
Yatnal Expulsion | ಉಚ್ಚಾಟನೆ ಆದೇಶ ಹಿಂಪಡೆಯಲು ಒತ್ತಡ; ಹೈಕಮಾಂಡ್ ಭೇಟಿಗೆ ಯತ್ನಾಳ್ ಬಣ ನಿರ್ಧಾರ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶತಾಯಗತಾಯ ಪಕ್ಷದಲ್ಲೇ ಉಳಿಸಿಕೊಳ್ಳಲು ಕೇಂದ್ರದ ವರಿಷ್ಠರ ಮೇಲೆ ಒತ್ತಡ ಹೇರಲು ಭಿನ್ನಮತೀಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಿಂದ ಉಚ್ಚಾಟಿತರಾಗಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಕುರಿತಂತೆ ಭಿನ್ನಮತೀಯ ನಾಯಕರು ಗೌಪ್ಯ ಸಭೆ ನಡೆಸಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಶುಕ್ರವಾರ ಯತ್ನಾಳ್ ಬಣದ ನಾಯಕರ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಯತ್ನಾಳ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಭೇಟಿಗೆ ಯತ್ನಾಳ್ ಬಣ ನಿರ್ಧರಿಸಿದೆ. ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ ಭಾಗಿಯಾಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಿರುಗೇಟು ನೀಡುವ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕ ಪಕ್ಷ ಸ್ಥಾಪನೆ ವದಂತಿ ನಿರಾಕರಣೆ
ಬಿಜೆಪಿಯಿಂದ ಉಚ್ಚಾಟಿತರಾಗಿ ಸ್ವತಂತ್ರ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರತ್ಯೇಕ ಪಕ್ಷ ಸ್ಥಾಪಿಸುವ ವದಂತಿಯನ್ನು ಯತ್ನಾಳ್ ಬಣದ ನಾಯಕರು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಪರಿಸ್ಥಿತಿ ಏನಾಯಿತು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗಾಗಿ ಪ್ರತ್ಯೇಕ ಪಕ್ಷ ಸ್ಥಾಪಿಸುವ ಸಾಹಸಕ್ಕೆ ಕೈಹಾಕುವುದಿಲ್ಲ. ಬದಲಿಗೆ ಶತಾಯಗತಾಯ ಯತ್ನಾಳ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ವರಿಷ್ಠರ ಮೇಲೆ ಒತ್ತಡ ಹೇರಬೇಕು ಎಂಬ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೀಘ್ರವೇ ಯತ್ನಾಳ್ ತಂಡ ದೆಹಲಿಗೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಆದೇಶ ಹಿಂಪಡೆಯುವಂತೆ ಒತ್ತಡ ಹೇರಲು ಶೀಘ್ರವೇ ತಂಡದ ನಾಯಕರು ಒಟ್ಟಾಗಿ ದೆಹಲಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪಕ್ಷದ ಹಿರಿಯ ನಾಯಕರು. ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವುದು ಹಿಂದೂ ಸಂಘಟನೆಗಳು, ಅಭಿಮಾನಿಗಳಿಗೆ ನೋವು ತಂದಿದೆ. ಉಚ್ಚಾಟನೆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ತೊರೆಯಲ್ಲ. ಜೊತೆಗೆ ಹೊಸ ಪಕ್ಷವನ್ನೂ ಕಟ್ಟುವುದಿಲ್ಲ. ಈ ಕುರಿತಂತೆ ಈಗಾಗಲೇ ರಮೇಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ. ವರಿಷ್ಠರಿಗೆ ಸರಿಯಾದ ಮಾಹಿತಿ ನೀಡದ ಕಾರಣ ಉಚ್ಚಾಟನೆ ನಡೆದಿದೆ. ನಾವೆಲ್ಲರೂ ವರಿಷ್ಠರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಹೇಳಿದರು.
ಯಾರ ವಿರುದ್ಧವೂ ಹೋರಾಟವಲ್ಲ
ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎಂಬುದಷ್ಟೇ ನಮ್ಮ ಹೋರಾಟದ ಉದ್ದೇಶ. ತಪ್ಪು ಮಾಹಿತಿಯಿಂದ ಯತ್ನಾಳ್ ಉಚ್ಚಾಟನೆ ಆಗಿದೆ. ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ನಮ್ಮ ತಂಡ ನಿರಂತರ ಪ್ರಯತ್ನ ಮಾಡಲಿದೆ. ಎಲ್ಲರೂ ಕೂಡ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಹೈಕಮಾಂಡ್ ಭೇಟಿ ಮಾಡಿ ಹೋರಾಟದ ಹಿಂದಿರುವ ಉದ್ದೇಶಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಜೊತೆಗೆ ಪಕ್ಷ ಸುಧಾರಣೆ ನಿಟ್ಟಿನಲ್ಲಿ ಹೋರಾಟವನ್ನೂ ಮುಂದುವರಿಸುತ್ತೇವೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ರಾಜ್ಯಾಧ್ಯಕ್ಷರ ಬದಲಾವಣೆ ಖಚಿತ
ಯುಗಾದಿ ಹಬ್ಬದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನಡೆಯಲಿದೆ. ನಂತರ ರಾಜ್ಯಾಧ್ಯಕ್ಷರ ನೇಮಕ, ಬದಲಾವಣೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದಲ್ಲೂ ಬಿಜೆಪಿ ಅಧ್ಯಕ್ಷರು ಬದಲಾಗುವ ಖಚಿತ ವಿಶ್ವಾಸವಿದೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಯತ್ನಾಳ್ ಉಚ್ಚಾಟನೆ ನಮ್ಮ ಹೋರಾಟಕ್ಕೆ ದೊಡ್ಡ ಹಿನ್ನಡೆ ತಂದೊಡ್ಡಿದೆ. ಕೆಲವರ ತಪ್ಪು ಮಾಹಿತಿಯಿಂದ ಉಚ್ಚಾಟನೆ ಆಗಿರಬಹುದು. ನಮ್ಮ ಈ ಹೋರಾಟ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಅಲ್ಲ, ಯಾರೊಬ್ಬರ ಪರವೂ ಅಲ್ಲ. ಪಕ್ಷ ಸಂಘಟನೆಗಾಗಿ ನಮ್ಮ ಹೋರಾಟ. ಪಕ್ಷವನ್ನು ಸಂಘಟಿಸಿ, ಮುಂದಿನ 2028ರ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನಮ್ಮ ಎಲ್ಲರ ಉದ್ದೇಶ ಎಂದು ಹೇಳಿದರು.