
ಸಾಗರ್ ಖಂಡ್ರೆ
ಸಂಸದ ಸಾಗರ್ ಖಂಡ್ರೆ ಮನೆಗೆ ಕರೆಂಟ್ ಕಟ್ : ಅಪಾರ್ಟ್‌ಮೆಂಟ್ ವ್ಯವಸ್ಥಾಪಕನ ವಿರುದ್ಧ ಕೇಸ್!
ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಮನೆಯ ಮಾಲೀಕ ಸಾಗರ್ ಖಂಡ್ರೆ ಅಥವಾ ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಹಾಗೂ ಸಂಸದ ಸಾಗರ್ ಖಂಡ್ರೆ ಅವರ ನಿವಾಸದಲ್ಲಿ ನಡೆದ ವಿದ್ಯುತ್ ಸಂಪರ್ಕ ಕಡಿತ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಾಗರ್ ಖಂಡ್ರೆ ಅವರು ಬೆಂಗಳೂರು ನಗರದ ಶ್ರೀ ಕೃಷ್ಣ ಅಪಾರ್ಟ್‌ಮೆಂಟ್‌ನ ನಂ-103, ಬ್ಲಾಕ್-01ದಲ್ಲಿ ವಾಸವಿದ್ದಾರೆ. ಈ ಮನೆಯಲ್ಲಿ ಇತ್ತೀಚೆಗೆ ನವೀಕರಣ ಕಾರ್ಯ ನಡೆಯುತ್ತಿದ್ದು, ಅಪಾರ್ಟ್‌ಮೆಂಟ್ ಸೊಸೈಟಿಯಿಂದ ಪೂರ್ವಾನುಮತಿ ಪಡೆದು ಕೆಲಸ ನಡೆಯುತ್ತಿತ್ತು. ನವೀಕರಣದ ಭಾಗವಾಗಿ ಮೆಟ್ಟಿಲುಗಳಿಗೆ ಬೆಳಕಿನ ವ್ಯವಸ್ಥೆ ಮಾಡುವ ಸಲುವಾಗಿ ವಿದ್ಯುತ್ ಸಂಪರ್ಕ ವಿಸ್ತರಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕ ಚಂದ್ರಕುಮಾರ ಅವರು ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಅವಾಚ್ಯ ಶಬ್ದಗಳಲ್ಲಿ ವಾಗ್ವಾದ ನಡೆಸಿದ್ದಾರೆ. ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಮನೆಯ ಮಾಲೀಕ ಸಾಗರ್ ಖಂಡ್ರೆ ಅಥವಾ ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮನೆಯ ಮಾಲೀಕ ಸಾಗರ ಖಂಡ್ರೆ ಅಥವಾ ಕುಟುಂಬ ಸದಸ್ಯರಿಗಾಗಲಿ ಮಾಹಿತಿ ನೀಡದೆ ಏಕಾಏಕಿ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಈ ವಿಚಾರವಾಗಿ ಮ್ಯಾನೇಜರ್‌ಗೆ ಅದೇ ದಿನ ಸಂಜೆ ಕರೆ ಮಾಡಿ ಸಚಿವರ ಆಪ್ತ ಸಹಾಯಕ ವಿಚಾರಿಸಿದಾಗ, ಕೃಷ್ಣ ಅಪಾರ್ಟಮೆಂಟ್ ಕಾರ್ಯದರ್ಶಿ ಆದೇಶದಂತೆ ವಿದ್ಯುತ್ ಕಡಿತಗೊಳಿಸಿದ್ದೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಾಕಾರಣ ತಗಾದೆ ತೆಗೆದು ತೊಂದರೆ ನೀಡುತ್ತಿರುವ ಕೃಷ್ಣ ಅಪಾರ್ಟಮೆಂಟ್ ವ್ಯವಸ್ಥಾಪಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೇಳಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.