ಪ್ರಜ್ವಲ್‌ ರೇವಣ್ಣ ಪ್ರಕರಣ : ಇದು ಮೋದಿ ಗ್ಯಾರಂಟಿ ಎಂದು ಟೀಕಿಸಿದ ರಾಹುಲ್‌ ಗಾಂಧಿ
x

ಪ್ರಜ್ವಲ್‌ ರೇವಣ್ಣ ಪ್ರಕರಣ : ಇದು ಮೋದಿ ಗ್ಯಾರಂಟಿ ಎಂದು ಟೀಕಿಸಿದ ರಾಹುಲ್‌ ಗಾಂಧಿ

"ಪ್ರಜ್ವಲ್ ರೇವಣ್ಣ ನಾನೂರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದು ಕೇವಲ ಸೆಕ್ಸ್ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ. ಇದನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು


Click the Play button to hear this message in audio format

ಶಿವಮೊಗ್ಗ: ನಾಲ್ಕು ನೂರಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಬಿಜೆಪಿ ಮೈತ್ರಿಕೂಟ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇದು ಮೋದಿಯ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ಪರ ಪ್ರಚಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ( ಮೇ 2) ಶಿವಮೊಗ್ಗಕ್ಕೆ ಬಂದಿದ್ದಾರೆ. ಈ ವೇಳೆ ಪ್ರಜ್ವಲ್‌ ರೇವಣ್ಣ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಮೋದಿಯವರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

"ಪ್ರಜ್ವಲ್ ರೇವಣ್ಣ ನಾನೂರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದು ಕೇವಲ ಸೆಕ್ಸ್ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ. ಇದನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಿಗಳ ಪರ ಮತ ಕೇಳಿದ್ದಾರೆ

ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಬಿಜೆಪಿ ನಾಯಕರಿಗೆ ಗೊತ್ತಿದ್ದರೂ ಟಿಕೆಟ್ ನೀಡಲು ಯಾಕೆ ಒಪ್ಪಿದರು? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಕರ್ನಾಟಕದ ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲೇ ಇತಂಹ ಘಟನೆ ನಡೆದಿಲ್ಲ.ಇಡೀ ಜಗತ್ತಿನಲ್ಲೇ ಈ ವಿಚಾರ ಚರ್ಚೆಯಾಗುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ದೇಶದ ಪ್ರಧಾನಿಗಳು ಅತ್ಯಾಚಾರಿಗಳ ಪರ ಮತ ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಮಹಿಳೆಯರಲ್ಲಿ ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿದರು.

ಮೀಸಲಾತಿ ತೆಗೆದುಹಾಕಲು ಹೊರಟಿದೆ

ಸಂವಿಧಾನ ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ನಿರ್ಧರಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆಗೆ ಮುಂದಾಗಿದೆ .ಬಿಜೆಪಿ ಸಂವಿಧಾನದಲ್ಲಿರುವ ಮೀಸಲಾತಿಯನ್ನು ತೆಗೆದುಹಾಕಲು ಹೊರಟಿದೆ. ನಾವು ಸಮಾನತೆ, ದಲಿತರು, ಒಬಿಸಿ, ಆದಿವಾಸಿಗಳ ಬಗ್ಗೆ ಮಾತನಾಡಿದರೆ, ಕಾಂಗ್ರೆಸ್‌ನವರನ್ನು ನಕ್ಸಲರು ಎನ್ನುತ್ತಾರೆ. ಅಂತಹ ಮಾತುಗಳನ್ನು ಆಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕೂಡಲೇ ದೇಶದ ಜನರ ಮುಂದೆ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.

ಅದಾನಿ, ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದಾರೆ

ಬಿಜೆಪಿ ಸರ್ಕಾರ ಬಡವರು, ಮಹಿಳಾ ವಿರೋಧಿ ಸರ್ಕಾರ. ಪ್ರಧಾನಿಯವರು ದೇಶದ ಸಂಪತ್ತನ್ನು ತಗೆದುಕೊಂಡು ಹೋಗಿ 22 ಜನರ ಜೇಬಿಗೆ ಹಾಕಿದ್ದಾರೆ. ಅದಾನಿ, ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದ ಅವರು, ನಾವು ಲಕ್ಷಾಂತರ ಜನರಿಗೆ ಲಕ್ಷಾಧಿಪತಿ ಮಾಡಲು ಹೊರಟಿದ್ದೇವೆ. ನಾವು ಕರ್ನಾಟಕದಲ್ಲಿ ಐದು ಗ್ಯಾರಂಟಿಯನ್ನು ನೀಡಿದ್ದೇವೆ. ಈಗ ದೇಶಾದ್ಯಂತ ನಾವು ಮಹಾಲಕ್ಷ್ಮಿ ಯೋಜನೆ ತರಲು ಹೊರಟ್ಟಿದ್ದೇವೆ . ಪ್ರತಿ ಬಡ ಕುಟುಂಬದ ಲಿಸ್ಟ್ ತಯಾರಾಗುತ್ತಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಒತ್ತಾಯ ಮಾಡಿದರೇ ಮಹಿಳೆಯರ ಮಾಂಗಲ್ಯ ಸೂತ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇಷ್ಟು ವರ್ಷದಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹೆಣ್ಣು ಮಕ್ಕಳ ಮಾಂಗಲ್ಯ ಸೂತ್ರ ಕಸಿದುಕೊಂಡಿಲ್ಲ.ಜಾತಿ ಗಣತಿ ಬಗ್ಗೆ ಪ್ರಧಾನಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.

ದೇಶದಲ್ಲಿ ಮೊದಲು ಸಂವಿಧಾನ ಉಳಿಯಬೇಕು. ದೇಶದ ರಕ್ಷಣೆ ಆಗಬೇಕು. ಮೋದಿ ಸುಳ್ಳು ಹೇಳುವುದು ಅವರ ಗ್ಯಾರಂಟಿ ಎಂದು ಟಿಕೀಸಿದ ಅವರು, ಮೋದಿ ಹಠಾವೊ ದೇಶ್ ಬಚಾವ್ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‌ಗೆ ಅತಿ ಹೆಚ್ಚಿನ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್, ಚುನಾವಣಾ ಉಸ್ತುವಾರಿ ಅನಿಲ್ ತಡಕಲ್ ಸೇರಿದಂತೆ ಹಲವರಿದ್ದರು.

Read More
Next Story