ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ನಾಲ್ಕನೇ ಪ್ರಕರಣ ದಾಖಲು; ಪ್ರಜ್ವಲ್​​, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​
x
ಪ್ರಜ್ವಲ್‌ ರೇವಣ್ಣ ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದೆ.

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ನಾಲ್ಕನೇ ಪ್ರಕರಣ ದಾಖಲು; ಪ್ರಜ್ವಲ್​​, ಪ್ರೀತಂ ಗೌಡ ವಿರುದ್ಧ ಎಫ್​ಐಆರ್​

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಅವರ ವಿರುದ್ಧ ನಾಲ್ಕನೇ ಪ್ರಕರಣವನ್ನು ದಾಖಲಿಸಿಕೊಂಡಿದೆ.


Click the Play button to hear this message in audio format

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಪ್ರಕರಣಗಳ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಅವರ ವಿರುದ್ಧ ನಾಲ್ಕನೇ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಪ್ರಜ್ವಲ್‌ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ ಅಡಿಯಲ್ಲಿ ದಾಖಲಾಗಿರುವ ಮೂರು ಪ್ರಕರಣಗಳಿಗಿಂತ ಈ ನಾಲ್ಕನೇ ಪ್ರಕರಣ ಭಿನ್ನವಾಗಿದ್ದು, ಈ ಪ್ರಕರಣವು ಲೈಂಗಿಕ ಕಿರುಕುಳ, ಹಿಂಬಾಲಿಸುವಿಕೆ, ಬೆದರಿಕೆ ಹಾಕುವುದು ಹಾಗೂ ಸಂತ್ರಸ್ತೆಯ ಪೋಟೋ, ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್‌ ಮಾಡುವುದು ಮತ್ತು ಹಂಚಿಕೊಳ್ಳವುದರ ವಿರುದ್ಧ ದಾಖಲಾಗಿದೆ.

ಪ್ರಜ್ವಲ್‌ ರೇವಣ್ಣ ಮಾತ್ರವಲ್ಲದೆ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಸೇರಿದಂತೆ ಇತರ ಮೂವರ ಮೇಲೂ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರು ವಿಡಿಯೋ ಕಾಲ್‌ನಲ್ಲಿ ಸಂತ್ರಸ್ತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸಂದರ್ಭದಲ್ಲಿ ರೆಕಾರ್ಡ್ ಮಾಡಿದ ಚಿತ್ರಗಳನ್ನು ಪ್ರೀತಂ ಗೌಡ, ಕಿರಣ್ ಮತ್ತು ಶರತ್ ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ದೂರು ದಾಖಲಿಸಿರುವ ಸಂತ್ರಸ್ತೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳದ ರೆಕಾರ್ಡಿಂಗ್ ಮತ್ತು ಇತರರು ಕ್ಲಿಪ್ ಹಂಚಿಕೊಂಡಿದ್ದರಿಂದ ಹಾಸನದಲ್ಲಿ ತನ್ನ ಇಡೀ ಕುಟುಂಬಕ್ಕೆ ಮುಜುಗರ ಉಂಟಾಗಿದೆ ಮತ್ತು ಇದರಿಂದಾಗಿ ತಮ್ಮ ಇಮೇಜ್ ಹಾಳಾಗಿದೆ ಎಂದು ದೂರು ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಕಸ್ಟಡಿಗೆ ಕೋರಿದ ಎಸ್‌ಐಟಿ

ಸೋಮವಾರ (ಜೂ.24) ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕನೇ ಪ್ರಕರಣದ ತನಿಖೆಗಾಗಿ ಎಸ್‌ಐಟಿ, ಅವರ ಕಸ್ಟಡಿಗೆ ಬಾಡಿ ವಾರೆಂಟ್ ಕೋರಿದೆ. 10 ದಿನಗಳ ಹಿಂದೆ ದಾಖಲಾದ ಪ್ರಕರಣದಲ್ಲಿ ಬಾಡಿ ವಾರೆಂಟ್ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಏ.28 ರಿಂದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾಗಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ 21 ದಿನಗಳ ಕಾಲ ಎಸ್‌ಐಟಿ ಕಸ್ಟಡಿ ತನಿಖೆ ನಡೆಸಿದ್ದು, ಇದೀಗ ನಾಲ್ಕನೇ ಪ್ರಕರಣದ ತನಿಖೆಗಾಗಿ ಕಸ್ಟಡಿಗೆ ಕೋರಿದೆ. ನಾಲ್ಕನೇ ಪ್ರಕರಣವು ಸಂತ್ರಸ್ತೆಗೆ ಪ್ರಜ್ವಲ್‌ ಮಾಡಿದ ವೀಡಿಯೊ ಕರೆಗಳ ಪ್ರಕರಣವನ್ನು ಒಳಗೊಂಡಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗಿದ್ದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳು ಹಾಸನ ರಸ್ತೆಗಳಲ್ಲಿ ಸಾರ್ವಜನಿಕವಾಗಿ ಸೋರಿಕೆಯಾಗಿದ್ದವು. ಸೋರಿಕೆಯಾದ 2,900 ಕ್ಕೂ ಹೆಚ್ಚು ಕ್ಲಿಪ್‌ಗಳಲ್ಲಿ ಈ ನಾಲ್ಕನೆಯ ಪ್ರಕರಣದಲ್ಲಿ ಉಲ್ಲೇಖಿಸಿರುವ ರೆಕಾರ್ಡಿಂಗ್ ಕೂಡ ಸೇರಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣಗಳು

ಪ್ರಜ್ವಲ್‌ ರೇವಣ್ಣ ವಿರುದ್ಧ ನಾಲ್ಕನೇ ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್‌ಗಳು 354 (ಎ), 354 (ಡಿ), 354 (ಬಿ), 506 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಇ ಅಡಿಯಲ್ಲಿ ದಾಖಲಿಸಲಾಗಿದೆ.

ಏ.28 ರಂದು ದಾಖಲಾದ ಮೊದಲ ಪ್ರಕರಣದಲ್ಲಿ, ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹೆಚ್ ಡಿ ರೇವಣ್ಣ ಅವರು ಹಾಸನದ ರೇವಣ್ಣ ಕುಟುಂಬದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಆರಂಭದಲ್ಲಿ ಎದುರಿಸಿದ್ದರು. ನಂತರ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಲಾಗಿತ್ತು.

ಮೂರು ವರ್ಷಗಳಿಂದ ಪ್ರಜ್ವಲ್‌ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕೃತ್ಯದ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ ಕೂಡ ಮಾಡುತ್ತಿದ್ದರು ಎಂದು ಆರೋಪಿಸಿ, ಸ್ಥಳೀಯ ರಾಜಕೀಯ ಮುಖಂಡೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮೇ 1 ರಂದು ಎರಡನೇ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ.

ಮೇ 8 ರಂದು ಮೂರನೇ ಎಫ್‌ಐಆರ್ ದಾಖಲಾಗಿದ್ದು, ಪ್ರಜ್ವಲ್ ರೇವಣ್ಣ ಅವರ ಕುಟುಂಬದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿದ್ದರು. ಹೆಚ್ ಡಿ ರೇವಣ್ಣ ಮತ್ತು ಅವರ ಸಹಚರರು ಮೈಸೂರು ಸಮೀಪದ ಫಾರ್ಮ್‌ಹೌಸ್‌ನಿಂದ ಮೇ 5 ರಂದು ಮಹಿಳೆಯನ್ನು ರಕ್ಷಿಸಿದ ನಂತರ ಎಸ್‌ಐಟಿ ಎಫ್‌ಐಆರ್ ದಾಖಲಿಸಿದೆ. ಪ್ರಜ್ವಲ್ ರೇವಣ್ಣ ತನ್ನ ಕುಟುಂಬಕ್ಕಾಗಿ ಆರು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಎರಡು ಪ್ರಕರಣಗಳಲ್ಲಿ ಸಂತ್ರಸ್ತರ ಮೇಲೆ ಪದೇ ಪದೇ ಲೈಂಗಿಕ ಕೃತ್ಯ ನಡೆಸಿದ ಆರೋಪ (IPC ಸೆಕ್ಷನ್ 376 (2) (n)) ಮತ್ತು ಮೂರನೇ ಎಫ್‌ಐಆರ್ ಜೆಡಿ (ಎಸ್) ನಾಯಕ ಅಧಿಕಾರದಲ್ಲಿದ್ದಾಗ ತನ್ನ ಪ್ರಭಾವ ಬಳಸಿಕೊಂಡು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿಸಿದೆ.

ಎಪ್ರಿಲ್‌ 26ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾಗಿದ್ದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳು ಹಾಸನ ರಸ್ತೆಯಾದ್ಯಂತ ಹರಿದಾಡಿದ್ದವು. ಈ ವಿಡಿಯೋಗಳು ಸೋರಿಕೆಯಾದ ನಂತರ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಹೊರಬಿದ್ದಿದೆ. ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣಮೇ 31 ರಂದು ಭಾರತಕ್ಕೆ ಹಿಂದುರುಗಿದ್ದು, ಅವರನ್ನು ಎಸ್‌ಐಟಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದರು.

Read More
Next Story