Price Hike | ಏ. 2ರಿಂದ ಅಹೋರಾತ್ರಿ ಧರಣಿ, ಏ.7ರಿಂದ ಜನಾಕ್ರೋಶ ಯಾತ್ರೆ: ಬಿಜೆಪಿ ನಿರ್ಧಾರ
x

Price Hike | ಏ. 2ರಿಂದ ಅಹೋರಾತ್ರಿ ಧರಣಿ, ಏ.7ರಿಂದ ಜನಾಕ್ರೋಶ ಯಾತ್ರೆ: ಬಿಜೆಪಿ ನಿರ್ಧಾರ

ಬೆಲೆ ಏರಿಕೆ ಸೇರಿದಂತೆ ಅನೇಕ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರದ ಬಡವರಿಗೆ ಬರೆ ಹಾಕುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಏಪ್ರಿಲ್ 2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದೆ.


ಬೆಲೆ ಏರಿಕೆ ಸೇರಿದಂತೆ ಅನೇಕ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರದ ಬಡವರಿಗೆ ಬರೆ ಹಾಕುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಏಪ್ರಿಲ್ 2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಯಿಂದ ಬೆಲೆ ಏರಿಕೆಯ ಕಾಂಗ್ರೆಸ್ ಸರಕಾರದ ವಿರುದ್ಧ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯದ ಎಲ್ಲ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಈ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಏ.5ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲ್ಲೂಕುಗಳಲ್ಲಿ, ಮಂಡಲದಲ್ಲಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಎಂದರು.

ಜತೆಗೆ, ಬಿಜೆಪಿಯ 8 ಶಾಸಕರನ್ನು ಅಮಾನತು ಮಾಡಿದ್ದನ್ನು ಆಕ್ಷೇಪಿಸಿ ಅದೇದಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಜನಾಕ್ರೋಶ ಯಾತ್ರೆ

ಏಪ್ರಿಲ್ 7ರಂದು ಮಧ್ಯಾಹ್ನ 3ಕ್ಕೆ ಮೈಸೂರಿನಿಂದ ಜನಜಾಗೃತಿ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೋರಾಟಕ್ಕೆ ಚಾಲನೆ ಕೊಡಲಿದ್ದಾರೆ. ಕೇಂದ್ರದ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ ಅವರ ಜೊತೆ ಚರ್ಚಿಸಿದ್ದೇನೆ. ಜನಾಕ್ರೋಶ ಯಾತ್ರೆ ಇದಾಗಿದೆ. 7ರಂದು ಮೈಸೂರು, ಚಾಮರಾಜನಗರ ಜಿಲ್ಲೆ, 8ರಂದು ಬೆಳಿಗ್ಗೆ ಮಂಡ್ಯ, ಮಧ್ಯಾಹ್ನ ಹಾಸನದಲ್ಲಿ ಹೋರಾಟ ಇದೆ. 9ರಂದು ಕೊಡಗು- ಮಂಗಳೂರಿನಲ್ಲಿ ಹೋರಾಟ, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಹೋರಾಟ ಇದೆ ಎಂದರು.

13ರಿಂದ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಎರಡನೇ ಹಂತದ ಹೋರಾಟ ಇರುತ್ತದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇದು ಸಂಚರಿಸಲಿದೆ ಎಂದು ವಿವರಿಸಿದರು. ಪ್ರತಿ ಜಿಲ್ಲೆಯಲ್ಲಿ ನಗರದಲ್ಲಿ 2-3 ಕಿಮೀ ಪಾದಯಾತ್ರೆ, ಬಳಿಕ ಸಭೆ ನಡೆಯಲಿದೆ. ಮುಖಂಡರು ಭಾಗವಹಿಸುತ್ತಾರೆ ಎಂದರು.

ಕೇವಲ ಮುಸ್ಲಿಮರಿಗೇಕೆ ಯೋಜನೆ?

ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ, ಮುಸಲ್ಮಾನರಿಗೆ ಓಲೈಕೆ ಮಾತ್ರವಲ್ಲದೆ ಹಿಂದೂಗಳಿಗೆ ಅಪಮಾನ ಮಾಡಲಾಗಿದೆ. ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ 4 ಮೀಸಲಾತಿ ನೀಡಿದ್ದು, ಕಾನೂನಿನ ವಿರುದ್ಧವಾಗಿದೆ. ಉನ್ನತ ಶಿಕ್ಷಣಕ್ಕೆ ಹೊರದೇಶಕ್ಕೆ ಹೋಗುವ ಮುಸಲ್ಮಾನ ವಿದ್ಯಾರ್ಥಿಗಳಿಗೆ 20 ಲಕ್ಷ ಇದ್ದುದನ್ನು 30 ಲಕ್ಷಕ್ಕೆ ಏರಿಸಿದ್ದಾರೆ. ಹಿಂದೆ ಮುಸಲ್ಮಾನ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ನೀಡಿದ್ದರು. ಇದೀಗ ಮುಸ್ಲಿಂ ಹೆಣ್ಮಕ್ಕಳ ಆತ್ಮರಕ್ಷಣೆಗೆ ನೂರಾರು ಕೋಟಿಯನ್ನು ರಾಜ್ಯ ಸರಕಾರ ವೆಚ್ಚ ಮಾಡುತ್ತಿದೆ; ಇಮಾಮರ ವೇತನ ಹೆಚ್ಚಿಸಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೇವಲ ಮುಸ್ಲಿಮರಿಗೆ ಮಾತ್ರ ಇಂಥ ಯೋಜನೆಗಳು ಏಕೆ? ಮೋದಿಜೀ ಅವರು ಜನಧನ ಸೇರಿ ಹಲವು ಯೋಜನೆ ಜಾರಿಗೊಳಿಸಿದ್ದು, ಎಲ್ಲರಿಗೂ ಅವಕಾಶ ನೀಡಿದ್ದಾರೆ. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ; ಮುಸ್ಲಿಮರು ಸೇರಿ ಎಲ್ಲರಿಗೂ ಕೊಟ್ಟಿದ್ದಾರೆ ಎಂದು ವಿವರಿಸಿದರು. ಹಿಂದೂಗಳ ಅವಮಾನವನ್ನು ನಾವು ಖಂಡಿಸುತ್ತೇವೆ. ಸಿದ್ದರಾಮಯ್ಯನವರು ಹಾಲುಮತ ಸಮುದಾಯ, ಕಾಯಕ ಸಮುದಾಯಗಳ ನಿರ್ಲಕ್ಷಿಸಿದ್ದಾರೆ ಎಂದು ಟೀಕಿಸಿದರು.

38,860 ಕೋಟಿ ದುರುಪಯೋಗ

ಶೋಷಿತರು, ಪೀಡಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಅನುದಾನದಲ್ಲಿ ಕಾಂಗ್ರೆಸ್ ಸರಕಾರವು 2023-24ರಲ್ಲಿ 11,144 ಕೋಟಿಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. 2024-25ರಲ್ಲಿ 14,282 ಕೋಟಿ ಹಣ ಬೇರೆ ಕಡೆಗೆ ವರ್ಗಾಯಿಸಿದ್ದಾರೆ. 2025-26ರಲ್ಲಿ ಇದು 13,433 ಕೋಟಿ. ಒಟ್ಟಾರೆಯಾಗಿ ಕಾಂಗ್ರೆಸ್ ಸರಕಾರವು 38,860 ಕೋಟಿಯಷ್ಟು ಹಣವನ್ನು ಬೇರೆ ಕಡೆ ವರ್ಗಾಯಿಸಿ, ದುರುಪಯೋಗ ಮಾಡಿಕೊಂಡಿದೆ ಎಂದು ವಿಜಯೇಂದ್ರ ಅವರು ಟೀಕಿಸಿದರು.

ಬೆಲೆ ಏರಿಕೆ

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಪೆಟ್ರೋಲ್, ಡೀಸೆಲ್, ಸ್ಟಾಂಪ್ ಶುಲ್ಕ, ಹಾಲಿನ ದರ, ಮೆಟ್ರೊ ದರ ಏರಿಸುವ ಮೂಲಕ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಜನಸಾಮಾನ್ಯರ ಮೇಲೆ ಬರೆ ಹಾಕುತ್ತಿದೆ ಎಂದು ಆಕ್ಷೇಪಿಸಿದರು.

ದೇಶದಲ್ಲೇ ಅತ್ಯಂತ ದುಬಾರಿ ಜೀವನವನ್ನು ಈ ನಾಡಿನ ಜನ ನಡೆಸಬೇಕಾದ ದುಸ್ಥಿತಿಗೆ ಕಾಂಗ್ರೆಸ್ ಕಾರಣವಾಗಿದೆ. ಸೇವಿಸುವ ಗಾಳಿಯೊಂದನ್ನು ಬಿಟ್ಟರೆ ಉಳಿದೆಲ್ಲವುಗಳ ದರ ಏರಿಸಲಾಗಿದೆ. ಸಾಮಾನ್ಯ ಜನರು, ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳದ ಸರಕಾರ ಇದು. ಮತದಾರರಿಗೆ ಶಾಪಗ್ರಸ್ತ ಸರಕಾರ ಇದಾಗಿದೆ ಎಂದು ಟೀಕಿಸಿದರು.

ವಿದ್ಯುತ್ ದರ ಪ್ರತಿ ಯೂನಿಟ್‍ಗೆ ಏಪ್ರಿಲ್ 1ರಿಂದ 36 ಪೈಸೆ ಹೆಚ್ಚಲಿದೆ. ಹಾಲಿನ ದರ 3 ಬಾರಿ ಏರಿಸಿದ್ದಾರೆ. ಬಡವರ ವೈದ್ಯಕೀಯ ವೆಚ್ಚ ಹೆಚ್ಚಾಗಿದೆ. ಹೊರ ರೋಗಿ ನೋಂದಣಿ ಶುಲ್ಕ 10 ರೂ ಇದ್ದುದನ್ನು ರೂ. 20ಕ್ಕೆ ಏರಿಸಿದ್ದಾರೆ. ಮರಣೋತ್ತರ ಪ್ರಮಾಣಪತ್ರವನ್ನು 250 ಇದ್ದುದನ್ನು 300 ರೂ. ಹೆಚ್ಚಿಸಿದ್ದಾರೆ. ವೈದ್ಯಕೀಯ ಪ್ರಮಾಣಪತ್ರವನ್ನು 250 ಇದ್ದುದನ್ನು 300 ರೂ. ಹೆಚ್ಚಿಸಿದ್ದಾರೆ. ದಾಖಲಾತಿ ಶುಲ್ಕ, ಲ್ಯಾಬ್ ಪರೀಕ್ಷಾ ಶುಲ್ಕ ಹೆಚ್ಚಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುವ ಬಡವರು ಹೆಚ್ಚುವರಿ ಶುಲ್ಕ ಕೊಡಬೇಕಾಗಿದೆ ಎಂದು ಆಕ್ಷೇಪಿಸಿದರು.

ಮುದ್ರಾಂಕ ಶುಲ್ಕದಡಿ ದತ್ತು ಸ್ವೀಕಾರ ಶುಲ್ಕ 500 ರೂ. ಇತ್ತು. ಅದನ್ನು 1 ಸಾವಿರ ರೂ. ಮಾಡಿದ್ದಾರೆ. ಅಫಿಡವಿಟ್‍ಗಳ ಮೊತ್ತವನ್ನು 20 ರೂ. ಇದ್ದುದು 100 ರೂಗೆ ಏರಿಸಿದ್ದಾರೆ. ಕ್ಯಾನ್ಸಲೇಶನ್ ಡೀಡ್ 100 ರೂ. ಇದ್ದುದನ್ನು 500ಕ್ಕೆ ಏರಿಸಿದ್ದಾರೆ. ಅಡಮಾನ ಪತ್ರ ಶುಲ್ಕವನ್ನು ರೂ. 100ರಿಂದ 200ಕ್ಕೆ ಏರಿಸಿದ್ದಾರೆ ಎಂದು ದೂರಿದರು.

ವೃತ್ತಪರ ತೆರಿಗೆ 1200 ರೂ. ಇದ್ದುದನ್ನು 2500 ರೂ.ಗೆ ಏರಿಸಿದ್ದಾರೆ. ಮುದ್ರಾಂಕ ಶುಲ್ಕ ಜಾಸ್ತಿ ಮಾಡಿದ್ದಾರೆ. ಬಸ್ ಪ್ರಯಾಣದರ ಹೆಚ್ಚಿಸಿದ್ದಾರೆ. ರೈತರಿಗೆ ತೊಂದರೆ ಕೊಡಲೆಂದೇ ಬಿತ್ತನೆ ಬೀಜದ ದರ ಹೆಚ್ಚಿಸಿದ್ದಾರೆ. ನೀರಿನ ಸುಂಕ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ. ಮತದಾರರಿಗೆ ಬೆಲೆ ಏರಿಕೆಯ ಮೂಲಕ ಶಾಪವನ್ನು ಈ ಸರಕಾರ ನೀಡಿದೆ ಎಂದು ಆರೋಪಿಸಿದರು.


Read More
Next Story