Prajwal Pendrive Case | ಪ್ರಕರಣದ ಅಶ್ಲೀಲ ವಿಡಿಯೋಗಳು ಅಸಲಿ ಎಂದ ಎಫ್‌ಎಸ್‌ಎಲ್ ವರದಿ
ಮಹಿಳೆಯರ ಮೇಲಿನ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಡಿಯೋ ಕ್ಲಿಪಿಂಗ್‌ಗಳ ಎಫ್ಎಸ್ಎಲ್ ವರದಿ ಬಂದಿದ್ದು, ಆ ವಿಡಿಯೋಗಳು ನಕಲಿ ಅಲ್ಲ, ಅಸಲಿ ಎಂದು ವರದಿ ಹೇಳಿದೆ.
ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ. ಅವು ನೈಜ ವಿಡಿಯೋಗಳು ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯ ಮೂಲಗಳು ಬಹಿರಂಗಪಡಿಸಿದೆ.
ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಮಾಜಿ ಸಂಸದ, ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ 'ವಿಡಿಯೊಗಳು ನೈಜ' ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಆ ವಿಡಿಯೋ ನಕಲಿ, ವಿರೋಧಿಗಳು ಎಡಿಟ್, ಮಾರ್ಫಿಂಗ್ ಮಾಡಿದ್ದಾರೆ. ತಮ್ಮ ಕುಟುಂಬದ ಮೇಲಿನ ರಾಜಕೀಯ ಸೇಡಿಗಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಜ್ವಲ್ ಮತ್ತು ಆತನ ಕುಟುಂಬ ವರ್ಗ ಹಾಗೂ ಜೆಡಿಎಸ್ ನಾಯಕರು ಹೇಳಿದ್ದರು. ಆದರೆ, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎಸ್ಐಟಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪೆನ್‌ಡ್ರೈವ್‌ಗಳಲ್ಲಿ ಸಿಕ್ಕಿದ ವಿಡಿಯೋಗಳ ನೈಜತೆ ತಿಳಿಯಲು ಎಫ್ಎಸ್ಎಲ್ ಪರೀಕ್ಷೆಗಾಗಿ ಕಳುಹಿಸಿತ್ತು. ಇದೀಗ ವಿಡಿಯೋಗಳ ಎಫ್ಎಸ್ಎಲ್ ವರದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋಗಳು ನೈಜ ಎಂಬುದು ಸಾಬೀತಾಗಿದೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ, ಬಂಧಿತ ಆರೋಪಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಈ ಸಂಬಂಧ ಇನ್ನಷ್ಟೇ ವರದಿ ಬರಬೇಕಿದೆ.
ಮಹಿಳೆಯರ ಮೇಲಿನ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆದ ಏಪ್ರಿಲ್ 26ಕ್ಕೂ ಎರಡು ದಿನಗಳ ಮುನ್ನ ಕೆಲವು ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿಡಿಯೋಗಳನ್ನು ಒಳಗೊಂಡ ಪೆನ್‌ಡ್ರೈವ್ ನೂರಾರು ಸಂಖ್ಯೆಯಲ್ಲಿ ಪತ್ತೆಯಾಗಿದ್ದವು. ಅವುಗಳು ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿತ್ತು. ಪ್ರಜ್ವಲ್ ಸಾವಿರಾರು ಮಹಿಳೆಯರನ್ನು ಹೆದರಿಸಿ, ಬೆದರಿಸಿ ವರ್ಷಗಟ್ಟಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.