ಸಿಎಂ ಬದಲಾವಣೆಗೆ ಕಾಂಗ್ರೆಸ್ಸಿನಲ್ಲೇ ಅವಸರ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ
ಸಿಎಂ ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದರು
ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲೇ ಬಹಳಷ್ಟು ಚಟುವಟಿಕೆ ನಡೆಯುತ್ತಿದೆ. ವಿಶೇಷವಾಗಿ ಹಿರಿಯ ಸಚಿವರು ಒಬ್ಬೊಬ್ಬರಾಗಿ ದೆಹಲಿ ಭೇಟಿ ನೀಡುತ್ತಿರುವುದು ನೋಡಿದರೆ ಗೊತ್ತಾಗಲಿದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದು ದೂರಿದರು.
ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಇಂತಹ ಸರ್ಕಾರ ಪಡೆದಿರುವುದು ಕರ್ನಾಟಕದ ದೌರ್ಭಾಗ್ಯ. ಆದರೆ, ಈ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ನಾವು ಎಂದಿಗೂ ಮಾಡುವುದಿಲ್ಲ, ಅವರೇ ತೊಂದರೆ ಮಾಡಿಕೊಂಡರೆ ಜವಾಬ್ದಾರಿ ನಾವಲ್ಲ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಯಾವುದೇ ಕೆಲಸಕ್ಕೆ ಭೇಟಿಯಾಗಿರಬಹುದು. ನಮ್ಮ ಹೈಕಮಾಂಡ್ ಬಹಳ ಸ್ಪಷ್ಟವಾಗಿದೆ. ಈ ಸರ್ಕಾರ ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ದಸರಾ ನಂತರ ಸಿಎಂ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ, ಅವರ ಲೆಕ್ಕಾಚಾರದಲ್ಲಿ ಹೇಳಿದ್ದಾರೆ. ನನ್ನ ಪ್ರಕಾರ ಸಿಎಂ ರಾಜೀನಾಮೆ ನೀಡಲು ಮಾನಸಿಕವಾಗಿ ತಯಾರಿ ಆಗುತ್ತಿದ್ದಾರೆ ಎಂದು ಹೇಳಿದರು.
ಜಾತಿ ಗಣತಿ ಚರ್ಚೆಯಾಗಲಿ
ಜಾತಿಗಣತಿ ವಿಷಯವಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಅವರು ಮನದಾಳದ ಮಾತು ಹೇಳಿದ್ದಾರೆ. ಜಾತಿಗಣತಿ ಮುಖ್ಯನೋ ಸರ್ಕಾರ ಬೀಳೋದು ಮುಖ್ಯವೋ ಅನ್ನುವುದನ್ನೂ ಅವರೇ ಸ್ಪಷ್ಟಪಡಿಸಲಿ. ಜಾತಿಗಣತಿ ಪ್ರಕ್ರಿಯೆ ಅಲ್ಲ, ಅದು ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಮಾಡಿದ್ದು. ನಿಖರವಾಗಿ ಜಾತಿಗಣತಿಯ ಆದೇಶವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಸಮಿತಿ ಕೊಟ್ಟ ವರದಿಯನ್ನು ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದರು.
ಜಯಪ್ರಕಾಶ್ ಹೆಗಡೆ ಅವರು ಆಯೋಗದ ಅಧ್ಯಕ್ಷರಾಗಿ 2-3 ತಿಂಗಳಲ್ಲಿ ಹೇಗೆ ವರದಿ ಕೊಡುತ್ತಾರೆ? ಕಾಂತರಾಜ್ ಅವರು 2-3 ವರ್ಷ ಡಾಟಾ ತೆಗೆದುಕೊಂಡಿದ್ದರು. ಈಗ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗಗಳ ಉದ್ದಾರ ಮಾಡುತ್ತೇವೆ ಅಂತ ಹೇಳುತ್ತಾರೆ. ಮೊದಲು ತಮ್ಮಲ್ಲಿರುವ ಗೊಂದಲ ಸ್ಪಷ್ಟಪಡಿಸಿಕೊಳ್ಳಲಿ. ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು. ಹಿಂದುಳಿದವರಿಗೆ ಹೆಚ್ಚಿನ ಕಾರ್ಯಕ್ರಮ ಬರಬೇಕು. ಜಾತಿಗಣತಿ ಬಿಡುಗಡೆ ಮಾಡಿ ಅಂತ ಮೊನ್ನೆಯೇ ಹೇಳಿದ್ದೇನೆ. ವರದಿಕೊಟ್ಟು 8-10 ತಿಂಗಳಾಯಿತು ಯಾಕೆ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮುಡಾ ಹಗರಣದ ಆರೋಪ ಬಂದಮೇಲೆ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮಾತಾಡುತ್ತಾರೆ. ಜಾತಿ ಗಣತಿ ವರದಿ ಬಿಡುಗಡೆಗೆ ಅವರ ಪಕ್ಷದಲ್ಲಿ ಮೊದಲಿನಿಂದಲೂ ವಿರೋಧ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಶಾಮನೂರ ಶಿವಶಂಕರಪ್ಪ ವಿರೋಧಿಸಿ ಸಹಿ ಮಾಡಿಕೊಟ್ಟಿದ್ದಾರೆ. ಅವರಲ್ಲಿಯೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ. ಆದಷ್ಟು ಬೇಗ ಜಾತಿಗಣತಿ ವರದಿ ಹೊರಬಂದು ಚರ್ಚೆಯಾಗಲಿ ಎಂದು ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮರು ಸ್ಥಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ಮಾಹಿತಿ ಇಲ್ಲ.ಅವರು ಮೊನ್ನೆಯೇ ಹೇಳಿದ್ದಾರೆ ಮಾಡಲಿ. ನಮ್ಮ ಪಕ್ಷ ತನ್ನದೇ ಕಾರ್ಯಕರ್ತರ ಪಡೆ ಹೊಂದಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಾವು ನಿರಂತರ ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕಪ್ಪತ್ತಗುಡ್ಡದ ಜೀವ ವೈವಿಧ್ಯತೆ ಕಾಪಾಡಲಿ
ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗಿದ್ದು ಅದನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ವನ್ಯ ಜೀವಿ ಮಂಡಳಿ ಸಭೆ ಮಾಡಿ, ನಿಸರ್ಗವನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದೆ, ಈಗಲೂ ಕೂಡ, ಮುಖ್ಯಮಂತ್ರಿ ಕಪ್ಪತ್ತಗುಡ್ಡದ ಜೀವ ವೈವಿಧ್ಯತೆ ಕಾಪಾಡಲು ಗಣಿಗಾರಿಕೆಯಂತಹ ಚಟುವಟಿಕೆಗೆ ನಿರ್ಬಂಧ ಹೇರಬೇಕು. ಈ ಭಾಗದ ಮೂರು-ನಾಲ್ಕು ಜಿಲ್ಲೆಯ ಪರಿಸರ ಕಾಪಾಡುವ ತೀರ್ಮಾನ ಮಾಡಬೇಕೆಂದು ಹೇಳಿದರು.