ಪ್ರತಿಷ್ಠಿತ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ : ಪಂಡಿತ್‌ ಕೆ.ವೆಂಕಟೇಶ್ ಕುಮಾರ್ ಆಯ್ಕೆ
x

. ಕೆ. ವೆಂಕಟೇಶ್ ಕುಮಾರ್ 

ಪ್ರತಿಷ್ಠಿತ 'ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿ : ಪಂಡಿತ್‌ ಕೆ.ವೆಂಕಟೇಶ್ ಕುಮಾರ್ ಆಯ್ಕೆ

ಡಾ. ವೈ. ಕೆ. ಮುದ್ದುಕೃಷ್ಣ ಅವರ ನೇತೃತ್ವದ ಆಯ್ಕೆ ಸಲಹಾ ಸಮಿತಿಯು ಪಂಡಿತ್‌ ವೆಂಕಟೇಶ್ ಕುಮಾರ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ್‌ ತಂಗಡಗಿ ತಿಳಿಸಿದರು.


Click the Play button to hear this message in audio format

ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಎಂ.ವೆಂಕಟೇಶಕುಮಾರ್‌ ಅವರನ್ನು ಪ್ರಸಕ್ತ ವರ್ಷದ ಪ್ರತಿಷ್ಠಿತ 'ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆ ಮುಂಭಾಗದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 5 ಲಕ್ಷ ರೂ.ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಸೆ.22ರಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಎಂ.ವೆಂಕಟೇಶಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ವೈ.ಕೆ.ಮುದ್ದುಕೃಷ್ಣ ನೇತೃತ್ವದ ಆಯ್ಕೆ ಸಲಹಾ ಸಮಿತಿಯು ಪಂಡಿತ್‌ ವೆಂಕಟೇಶ್ ಕುಮಾರ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಗೂ ಲಕ್ಷಾಂತರ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಖ್ಯಾತ ಗಾಯಕ ಡಾ. ಎಂ. ವೆಂಕಟೇಶಕುಮಾರ್ ಅವರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದಲ್ಲಿ ಜನಿಸಿದವರು. ಇವರ ಸಂಗೀತದ ಪಯಣವು ಜಾನಪದ ಸಂಪ್ರದಾಯದಿಂದ ಆರಂಭಗೊಂಡು ವಿಶ್ವದಾದ್ಯಂತ ವ್ಯಾಪಿಸಿದೆ.

ಸಂಗೀತದ ಬಗ್ಗೆ ಅಪಾರ ಒಲವು ಹೊಂದಿದ್ದ ವೆಂಕಟೇಶಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿದ ಪಂಡಿತ್‌ ಪುಟ್ಟರಾಜ ಗವಾಯಿ ಅವರು ಗದಗಿನ ತಮ್ಮ ಗುರುಕುಲ ಆಶ್ರಮದಲ್ಲಿ ಗಾನ ವಿದ್ಯೆಯನ್ನು ಧಾರೆಯೆರೆದರು. ಕಿರಾಣಾ ಮತ್ತು ಗ್ವಾಲಿಯರ್ ಘರಾಣೆಗಳ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡ ಇವರು, ನಂತರ ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕಲಾವಿದರಾಗಿ ಮಾತ್ರವಲ್ಲದೆ ಶಿಕ್ಷಕ ವೃತ್ತಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಮಾರ್ಚ್ 2015 ರಲ್ಲಿ ನಿವೃತ್ತರಾದರು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನವನ್ನು ಧಾರೆ ಎರೆದ ಇವರು, ಕರ್ನಾಟಕದ ಸಂಗೀತ ಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಡಾ. ಎಂ. ವೆಂಕಟೇಶಕುಮಾರ್ ಅವರ ಸಂಗೀತ ಸಾಧನೆಗಳು, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆಯಾಗಿದ್ದು, ಅವರ ಧ್ವನಿ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ದೇಶ ಮತ್ತು ವಿದೇಶಗಳಲ್ಲಿ ತಮ್ಮ ಅದ್ಭುತ ಗಾಯನದಿಂದ ಪಂಡಿತ್ ವೆಂಕಟೇಶ್ ಕುಮಾರ್ ಅವರು ವ್ಯಾಪಕ ಜನಪ್ರಿಯತೆ ಗಳಿಸಿದ್ದಾರೆ. ವಿಶೇಷವಾಗಿ ಕನ್ನಡದ ದಾಸರ ಪದಗಳು ಮತ್ತು ವಚನಗಳಿಗೆ ನೀಡಿದ ಕೊಡುಗೆ ಅಪಾರ. ಅವರ ʼತೊರೆದು ಜೀವಿಸಬಹುದೇʼ ಮತ್ತು ʼಕಲಿಯುಗದೊಳು ಹರಿನಾಮವ ನೆನೆದರೆʼ ನಂತಹ ಭಕ್ತಿಗೀತೆಗಳು ಸಂಗೀತ ಪ್ರಿಯರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ.

Read More
Next Story