸೀದಿಯಲ್ಲಿ ಕರದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿರುವ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.
ನೆಟ್ಟಣಿಗೆ ಮುಡೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾನ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ, ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ನೆರವಿಗೆ ಮುಸ್ಲಿಂ ಬಾಂಧವರು ಧಾವಿಸಿದ್ದಾರೆ.
ಕಾಲಿಗೆ ಗಾಯವಾಗಿ, ರಕ್ತಸ್ರಾವ ಆಗುತ್ತಿದ್ದ ಅವರನ್ನು ಮಸೀದಿಯಲ್ಲಿದ್ದವರು ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿದರು. ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಗಾಯಾಳುವನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಲು ನೆರವಾದರು. ಚಿಕಿತ್ಸೆ ಪಡೆದ ಬಳಿಕ ಮಸೀದಿಗೆ ಮರಳಿದ ಅರ್ಚಕರು ಸುಮಾರು 2 ಗಂಟೆ ಮಸೀದಿಯಲ್ಲೇ ವಿಶ್ರಾಂತಿ ಪಡೆದರು. ನಂತರ ಈಶ್ವರಮಂಗಲದ ಸಂದೀಪ್ ಕಾರಂತ ಎಂಬುವರು ಬಂದು ರಘುರಾಮ ಭಟ್ ಅವರನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋದರು ಎಂದು ಮೂಲಗಳು ತಿಳಿಸಿವೆ.