ಪ್ರಜ್ವಲ್ ರೇವಣ್ಣ ಎಸ್‌ಐಟಿ ಪೊಲೀಸರಿಗೆ ಇಂದು ಶರಣು?
ದೇಶಾದ್ಯಂತ ಸಂಚಲನ ಮೂಡಿಸಿರುವ ಪೆನ್‌ಡ್ರೈವ್ ಲೈಂಗಿಕ ಹಗರಣದ ಪ್ರಮುಖ ಆರೋಪಿ, ದೇಶ ಬಿಟ್ಟು ಪರಾರಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿಮಾನ ಮೂಲಕ ಬೆಂಗಳೂರು ಅಥವಾ ಮಂಗಳೂರಿಗೆ ಮರಳಿ ಸೋಮವಾರ ಎಸ್‌ಐಟಿ ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯೊಬ್ಬರನ್ನು ಪೊಲೀಸರ ಮುಂದೆ ಹೇಳಿಕೆ ನೀಡದಂತೆ ತಪ್ಪಿಸಲು ಅಪಹರಣ ಮಾಡಿದ ಆರೋಪದಲ್ಲಿ ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣ ಅವರನ್ನು ಶನಿವಾರ ಸಂಜೆ ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಬಳಿಕ ದೇವೇಗೌಡ ಕುಟುಂಬದ ಸೂಚನೆ ಮೇರೆಗೆ ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪರಾರಿಯಾಗಿ ಬಳಿಕ ದುಬೈನಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿಮಾನಮೂಲಕ ಬೆಂಗಳೂರು ಅಥವಾ ಮಂಗಳೂರಿಗೆ ಬಂದು ಎಸ್‌ಐಟಿ ಪೊಲೀಸರ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಎಸ್‌ಐಟಿ ಪೊಲೀಸರ ತಂಡಗಳು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ ಬಳಿ ಬೀಡುಬಿಟ್ಟಿದ್ದು, ಒಂದು ವೇಳೆ ಪ್ರಜ್ವಲ್ ರೇವಣ್ಣ ಸಂಜೆ ಅಥವಾ ಮಧ್ಯರಾತ್ರಿ ವೇಳೆಗೆ ವಿಮಾನ ಮೂಲಕ ಬಂದರೆ ತಕ್ಷಣ ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರೇವಣ್ಣ ಅವರ ಬಂಧನಕ್ಕೆ ಮುನ್ನ ದೇವೇಗೌಡರ ಕುಟುಂಬದ ಸೂಚನೆಯಂತೆ ಪ್ರಜ್ವಲ್‌ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಲು ಸೂಚನೆ ನೀಡಲಾಗಿತ್ತು. ಬಳಿಕ ಕಾನೂನು ಪ್ರಕಾರ ತನಿಖೆಯನ್ನು ಎದುರಿಸಲು ಹೇಳಲಾಗಿತ್ತು ಎನ್ನಲಾಗಿದೆ. ದೇವೇಗೌಡರ ಕುಟುಂಬ ಸದಸ್ಯ ಹಾಗೂ ಮಾಜಿ ಶಾಸಕ ಸಿಎಸ್. ಪುಟ್ಟರಾಜು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪ್ರಜ್ವಲ್ ಶರಣಾಗತಿಯಾಗಲಿದ್ದಾರೆ ಹಾಗೂ ಈ ಸಂಬಂಧ ಕಾನೂನು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಶ್ಲೀಲ ವಿಡಿಯೋ ಹಾಗೂ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನವಾದಲ್ಲಿ, ಹಲವಾರು ಐಪಿಎಸ್ ಸೆಕ್ಷನ್‌ಗಳ ಪ್ರಕಾರ ಹಲವಾರು ಪ್ರಕರಣಗಳಲ್ಲಿ ತನಿಖೆಯನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಆರು ಮಂದಿ ಸಂತ್ರಸ್ತೆಯರು ಎಸ್‌ಐಟಿಗೆ ಹೇಳಿಕೆಗಳನ್ನು ನೀಡಿದ್ದು ಕಾನೂನು ಕುಣಿಕೆ ಬಿಗಿಯಾಗುವ ಲಕ್ಷಣಗಳು ಗೋಚರಿಸಿವೆ.