ಕರ್ನಾಟಕದಲ್ಲೂ ಬಿಹಾರ ಮಾದರಿಯ SIR ಖಚಿತ;  ಚುನಾವಣಾ ಆಯೋಗದಿಂದ ಸಿದ್ಧತೆ
x

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ಅವರು ಎಸ್‌ಐಆರ್‌ ಕುರಿತು ಮಾಹಿತಿ ನೀಡಿದರು

ಕರ್ನಾಟಕದಲ್ಲೂ ಬಿಹಾರ ಮಾದರಿಯ SIR ಖಚಿತ; ಚುನಾವಣಾ ಆಯೋಗದಿಂದ ಸಿದ್ಧತೆ

ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲೂ ಅರ್ಜಿ ಹಾಕಬಹುದು. ಎರಡು ಕಡೆ ಹೆಸರು ಇದ್ದರೆ ಫೋಟೋ ಸ್ಕ್ಯಾನಿಂಗ್ ಸಿಸ್ಟಮ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲಿಸಲಾಗುವುದು.


ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಬೆನ್ನಲ್ಲೇ ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (SIR) ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಬೆಂಗಳೂರಿನಲ್ಲಿ ಬುಧವಾರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಮಹತ್ವದ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ 2002 ರಲ್ಲಿ ಎಸ್‌ಐಆರ್ (Special Intensive Revision) ಪ್ರಕ್ರಿಯೆ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು (BLO) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002 ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025 ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ ಎಂದು ವಿವರಿಸಿದರು.

ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಬಿಎಲ್ಒಗಳು ಮೂರು ಬಾರಿ ಭೇಟಿ ನೀಡಿ, ಪಕ್ಕದ ಮನೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಫೋಟೋ ಒದಗಿಸಬೇಕು. ಪ್ರತಿಯೊಬ್ಬ ಮತದಾರರು ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಎಸ್‌ಐಆರ್‌ನಲ್ಲಿ ದಾಖಲೆ ನೀಡಿದರೆ, ಮುಂದಿನ ಪರಿಷ್ಕರಣೆಯಲ್ಲಿ ಮತ್ತೆ ದಾಖಲೆ ಕೇಳುವುದಿಲ್ಲ. ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲೂ ಅರ್ಜಿ ಹಾಕಬಹುದು. ಎರಡು ಕಡೆ ಹೆಸರು ಇದ್ದರೆ ಫೋಟೋ ಸ್ಕ್ಯಾನಿಂಗ್ ಸಿಸ್ಟಮ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಅನ್ಬುಕುಮಾರ್‌ ಎಚ್ಚರಿಸಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರವೂ ಮತದಾರರ ಹೆಸರಿಲ್ಲದಿದ್ದರೆ ಬಿಎಲ್‌ಒಗಳು ನೀಡಿರುವ ಸಹಿ ಮಾಡಿದ ನಮೂನೆ ಮೂಲಕ ಪ್ರಶ್ನಿಸಬಹುದು ಎಂದರು.

ರಾಜಕೀಯ ಪಕ್ಷಗಳೊಂದಿಗೆ ಸಭೆ

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಮಂಗಳವಾರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ತಿಳಿಸಿದರು.

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕುರಿತಂತೆ ವಿವರ ನೀಡಲಾಗಿದೆ. ಪ್ರತಿ ಬೂತ್ ಗೆ ಏಜೆಂಟ್‌ಗಳನ್ನು ನೇಮಕ‌ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 55 ಸಾವಿರ ಮತಗಟ್ಟೆಗಳಿವೆ. ಎಸ್‌ಐಆರ್ ಗೆ 18 ಸಾವಿರ ಬೂತ್‌ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್‌ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ಆದರೆ, ಎಂದಿನಿಂದ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಈಗಲೇ ಹೇಳುವುದಿಲ್ಲ. ಸದ್ಯ ತಯಾರಿಯಷ್ಟೇ ನಡೆಸಿದ್ದೇವೆ. ಸೆ.23 ರೊಳಗೆ ಎಸ್ ಐಆರ್ ಪ್ರಕ್ರಿಯೆಗೆ ತಯಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರದ ಅಧಿಕೃತ ಅಧಿಸೂಚನೆ ನಂತರ ಎಸ್ ಐಆರ್ ಕಾರ್ಯ ಆರಂಭಿಸಲಾಗುವುದು ಎಂದರು.

ಚುನಾವಣಾ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಆರಂಭಿಸಿದೆ. ಅಲ್ಲಿನ ಎಲ್ಲಾ 38 ಜಿಲ್ಲೆಗಳಲ್ಲಿ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಲಕ್ಷಾಂತರ ನಕಲಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಸೆ. 30 ರಂದು ಪ್ರಕಟಿಸಲಿದೆ.

Read More
Next Story