ಕನ್ನಡ ಚಿತ್ರರಂಗ | ಗಡುವು ಮುಗಿದರೂ ರಚನೆಯಾಗದ ಪಾಷ್ ಕಮಿಟಿ: ಮಹಿಳಾ ಆಯೋಗ ಆಕ್ರೋಶ
x
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

ಕನ್ನಡ ಚಿತ್ರರಂಗ | ಗಡುವು ಮುಗಿದರೂ ರಚನೆಯಾಗದ ಪಾಷ್ ಕಮಿಟಿ: ಮಹಿಳಾ ಆಯೋಗ ಆಕ್ರೋಶ

ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ, ರಾಜ್ಯ ಮಹಿಳಾ ಆಯೋಗ ಜಿಲ್ಲಾಧಿಕಾರಿಗಳಿಗೆ ನೊಟೀಸ್‌ ನೀಡಿದೆ. ಎರಡು ಗಡುವು ನೀಡಿದ್ದರೂ ಇದುವರೆಗೆ ಪಾಷ್ ಕಮಿಟಿ ರಚನೆಯಾಗದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.


Click the Play button to hear this message in audio format

ಚಿತ್ರರಂಗದ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಪಾಶ್‌ ಕಮಿಟಿ ರಚನೆಗೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗದೇ ಇರುವ ಹಿನ್ನೆಲೆಯಲ್ಲಿ, ರಾಜ್ಯ ಮಹಿಳಾ ಆಯೋಗ ಜಿಲ್ಲಾಧಿಕಾರಿಗಳಿಗೆ ನೊಟೀಸ್‌ ನೀಡಿ ಕಠಿಣ ಕ್ರಮಕ್ಕೆ ಸೂಚಿಸಿದೆ.

ಎರಡು ಬಾರಿ ಗಡುವು ನೀಡಿದ್ದರೂ ಇದುವರೆಗೆ ಪಾಷ್ ಕಮಿಟಿ ರಚನೆಯಾಗದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಜಿಲ್ಲಾಧಿಕಾರಿಗೆ ಸೂಚನೆ ನೀಡಿಲಾಗಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ಕೊಟ್ಟು ಸಭೆ ನಡೆಸಿದ್ದೇನೆ. ಸಭೆಯಲ್ಲಿ ಪಾಷ್ ಕಮಿಟಿ ರಚನೆ ಮಾಡುವಂತೆ ತಿಳಿಸಲಾಗಿತ್ತು. ಅದಕ್ಕೆ ಅವರು ಸಮಯ ಕೇಳಿದ್ದು, ಎರಡು ಬಾರಿ ಅವರಿಗೆ ನೀಡಿದ ಗಡುವನ್ನು ಮೀರಿದ್ದಾರೆ. ಇದೀಗ ವಿದೇಶದಲ್ಲಿ ಕಾರ್ಯಕ್ರಮ ಇದೆ. ನಾವೆಲ್ಲ ಅಲ್ಲಿ ಬ್ಯುಸಿ ಇದ್ದು, ಕಾಲವಾಕಾಶ ಬೇಕು ಎಂದು ಕೇಳುತ್ತಿದ್ದಾರೆ. ಈಗಾಗಲೇ ಎರಡು ತಿಂಗಳಿಗೂ ಅಧಿಕ ಸಮಯ ನೀಡಿದ್ದೇವೆ. ಒಂದು ಹೆಣ್ಣಿನ ರಕ್ಷಣೆಗಾಗಿ ಮಾಡುತ್ತಿರೋ ಕಮಿಟಿ ಇದು. ಆದರೆ ಈ ಕಮಿಟಿ ಮಾಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ. ಯಾಕೆ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದರು.

ಕೇರಳದ ಹೇಮಾ ಕಮಿಟಿಯ ಹಾಗೇ ನಮಗೂ ಒಂದು ಕಮಿಟಿ ಬೇಕು ಎಂದು ಕಲಾವಿದರು ಮನವಿಯ ಮಾಡಿದ್ದರು. ಅಲ್ಲದೆ ಪ್ರತಿ ಸಂಸ್ಥೆಗಳಲ್ಲಿ ಪಾಷ್ ಕಮಿಟಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಕಾನೂನು ಮುಂದೆ ಎಲ್ಲರೂ ಒಂದೇ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಆದರೆ ನಾವು ಪತ್ರ ಬರೆದರೂ ಫಿಲಂ ಚೇಂಬರ್ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಆಯೋಗದಿಂದ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಪಾಷ್ 2013 ಕಾಯ್ದೆ ಪ್ರಕಾರ ಕ್ರಮ ಜರುಗಿಸುವಂತೆ ಪತ್ರ ಬರೆದಿದ್ದೇವೆ. ಕರ್ನಾಟಕ ಚಲನಚಿತ್ರ ಮಂಡಳಿ ಕಮಿಟಿ ರಚಿಸದೆ ಇದ್ದರೆ ಫಿಲಂ ಚೇಂಬರ್ ಗೆ 50 ಸಾವಿರ ದಂಡ ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿಯ ನೋಂದಣಿ ರದ್ದಾಗುತ್ತದೆ ಎಂದು ಹೇಳಿದರು.

Read More
Next Story