
ಪ್ರಕಾಶ್ ರಾಜ್ ಕಾಂಗ್ರೆಸ್‌ನ ಅನಧಿಕೃತ ವಕ್ತಾರ: ಜೆಡಿಎಸ್ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಮಂಡ್ಯದಲ್ಲಿ ಆಕ್ರೋಶ ಹೊರಹಾಕಿದ್ದರು. ʻʻಹೆಣ್ಣು ಮಕ್ಕಳ ಬಗ್ಗೆ ಇಷ್ಟು ನೀಚ ಮಟ್ಟಕ್ಕೆ ಇಳಿದು ಮಾತನಾಡಲು ಕುಮಾರಸ್ವಾಮಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ? ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿ ದಾರಿ ತಪ್ಪಿದ ಮಗʼʼ ಎಂದು ಕಿಡಿಕಾರಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್ ರಾಜ್, ʻಕುಮಾರಸ್ವಾಮಿ ದಾರಿ ತಪ್ಪಿದ ಮಗ, ಇಂತವರು ಚುನಾವಣೆಯಲ್ಲಿ ಗೆಲ್ಲಬೇಕಾʼ ಎಂದು ಪ್ರಶ್ನಿಸಿದ್ದರು. ಇದೀಗ ಜೆಡಿಎಸ್, ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡುವ ಮೂಲಕ ಪ್ರಕಾಶ್ ರಾಜ್ ಮೇಲೆ ಮುಗಿಬಿದ್ದಿದಿದೆ.
ʻʻಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್ ರೈ ಉರುಫ್ ಪ್ರಕಾಶ್ ರಾಜ್ ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ. ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..ʼʼ ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ʻʻಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ, ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ 'ನಿರ್ದಿಗಂತʼಕ್ಕೆ ಹಣದ ಹೊಳೆ ಹರಿಸುತ್ತಿದೆ ಸರಕಾರ. ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ. Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..ʼʼ ಟೀಕಿಸಿದೆ.
ʻʻಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್ ಸರಕಾರ, ನಿಮ್ಮ 'ನಿರ್ದಿಗಂತʼಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರು ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವೋರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ!! ಹೆಂಗೆ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ..ʼʼ ಎಂದು ಜೆಡಿಎಸ್ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಪ್ರಕಾಶ್ ರಾಜ್ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಳಿಂದ ಗ್ರಾಮೀಣ ಭಾಗದ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಮಂಡ್ಯದಲ್ಲಿ ಆಕ್ರೋಶ ಹೊರಹಾಕಿದ್ದರು. ʻʻಹೆಣ್ಣು ಮಕ್ಕಳ ಬಗ್ಗೆ ಇಷ್ಟು ನೀಚ ಮಟ್ಟಕ್ಕೆ ಇಳಿದು ಮಾತನಾಡಲು ಕುಮಾರಸ್ವಾಮಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ? ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿ ದಾರಿ ತಪ್ಪಿದ ಮಗʼʼ ಎಂದು ಕಿಡಿಕಾರಿದ್ದರು.
ʻʻಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರನ್ನು ‘ಗಂಡ ಸತ್ತ ಮುಂಡೆ' ಎಂದು ಕರೆದಿದ್ದಕ್ಕೆ ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಮಹಿಳೆಯರು ಚುನಾವಣೆಯಲ್ಲಿ ಇವರ ಪುತ್ರನನ್ನು ಸೋಲಿಸಿ ಮನೆಗೆ ಕಳುಹಿಸಿದ್ದರು. ಈಗ ಮಹಿಳೆಯರು ಎಚ್ಚೆತ್ತುಕೊಳ್ಳಬೇಕುʼʼ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿಯವರನ್ನು ಸೋಲಿಸಿ ಎಂದು ಪ್ರಕಾಶ್ ರಾಜ್ ಕರೆ ನೀಡಿದ್ದಾರೆ.