ಇಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ
x
ದ್ರೌಪದಿ ಮುರ್ಮು

ಇಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

ಇಂದಿನಿಂದ ಆರು ದಿನಗಳ ಕಾಲ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ.


Click the Play button to hear this message in audio format

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿರುವ, ಸುತ್ತೂರಿನ ಶಿವರಾತ್ರಿ ಶಿವಯೋಗಿಶ್ವರರ 1066ನೇ ಜಯಂತಿ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮುರ್ಮು ಭಾಗವಹಿಸಲಿದ್ದಾರೆ. ಇಂದಿನಿಂದ ಆರು ದಿನಗಳ ಕಾಲ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ.

ಇನ್ನು ಈ ಕಾರ್ಯಕ್ರಮದ ಪ್ರಯುಕ್ತ ಮಳವಳ್ಳಿಯ ಮುನ್ಸಿಪಲ್ ಮೈದಾನದಲ್ಲಿ ಭವ್ಯ ಸಮಾರಂಭವೊಂದನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ 16ರ ಮಧ್ಯಾಹ್ನ 2.10ಕ್ಕೆ ಮೈಸೂರಿನ ಏರ್ಪೋರ್ಟ್‌ಗೆ ಆಗಮಿಸಲಿರುವ ದ್ರೌಪದಿ ಮುರ್ಮು, ಬಳಿಕ ಹೆಲಿಕಾಪ್ಟರ್‌ನಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ತೆರಳಲಿದ್ದಾರೆ. ಬಳಿಕ ಮಳವಳ್ಳಿಯಲ್ಲಿ ನಡೆಯುವ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5.25ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಹಿಂದಿರುಗುವ ರಾಷ್ಟ್ರಪತಿ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್‌ 17ರ ಬೆಳಗ್ಗೆ 9.25ಕ್ಕೆ ಮೈಸೂರಿನಿಂದ ತಿರುಪತಿಗೆ ತೆರಳಲಿದ್ದಾರೆ.

ಭಾರೀ ಬಿಗಿ ಭದ್ರತೆ

ದ್ರೌಪದಿ ಮುರ್ಮು ಮಂಡ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್‌ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿ ವಿಶಾಲ್ ಅವರ ನೇತೃತ್ವದಲ್ಲಿ ಶನಿವಾರ ಜಿಲ್ಲಾಡಳಿತದ ಮತ್ತು ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎಎಸ್‌ಎಲ್ ಸಭೆ ನಡೆಸಿದರು.

ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು,ರಾಷ್ಟ್ರಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು, ತುರ್ತು ಸೇವೆ, ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅಧಿಕಾರಿ ಧನಂಜಯ್‌ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಳವಳ್ಳಿಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಈ ಬಗ್ಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣಕ್ಕೆ ಮೊದಲಬಾರಿಗೆ ರಾಷ್ಟ್ರಪತಿ ಅವರು ಆಗಮಿಸುತ್ತಿದ್ದು, ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 3.15ಕ್ಕೆ ಮುರ್ಮು ಅವರು ಜಯಂತಿ ಮಹೋತ್ಸವ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಹಿಸುವರು. ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸುವರು. ಸಚಿವ ಎನ್.ಚಲುವರಾಯಸ್ವಾಮಿ ಪಾಲ್ಗೊಳ್ಳುವರು. 5 ದಿನ ನಿರಂತರವಾಗಿ ನಾಟಕಗಳ ಪ್ರದರ್ಶನ, ಉಪನ್ಯಾಸ, ವಾದ್ಯಗೋಷ್ಠಿ, ಸಂಗೀತ ಸಂಜೆ, ವಚನ ನೃತ್ಯರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಡಿ.21ರಂದು ಸಮಾರೋಪಗೊಳ್ಳುವುದು ಎಂದು ತಿಳಿಸಿದರು.

Read More
Next Story