
ಪ್ರಜ್ವಲ್ ಲೈಂಗಿಕ ಹಗರಣ | ಪ್ರೀತಂಗೌಡ ಆಪ್ತ ಲಿಖಿತ್ ಗೌಡ, ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ದೇಶಾದ್ಯಂತ ಸದ್ದು ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಪಿ ಲಿಖಿತ್ ಗೌಡ ಮತ್ತು ಅವರ ಕಚೇರಿ ಸಿಬ್ಬಂದಿ ಚೇತನ್ ಅವರನ್ನು14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಭಾನುವಾರ ಆದೇಶ ಹೊರಡಿಸಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಪೆನ್ ಡ್ರೈವ್ ಹಂಚಿಕೆಗೆ ಸಂಬಂಧಿಸಿದಂತೆ ಆರೋಪಿಗಳಾದ ಪಿ ಲಿಖಿತ್ ಗೌಡ ಮತ್ತು ಚೇತನ್ ಅವರನ್ನು ಭಾನುವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ, ಮಹಜರು ನಡೆಸಿದರು. ಆ ಬಳಿಕ ಬೆಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಕೋರ್ಟ್ ನ್ಯಾಯಾಧೀಶರು ಆರೋಪಿಗಳಿಗೆ ಮೇ 25ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಈಗಗಾಲೇ ಪ್ರಜ್ವಲ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ವಕೀಲ ದೇವರಾಜೇ ಗೌಡ ಅವರನ್ನು ಬಂಧಿಸಿ ಜೈಲಿಗಟ್ಟಿರುವ ಎಸ್ ಐಟಿ ಅಧಿಕಾರಿಗಳು ಇದೀಗ ಲಿಖಿತ್ ಗೌಡ ಮತ್ತು ಅವರ ಕಚೇರಿ ಸಿಬ್ಬಂದಿ ಚೇತನ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.