ಪ್ರಜ್ವಲ್‌ ಬಂಧನ | ಸಂತ್ರಸ್ತೆಯರು ಧೈರ್ಯವಾಗಿ ದೂರು ನೀಡಿ, ನಿಮಗೆ ನಾವು ರಕ್ಷಣೆ ಕೊಡುತ್ತೇವೆ: ಗೃಹ ಸಚಿವ ಪರಮೇಶ್ವರ್
x

ಪ್ರಜ್ವಲ್‌ ಬಂಧನ | ಸಂತ್ರಸ್ತೆಯರು ಧೈರ್ಯವಾಗಿ ದೂರು ನೀಡಿ, ನಿಮಗೆ ನಾವು ರಕ್ಷಣೆ ಕೊಡುತ್ತೇವೆ: ಗೃಹ ಸಚಿವ ಪರಮೇಶ್ವರ್


"ಪ್ರಜ್ವಲ್ ರೇವಣ್ಣ ಬಂಧನ ಮಾಡಲಾಗಿದೆ. ಹಾಗಾಗಿ ಈಗಲಾದರೂ ಪ್ರಕರಣದ ಸಂತ್ರಸ್ತೆಯರು ಪೊಲೀಸರು ಹಾಗೂ ಎಸ್‍ಐಟಿ ಮುಂದೆ ಬಂದು ಧೈರ್ಯವಾಗಿ ತಮ್ಮ ದೂರು ನೀಡಬೇಕು. ಈ ಹಿಂದೆಯೇ ಅವರಿಗೆ ರಕ್ಷಣೆ ಕೊಡುವುದಾಗಿ ಹೇಳಿದ್ದೇವೆ" ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻಪ್ರಜ್ವಲ್ ರೇವಣ್ಣ ಅವರು ನಿನ್ನೆ ರಾತ್ರಿ ಸುಮಾರು 12.50ರ ಸುಮಾರಿಗೆ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರ ವಿರುದ್ಧ ಬಂಧನದ ವಾರಂಟ್ ಇತ್ತು. ಈಗ ಅವರ ಬಂಧನವಾಗಿದೆ ಎಂಬ ವಿಚಾರ ಗೊತ್ತಾಗಿದೆ. ಅಧಿಕಾರಿಗಳು ಅವರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಧಿಕಾರಿಗಳಿಗೆ ಅವರು ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಹಜವಾಗಿಯೇ ಅವರು ತನಿಖೆಗೆ ಸಹಕಾರ ಕೊಡಬೇಕುʼʼ ಎಂದು ಹೇಳಿದರು.

ಪ್ರಜ್ವಲ್‌ ಬಂಧನ ವಿಳಂಬವಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಮ್ಮ ದೇಶದಲ್ಲೇ ಅಥವಾ ರಾಜ್ಯದಲ್ಲಿಯೇ ಇದ್ದಿದ್ದರೆ ಇಷ್ಟರಲ್ಲೇ ಬಂಧನ ಮಾಡಬಹುದಿತ್ತು. ಹೊರ ದೇಶದಲ್ಲಿ ಇದ್ದರು, ಅಲ್ಲಿಗೆ ನಮ್ಮ ಇನ್ಸ್‌ಪೆಕ್ಟರನ್ನು ಕಳುಹಿಸಿ ಬಂಧಿಸಲು ಸಾಧ್ಯವಿರಲಿಲ್ಲ. ಚುನಾವಣಾ ಫಲಿತಾಂಶ ಬೇರೆ ರೀತಿ ಆದರೆ, ಅವರ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದಾಗುತ್ತೆ. ಅದೆಲ್ಲಾ ತಿಳಿದುಕೊಂಡು ಅವರೇ ಮರಳಿ ಬಂದಿರಬಹುದುʼʼ ಎಂದು ಅವರು ಹೇಳಿದ್ದಾರೆ.

ಮೊಬೈಲ್ ಕಳೆದು ಹೋಗಿದೆ ಎಂದು ಪ್ರಜ್ವಲ್ ಹೇಳುತ್ತಿದ್ದಾರೆ, ಇದು ಸಾಕ್ಷ್ಯನಾಶವಾದಂತಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ, ʻʻಯಾವುದೋ ಮೂಲದಿಂದ ಬಂದರೆ ಆ ಮಾಹಿತಿಯನ್ನು ನಂಬಲು ಸಾಧ್ಯವಿಲ್ಲ. ಆ ವಿಚಾರ ನನಗೆ ಗೊತ್ತಿಲ್ಲʼʼ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಪರಮೇಶ್ವರ್ ನಿವಾಸಕ್ಕೆ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಭೇಟಿ ನೀಡಿ, ಪ್ರಜ್ವಲ್ ಬಂಧನದ ಬಗ್ಗೆ ಮಾಹಿತಿ ನೀಡಿದ್ದರು.

Read More
Next Story