Loksabha Election 2024 | ವಯೋವೃದ್ಧರು, ವಿಶೇಷ ಚೇತನರಿಗೆ ಅಂಚೆ ಮತದಾನ
x
ಬಿಬಿಎಂಪಿ

Loksabha Election 2024 | ವಯೋವೃದ್ಧರು, ವಿಶೇಷ ಚೇತನರಿಗೆ ಅಂಚೆ ಮತದಾನ

ಮನೆ- ಮನೆಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು


ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟವರು (AVSC) ಹಾಗೂ ವಿಶೇಷ ಚೇತನರಿಗೆ (ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವವರಿಗೆ) (pwd) ಅಂಚೆ ಮತದಾನ ಅವಕಾಶ ಸಿಗಲಿದೆ.

ಇದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೂತ್ ಮಟ್ಟದ ಅಧಿಕಾರಿಗಳು ಮಾರ್ಚ್ 21 ರಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರ ಪಟ್ಟಿಯನುಸಾರ ಮನೆ-ಮನೆಗೆ ಭೇಟಿ ನೀಡಲಿದ್ದು, 12ಡಿ ನಮೂನೆಯ ಅರ್ಜಿಯ ಮೂಲಕ ಈ ನಿರ್ದಿಷ್ಟ ಗುಂಪಿನ ಜನರ ಮಾಹಿತಿ ಭರ್ತಿ ಮಾಡಿಕೊಳ್ಳಲಿದ್ದಾರೆ.

85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಅವಕಾಶವೂ ಇದೆ. ಅಂಚೆ ಮತದಾನ ಮಾಡಲು 12ಡಿ ನಮೂನೆ ಮೂಲಕ ದೃಢೀಕರಣ ನೀಡಿದ ನಂತರ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಅವಕಾಶ ಇರುವುದಿಲ್ಲ. ಚುನಾವಣಾ ಅಧಿಸೂಚನೆಯ ನಂತರ 5 ದಿನಗಳ ಒಳಗಾಗಿ ಭರ್ತಿಮಾಡಿದ ದೃಢೀಕೃತ 12ಡಿ ನಮೂನೆಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗೆ ಸಲ್ಲಿಸಬೇಕು.

ವೆಬ್‌ಸೈಟ್‌ ಮೂಲಕ ನೋಂದಣಿ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ 12ಡಿ ನಮೂನೆ ಪಡೆದು ದೃಢೀಕರೀಸಲು ಸಾಧ್ಯವಾಗದಿದ್ದರೆ, ಭಾರತ ಚುನಾವಣಾ ಆಯೋಗದ ವೆಬ್ಸೈಟ್ https://www.eci.gov.in/ಗೆ ಭೇಟಿ ನೀಡಿದರೆ 12ಡಿ ನಮೂನೆಗಳು ಲಭ್ಯವಿದೆ. ಅಲ್ಲಿ ಅರ್ಜಿ ಭರ್ತಿ ಮಾಡಿ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ 12ಡಿ ನಮೂನೆಗಳನ್ನು ನೇರವಾಗಿ ಸಲ್ಲಿಸುವ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷರ್ ಗಿರಿ ನಾಥ್ ತಿಳಿಸಿದ್ದಾರೆ.

Read More
Next Story