ಪ್ರಜ್ವಲ್‌ ಲೈಂಗಿಕ ಹಗರಣ | ʻನನ್ನ ತಾಯಿ ಮೇಲೆ ಅತ್ಯಾಚಾರ, ನನ್ನ ಮೇಲೆ ಲೈಂಗಿಕ ದೌರ್ಜನ್ಯʼ: ಎಸ್‌ಐಟಿ ಮುಂದೆ ಸಂತ್ರಸ್ತೆಯ ಕಣ್ಣೀರು
x

ಪ್ರಜ್ವಲ್‌ ಲೈಂಗಿಕ ಹಗರಣ | ʻನನ್ನ ತಾಯಿ ಮೇಲೆ ಅತ್ಯಾಚಾರ, ನನ್ನ ಮೇಲೆ ಲೈಂಗಿಕ ದೌರ್ಜನ್ಯʼ: ಎಸ್‌ಐಟಿ ಮುಂದೆ ಸಂತ್ರಸ್ತೆಯ ಕಣ್ಣೀರು

ನಿನ್ನೆಯಷ್ಟೇ (ಮೇ 13) ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದಿರುವ ರೇವಣ್ಣ ಅವರಿಗೆ ಇದೀಗ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದಲ್ಲಿ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ.


ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದಲ್ಲಿ ದಿನಕ್ಕೊಂದು ಭಯಾನಕ ವಿಚಾರಗಳು ಹೊರಬರುತ್ತಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರು ಎಸ್‌ಐಟಿ ಅಧಿಕಾರಿಗಳ ಎದುರು ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಂತ್ರಸ್ತ ಮಹಿಳೆಯೊಬ್ಬರು ಎಸ್‌ಐಟಿ ಮುಂದೆ ಹಾಜರಾಗಿ, ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿ, ತನ್ನ ಬಟ್ಟೆ ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನುವ ಬೆಚ್ಚಿಬೀಳಿಸುವ ಘಟನೆಯನ್ನು ವಿವರಿಸಿದ್ದಾರೆ.

ಎಸ್‌ಐಟಿ ಮುಂದೆ ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ವಿಚಾರಗಳು

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಪ್ರಜ್ವಲ್ ರೇವಣ್ಣ ನನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದರು. ನನ್ನ ತಾಯಿ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ. ನನ್ನ ತಾಯಿಗೆ ಎಚ್.ಡಿ ರೇವಣ್ಣ ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ತಮಗೆ ಸಹಕಾರ ನೀಡದಿದ್ದರೆ, ನಿನ್ನ ಗಂಡನ ಕೆಲಸದಿಂದ ವಜಾ ಮಾಡಿಸುತ್ತೇವೆ ಮತ್ತು ಅವನನ್ನು ನಿರುದ್ಯೋಗಿಯನ್ನಾಗಿ ಮಾಡುತ್ತೇನೆ ಮತ್ತು ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ನನ್ನ ತಾಯಿಗೆ ಬೆದರಿಕೆ ಹಾಕುತ್ತಿದ್ದನು. ನಾವು ದೂರು ದಾಖಲಿಸಿದ ನಂತರ ನನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಮಹಿಳೆ ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ.

2020 ಮತ್ತು 2021ರ ನಡುವೆ ಸಂಭವಿಸಿದ ನಿರಂತರ ಕಿರುಕುಳವು ತನ್ನ ಕುಟುಂಬಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ನಾವುಗಳು ನಮ್ಮ ಮೊಬೈಲ್ ನಂಬರ್‌ಗಳನ್ನು ಬದಲಿಸಬೇಕಾಯಿತು ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ತಮ್ಮ ಮನೆಯಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪ್ರಜ್ವಲ್‌ ಮಾತ್ರವಲ್ಲ ರೇವಣ್ಣ ಕೂಡ ಹಣ್ಣು ಕೊಡುವ ನೆಪದಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುವುದು ನಿಜ. ಪ್ರಜ್ವಲ್ ನನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸದ್ಯಕ್ಕೆ ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮೂವರು ಮನೆಕೆಲಸಗಾರರ ಮಾತ್ರ ಮಾತನಾಡಿದ್ದಾರೆ. ಇನ್ನೂ ಮೂವರು ಕೆಲಸಗಾರರರು ಈ ಬಗ್ಗೆ ಮಾತಾಡಿಲ್ಲ. ಅವರು ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ" ಎಂದೂ ಮಹಿಳೆ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

"ಘಟನೆ ನಡೆದು ಎರಡು ವರ್ಷಗಳ ನಂತರ ತಮ್ಮ ಜಮೀನನ್ನು ಮಾರಾಟ ಮಾಡುವಂತೆ ಮಾಡಲಾಯಿತು. ನನ್ನ ತಾಯಿ ನಾಲ್ಕೈದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಅವರಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಆಕೆ ನಮಗೆ ತಡರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಮಾತ್ರ ಕರೆ ಮಾಡುತ್ತಿದ್ದರು. ಆದರೂ ನಮ್ಮೊಂದಿಗೆ ಅಷ್ಟೇನೂ ಮಾತನಾಡುತ್ತಿರಲಿಲ್ಲ. ಅವರು ನನ್ನ ತಾಯಿಯನ್ನು ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದರು. ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಮಹಿಳೆ ನೋವು ಹೇಳಿಕೊಂಡಿದ್ದಾರೆ.

"ಪ್ರಜ್ವಲ್ ರೇವಣ್ಣ ಅವರು ನನಗೆ ವೀಡಿಯೊ ಕರೆ ಮಾಡಿ ಮಾತನಾಡುವಂತೆ ಒತ್ತಾಯಿಸುತ್ತಿದ್ದರು. ವಿಡಿಯೋ ಕರೆ ಮಾಡಿ ನನ್ನ ಬಟ್ಟೆಗಳನ್ನು ಬಿಚ್ಚುವಂತೆ ಹೇಳುತ್ತಿದ್ದರು, ಒಪ್ಪದೇ ಹೋದರೆ, ನನಗೆ ಮತ್ತು ನನ್ನ ತಾಯಿಗೆ ಅಪಾಯ ಮಾಡುವ ಬೆದರಿಕೆ ಹಾಕುತ್ತಿದ್ದರು" ಎಂದು ಮಹಿಳೆ ವಿಶೇಷ ತನಿಖಾ ತಂಡದ ಮುಂದೆ ಆರೋಪಿಸಿದ್ದಾರೆ.

"ಅವನು (ಪ್ರಜ್ವಲ್) ನನಗೆ ಕರೆ ಮಾಡಿ ನನ್ನ ಬಟ್ಟೆಗಳನ್ನು ತೆಗೆಯುವಂತೆ ಹೇಳುತ್ತಿದ್ದನು. ಅವನು ನನ್ನ ತಾಯಿಯ ಮೊಬೈಲ್‌ಗೆ ಕರೆ ಮಾಡಿ ವೀಡಿಯೊ ಕರೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಿದ್ದನು. ನಾನು ನಿರಾಕರಿಸಿದಾಗ ನನಗೆ ಮತ್ತು ನನ್ನ ತಾಯಿಗೆ ಅಪಾಯ ಮಾಡುವುದಾಗಿ ಬೆದರಿಕೆ ಹಾಕಿದ್ದರೆ. ಘಟನೆಗಳ ಬಗ್ಗೆ ತಿಳಿದ ನಂತರ ನಮ್ಮ ಕುಟುಂಬವು ನಮಗೆ ಬೆಂಬಲ ನೀಡಿತು. ನಾವು ದೂರು ದಾಖಲಿಸಿದ್ದೇವೆ" ಎಂದು ಸಂತ್ರಸ್ತೆ ಮಹಿಳೆ ವಿವರಿಸಿದ್ದಾರೆ..

ಇದೀಗ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ನಿನ್ನೆಯಷ್ಟೇ (ಮೇ 13) ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದಿರುವ ರೇವಣ್ಣ ಅವರಿಗೆ ಇದೀಗ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದಲ್ಲಿ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ.

ʻದ ಫೆಡರಲ್‌ ಕರ್ನಾಟಕʼ ಕಳಕಳಿ

ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದ್ದು. 6360938947 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುತ್ತದೆ. ಹಾಗಾಗಿ ಸಂತ್ರಸ್ತರು ಹಾಗೂ ಮಾಹಿತಿ ತಿಳಿದವರು ಯಾವುದೇ ಹೆದರಿಕೆ ಇಲ್ಲದೆ ಸಹಾಯವಾಣಿ ಮೂಲಕ ಎಸ್‌ಐಟಿ ತಂಡವನ್ನು ಸಂಪರ್ಕಿಸಬಹುದು.

Read More
Next Story