Mahakumbh Stampede | ಕುಂಭಮೇಳದಲ್ಲಿ ಪ್ರಕಾಶ್ ರಾಜ್: ನಕಲಿ ಪೋಟೋ ಹಂಚಿದ ಸಂಬರಗಿ ವಿರುದ್ಧ ದೂರು
ನಟ ಪ್ರಕಾಶ್ ರಾಜ್ ಅವರು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ಅವರ ಪಾಪಗಳು ತೊಳೆದು ಹೋಗಲಿ ಎಂದು ಆಶಾಭಾವನೆ ವ್ಯಕ್ತಪಡಿಸೋಣ ಎಂದು ಪ್ರಶಾಂತ್ ಸಂಬರಗಿ ಫೋಟೊ ಹಂಚಿಕೊಂಡಿದ್ದರು.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಟ ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂದು ಕ್ಯಾಪ್ಷನ್ ನೀಡಿ ನದಿಯಲ್ಲಿ ಸ್ನಾನ ಮಾಡಿ, ಕೈ ಮುಗಿಯುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಶಾಂತ್ ಸಂಬರಗಿ ಎಂಬವರು ವಿರುದ್ಧ ದೂರು ದಾಖಲಾಗಿದೆ.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ತ್ರೀವಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂಬ ಎಐ ಪೋಟೋ ಹಂಚಿಕೊಂಡ ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ಪ್ರಕರಣ ದಾಖಲಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕಾಶ್ ರಾಜ್ ದೂರು
ಈ ಬಗ್ಗೆ ನಟ ಪ್ರಕಾಶ್ ರಾಜ್ ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. “ʼಸುಳ್ಳ ರಾಜʼ ನ ಹೇಡಿಗಳ ಸೈನ್ಯಕ್ಕೆ.. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. ಪೊಲೀಸ್ ದೂರು ದಾಖಲಾಗಿದೆ.. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ" ಎಂದು ಪೋಸ್ಟ್ ಮಾಡಿದ್ದಾರೆ.
"ನಟ ಪ್ರಕಾಶ್ ರಾಜ್ ಅವರು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ಅವರ ಪಾಪಗಳು ತೊಳೆದು ಹೋಗಲಿ ಎಂದು ಆಶಾಭಾವನೆ ವ್ಯಕ್ತಪಡಿಸೋಣ" ಎಂದು ಪ್ರಶಾಂತ್ ಸಂಬರಗಿ ಫೋಟೊ ಹಂಚಿಕೊಂಡಿದ್ದರು.
ಕೇವಲ ಪ್ರಶಾಂತ್ ಸಂಬರಗಿ ಮಾತ್ರವಲ್ಲದೆ, ಡಾ. ಜಿತೇಂದ್ರ ನಗರ್ ಎಂಬುವರು ಈ ಚಿತ್ರವನ್ನು ಪೋಸ್ಟ್ ಮಾಡಿ, 'ಮಹಾಕುಂಭವು ಎಷ್ಟು ಅದ್ಭುತವಾಗಿದೆಯೆಂದರೆ, ಸನಾತನದ ಅಂತ್ಯವನ್ನು ಬಯಸುವ ದೇವತೆಗಳು ಮಾತ್ರವಲ್ಲದೆ ರಾಕ್ಷಸರು ಸಹ ಅದರಲ್ಲಿ ಸ್ನಾನ ಮಾಡುತ್ತಾರೆ' ಎಂದು ಬರೆದಿದ್ದಾರೆ.
ಪ್ರಕಾಶ್ ರಾಜ್ ಅವರ ಈ ಫೋಟೋಗೆ ಸಂಬಂಧಿಸಿದಂತೆ ಇದೇ ರೀತಿಯ ಪೋಸ್ಟ್ಗಳನ್ನು ಅರುಣೇಶ್ ಪಾಂಡೆ, ವಿಕಾಸ್ ಝಾ, ಅವತಾರ್ ಭಾಟಿ ಗುರ್ಜರ್, ಸನಾತನಿ ರಾಜ್ ಸಿಂಗ್, ದಿನೇಶ್ ದೇಸಾಯಿ ಮತ್ತು ರಾಜೇಂದ್ರ ಶರ್ಮಾ (ಮೋದಿ ಕುಟುಂಬ) ಎಂಬವರು ಕೂಡ ಟ್ವೀಟ್ ಮಾಡಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ಪ್ರಕಾಶ್ ರಾಜ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಅಲ್ಲಿ ಜನ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಜನ ಇಲ್ಲಿ ಹೊಲಸು ಮಾಡುತ್ತಿದ್ದಾರೆ ಎಂದು ದೂರಿದ್ದರು. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಪ್ರಕಾಶ್ ರಾಜ್ ಇದು ಅಸಹ್ಯಕರವಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವಂತಹ ನಕಲಿ ಫೋಟೋ ವೈರಲ್ ಆಗಿತ್ತು.