ಮತ್ತೆ ಆರಂಭವಾಯಿತು ಮಾಟ ಮಂತ್ರ !  ಡಿಕೆ ಶಿವಕುಮಾರ್‌ , ಸಿದ್ದರಾಮಯ್ಯ ವಿರುದ್ಧ ಅಘೋರಿಗಳಿಂದ ಶತ್ರು ಭೈರವಿ ಯಾಗ!?
x

ಮತ್ತೆ ಆರಂಭವಾಯಿತು ಮಾಟ ಮಂತ್ರ ! ಡಿಕೆ ಶಿವಕುಮಾರ್‌ , ಸಿದ್ದರಾಮಯ್ಯ ವಿರುದ್ಧ ಅಘೋರಿಗಳಿಂದ ಶತ್ರು ಭೈರವಿ ಯಾಗ!?

ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು "ಶತ್ರು ಭೈರವಿ ಯಾಗ" ಪ್ರಯೋಗ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.


ಮಾಟ, ಮಂತ್ರ, ತಂತ್ರ, ಪೂಜೆ ಪುನಸ್ಕಾರ, ಶತ್ರುಗಳ ನಾಶಕ್ಕೆ ಯಾಗ-ಯಜ್ಞಾದಿಗಳನ್ನು ಕೈಗೊಳ್ಳುವ ಪ್ರಕರಣಗಳು ಕರ್ನಾಟಕ ರಾಜಕಾರಣದಲ್ಲಿ ಹೊಸದೇನಲ್ಲ. ಮಾಜಿ ಪ್ರಧಾನಿ ಎಚ್‌ ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌.. ಹೀಗೆ ಪಟ್ಟಿ ಬೆಳೆಯುತ್ತದೆ.

ಈಗ ಅಂತಹ ಮಾತು ಮತ್ತೆ ಚಾಲನೆಗೆ ಬಂದಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು “ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು "ಶತ್ರು ಭೈರವಿ ಯಾಗ" ಪ್ರಯೋಗ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಅವರ ಮಾತು ರಾಜಕೀಯ ತಂತ್ರಗಾರಿಕೆ ನಡುವೆ ʼಮಾಟ, ಮಂತ್ರ, ತಂತ್ರಗಾರಿಕೆʼ ವಿಷಯ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.

ಗುರುವಾರ ಮಾಧ್ಯಮದ ಜತೆ ಮಾತನಾಡಿದ ಅವರು, ತಮ್ಮ ಮತ್ತು ಮುಖ್ಯಮಂತ್ರಿಗಳ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಗುತ್ತಿರುವ ʼತಂತ್ರʼ ಪ್ರಯೋಗದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

“ಕೇರಳದಲ್ಲಿ ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ "ರಾಜಕಂಟಕ", "ಮಾರಣ ಮೋಹನ ಸ್ತಂಭನ" ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ," ಎಂದು ವಿವರಿಸಿದ್ದಾರೆ.

"ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದ್ದು, ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳ ಬಲಿ ಮೂಲಕ ಈ ಮಾಂತ್ರಿಕಯಾಗ ನಡೆಯುತ್ತಿದೆ. ಅವರ ಪ್ರಯತ್ನ ಅವರು ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರು ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ. ನಾನು ಪ್ರತಿನಿತ್ಯ ಮನೆಯಿಂದ ಹೊರಡುವ ಮುನ್ನ ದೇವರಿಗೆ ಒಂದು ನಿಮಿಷ ಕೈಮುಗಿದು ಪ್ರಾರ್ಥಿಸುತ್ತೇನೆ," ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಪ್ರಯೋಗ ಮಾಡಿಸುತ್ತಿರುವುದು ಬಿಜೆಪಿಯವರಾ ಅಥವಾ ಜೆಡಿಎಸ್ ನವರಾ ಎಂದು ಕೇಳಿದಾಗ, “ಯಾರು ಮಾಡಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದರು. "ನನ್ನ ಬಾಯಿಂದ ಹೇಳಿಸುವುದರ ಬದಲು ನೀವೇ ಈ ಬಗ್ಗೆ ತನಿಖಾ ವರದಿ ಮಾಡಿ ಎಂದರು.

ತನ್ನದೇ ಗುರಿ ಯಾಕೆ?

"ನಿಮ್ಮನ್ನೇ ಏಕೆ ಗುರಿ ಮಾಡುತ್ತಾರೆ, ನಿಮ್ಮ ರಕ್ಷಣೆಗಾಗಿ ನೀವೂ ವಾಪಾಸ್ ಅಂತಹ "ತಂತ್ರʼಗಾರಿಕೆ ಮಾಡುತ್ತಿರಾ ಎಂದು ಕೇಳಿದಾಗ, "ಯಾವಾಗಲೂ ರಾಜಕೀಯವಾಗಿ ಚಟುವಟಿಕೆಯಿಂದ ಇರುವವರು ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗುತ್ತಾರೆ. ಅವರು ಮಾಡೋದು ಮಾಡಲಿ, ನನ್ನ ಶಕ್ತಿ ನನ್ನ ರಕ್ಷಣೆಗೆ ಇದೆ. ನಾನು ಅಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲ. ದೇವರನ್ನು ಮಾತ್ರ ನಂಬಿದ್ದೇನೆ" ಎಂದರು.

ಕೇರಳದಲ್ಲಿ ಪೂಜೆ

ಕೇರಳದ ವಿವಿಧ ದೇವಸ್ಥಾನಗಳಲ್ಲಿ ಮತ್ತು ಜ್ಯೋತಿಷಿಗಳ ಬಳಿ ಕರ್ನಾಟಕದ ರಾಜಕಾರಣಿಗಳು ತಮ್ಮ ರಾಜಕೀಯ ಏಳಿಗೆಗೆ, ವಿರೋಧಿಗಳ ರಾಜಕೀಯ ಸೋಲಿಗೆ ಪ್ರಾರ್ಥಿಸಿ ಯಾಗ ಯಜ್ಞಾದಿಗಳನ್ನು ಮಾಡುವುದು ಹೊಸತೇನಲ್ಲ. ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಗಾಗ ಕೇರಳಕ್ಕೆ ಭೇಟಿಯಾಗಿ ಈ ಕಾರ್ಯಗಳನ್ನು ನೆರವೇರಿಸುತ್ತಲೇ ಇರುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.

ಹಿಂದೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ಮಾಟ ಮಂತ್ರಗಳ ಮಾತು ಹೆಚ್ಚು ಕೇಳಿಬಂದಿತ್ತು. ಸರ್ಕಾರ ಉಳಿಸಲು, ಉರುಳಿಸಲು ಈ ಎಲ್ಲಾ ತಂತ್ರಗಳಿಗೆ ರಾಜಕಾರಣಿಗಳು ಮೊರೆಯಿಡುತ್ತಿದ್ದರು. ೨೦೧೮ರಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎಂದು ಬಿಜೆಪಿಯವರು ತಂತ್ರ ಹೂಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾನಸಿಕ ಚೈತನ್ಯ ಹಾಗೂ ತಮ್ಮ ಬಗ್ಗೆ ಅಸಡ್ಡೆಯಿಂದ ಮಾತನಾಡುವ ಶತ್ರುಗಳ ಸಂಹಾರಕ್ಕಾಗಿ ಯಾಗದ ಮೊರೆ ಹೋಗಿದ್ದರು ಎನ್ನಲಾಗಿದೆ. ಅವರ ಸೋದರ ಹೆಚ್.ಡಿ ರೇವಣ್ಣ ತಮ್ಮ ಕುಮಾರಸ್ವಾಮಿ ಪರವಾಗಿ ಶೃಂಗೇರಿಯ ಸನ್ನಿದ್ದಾನದಲ್ಲಿ ಯಾಗ ಪ್ರಾರಂಭಿಸಿದ್ದರು ಮತ್ತು ಕುಮಾರಸ್ವಾಮಿ ಭಾಗಿಯಾಗಿದ್ದರು. ಅದೇ ವೇಳೆ ಸರ್ಕಾರ ರಚಿಸಲು "ಆಪರೇಷನ್‌ ಕಮಲʼಕ್ಕೆ ಸಜ್ಜಾಗಿದ್ದ ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇರಳದ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಎಚ್‌.ಡಿ. ರೇವಣ್ಣ "ತಾಯಿ ಶಾರದೆಯ ಆಶೀರ್ವಾದ ಇರೋವರೆಗೂ ಯಾರೇನು ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಮಾಟ ಮಂತ್ರ ಮಾಡಿಸಿದ್ರೆ ಅವರಿಗೆ ಉಲ್ಟಾ ಆಗುತ್ತೆ ಬಿಡಿ," ಎಂದಿದ್ದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಹಿಂದೆ ಚಂಡಿಕಾ ಯಾಗದಂತಹ ಯಾಗ ಯಜ್ಞಾದಿಗಳ ಮೊರೆ ಹೋಗುತ್ತಿದ್ದರು. ಈಗ ತಮ್ಮ ವಿರುದ್ಧ ಅಂತಹ ಪ್ರಯೋಗ ಆಗುತ್ತಿದೆ ಎನ್ನುತ್ತಿರುವ ಡಿ.ಕೆ. ಶಿವಕುಮಾರ್‌ ಅವರೂ ಅಂತಹ "ತಂತ್ರʼಗಳಿಗೆ ಮೊರೆಹೋಗುತ್ತಿದ್ದರು.

ಕರ್ನಾಟಕದಲ್ಲಿ ಕೆಲವು ರಾಜಕಾರಣಿಗಳು ಮಾಟ, ಮಂತ್ರ ಎಂದು ಚಾಮರಾಜನಗರದ ಕೆಲವು ಮಂತ್ರವಾದಿಗಳ ಮೊರೆಹೋಗುವುದು ಹಾಗೂ ದಕ್ಷಿಣ ಕನ್ನಡದ ಕೆಲವು ಮಂತ್ರವಾದಿಗಳ, ಪುರೋಹಿತರ ಮೊರೆ ಹೋಗುವುದು ಸಾಮಾನ್ಯವಾಗಿದೆ. ರಾಜಕೀಯ ಸಂಕಟಗಳು ಬಂದಾಗ, ಅಧಿಕಾರಕ್ಕಾಗಿ ಇನ್ನೊಬ್ಬನ ಅವನತಿಗಾಗಿ ಮೊರೆಯಿಡುವ ಈ ಕೆಟ್ಟ ಸಂಪ್ರದಾಯ ಈಗಿನ ಡಿಜಿಟಲ್‌ ಯುಗದಲ್ಲೂ ಇರುವುದು ಅತ್ಯಂತ ಕೆಟ್ಟ ನಿದರ್ಶನಗಳು ಎಂದು ಕರ್ನಾಟಕದ ರಾಜಕಾರಣವನ್ನು ಹತ್ತಿರದಿಂದ ಬಲ್ಲ ರಾಜಕೀಯ ವಿಶ್ಲೇಷಕ ಸಿ. ರುದ್ರಪ್ಪ ತಿಳಿಸಿದ್ದಾರೆ.

"ಇಂತಹವರಿಗೆ ಅಧಿಕಾರ ಎನ್ನುವುದು ಪ್ರಜಾತಂತ್ರದಿಂದ ಬಂದಿದೆ ಎಂದನಿಸುವುದಿಲ್ಲ. ಅಧಿಕಾರವನ್ನು ತಮ್ಮ ಬಳಿ ಇರಿಸಿಕೊಳ್ಳಲು ನಾನಾ ರೀತಿಯ ಅತೀಂದ್ರಿಯ ಶಕ್ತಿಗಳಿಗೆ ಮೊರೆ ಹೋಗುತ್ತಾರೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read More
Next Story