NIA Investigation | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 16 ಕಡೆ ಎನ್‌ಐಎ ದಾಳಿ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ಕರ್ನಾಟಕ ಸೇರಿದಂತೆ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ಕರ್ನಾಟಕ ಸೇರಿದಂತೆ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈನಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಸುಂಠಿಕೊಪ್ಪ, ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 16 ಪ್ರದೇಶಗಳಲ್ಲಿ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.
ಗುರುವಾರ ಮುಂಜಾನೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಬ್ಬರ ಮನೆ ಹಾಗೂ ಸುಂಠಿಕೊಪ್ಪದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ, ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಮನೆಯವರ ವಿಚಾರಣೆ ನಡೆಸಿ ತೆರಳಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗು ಪುತ್ತೂರಿನಲ್ಲಿ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮೃತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಅಬೂಬಕ್ಕರ್ ಸಿದ್ಧೀಕ್ ಎನ್ನುವಾತನ ಪತ್ನಿಯ ಸಹೋದರ, ಶಿವಮೊಗ್ಗದ ಮಸೀದಿಯೊಂದರ ಧರ್ಮಗುರು ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಯ್ಯೂರಿನ ಉಮ್ಮರ್ ಎಂಬ ವ್ಯಕ್ತಿಯ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಕೊಡಗಿನ ಸಂಪರ್ಕವಿದ್ದು, ಹಾಗಾಗಿ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಬೆಂಗಳೂರು, ಚೆನ್ನೈ, ಎರ್ನಾಕುಲಂ, ಕೊಡಗು ಸೇರಿ 16 ಕಡೆ ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
2023ರ ಜನವರಿಯಲ್ಲಿ ಎನ್‌ಐಎ 21 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಕೊಡಗು ಜಿಲ್ಲೆಯ ನಿವಾಸಿಯಾದ ತುಫೈಲ್, ಜಿಲ್ಲೆಯ ಪಿಎಫ್‌ಐ 'ಸೇವಾ ತಂಡ'ಗಳ ಉಸ್ತುವಾರಿ ಮತ್ತು ನಿಷೇಧಿತ ಸಂಘಟನೆಯ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಸುಧಾರಿತ ತರಬೇತಿಯನ್ನು ನಿಯಮಿತವಾಗಿ ನೀಡುವ 'ಪಿಎಫ್‌ಐ ಮಾಸ್ಟರ್ ಟ್ರೈನರ್' ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು.
ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಮೂವರು ದುಷ್ಕರ್ಮಿಗಳಿಗೆ ಆಶ್ರಯ ನೀಡಿದ್ದರು ಎಂದು ತಿಳಿದುಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಏಳು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ವಿದೇಶದಲ್ಲಿದ್ದುಕೊಂಡು ಇಲ್ಲಿಯವರ ಜೊತೆ ಸಂಪರ್ಕ ಹೊಂದಿ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಜಾಬೀರ್ ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷನಾಗಿದ್ದು, ಈ ಕೊಲೆ ಮಾಡಲು ನಿರ್ಧರಿಸಿದ ಸಂಚಿನ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ಕೇಂದ್ರ ಸಂಸ್ಥೆ ಪತ್ತೆ ಮಾಡಿತ್ತು. ಮಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅವರು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು ಎಂದು ಎನ್‌ಐಎ ಈ ಹಿಂದೆ ಹೇಳಿತ್ತು.
ಜೂನ್‌ನಲ್ಲಿ ಎನ್‌ಐಎ ಮುಂಬೈ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ರಿಯಾಜ್ ಯೂಸಫ್ ಹಾರಳ್ಳಿ ಅಲಿಸ್ ರಿಯಾಜ್‌ನನ್ನು ಬಂಧಿಸಿತ್ತು. ಮೇ 10 ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್ ಮತ್ತು ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಿದ ನಂತರ ರಿಯಾಜ್ ನನ್ನು ಬಂಧಿಸಲಾಗಿತ್ತು. ಮತ್ತೋರ್ವ ಆರೋಪಿ ಅಬ್ದುಲ್ ರೆಹಮಾನ್ ನಿರ್ದೇಶನದ ಮೇರೆಗೆ ರಿಯಾಜ್ ವಿದೇಶದಿಂದ ಭಾರತಕ್ಕೆ ಮರಳಿದ್ದ. ಈ ಪ್ರಕರಣದ ಆರೋಪಿ ಅಬ್ದುಲ್ ರೆಹಮಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ಬಳಿಕ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯ ಮುಂದುವರಿದ ಭಾಗವಾಗಿ ಎನ್‌ಐಎ ಇದೀಗ ದಾಳಿ ನಡೆಸಿದೆ.