
ಪ್ರಜ್ವಲ್ ರೇವಣ್ಣ ಮತ್ತು ರಮ್ಯಾ
ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ ಹಿನ್ನೆಲೆ : ಕಾನೂನು ಎಲ್ಲರಿಗೂ ಒಂದೇ ಎಂದ ರಮ್ಯಾ
ಕಾನೂನು ಎಲ್ಲರಿಗೂ ಒಂದೇ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ನಟಿ ರಮ್ಯಾ ತಿಳಿಸಿದ್ದಾರೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಶಿಕ್ಷೆ ಪ್ರಕಟ ಮಾಡುತ್ತಿದ್ದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ಕಾನೂನು ಎಲ್ಲರಿಗೂ ಒಂದೇ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಅವರ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿರುವ ರಮ್ಯಾ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ವಿಚಾರದಲ್ಲಿ ನ್ಯಾಯಾಲಯವು ತೀರ್ಪು ಶ್ಲಾಘನೀಯ. ಕಾನೂನು ಎಲ್ಲರಿಗೂ ಒಂದೇ ಎಂಬುದು ನ್ಯಾಯಾಲಯದ ತೀರ್ಪಿನಿಂದ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಮೈಸೂರಿನ ಕೆ.ಆರ್. ನಗರ ನಿವಾಸಿಯ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಕಳೆದ ಒಂದು ವರ್ಷದಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಹೊರಬೀಳುತ್ತಿದ್ದಂತೆ ಪ್ರಕರಣದ ಸಂತ್ರಸ್ತ ಮಹಿಳೆ ಸಾಕ್ಷಿ ಹೇಳದಂತೆ ಅಪಹರಿಸಿ ಮಹಿಳೆಯನ್ನು ಕೆ.ಆರ್. ನಗರದ ಒಂದು ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು ಸೂಕ್ತ ಭದ್ರತೆ ಒದಗಿಸಲಾಗಿತ್ತು. ಪ್ರಕರಣಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ 1,652 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ 113 ಸಾಕ್ಷಿಗಳ ಹೇಳಿಕೆಗಳು ಮತ್ತು ಹಲವು ವಿಧಿವಿಜ್ಞಾನ ಸಾಕ್ಷ್ಯಗಳಿದ್ದವು.