Caste Census | ಮತ್ತೊಮ್ಮೆ ವೀರಶೈವ-ಲಿಂಗಾಯತರ ಜನಗಣತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್​  ಆಗ್ರಹ
x

Caste Census | ಮತ್ತೊಮ್ಮೆ ವೀರಶೈವ-ಲಿಂಗಾಯತರ ಜನಗಣತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್​ ಆಗ್ರಹ

ವೀರಶೈವ ಮತ್ತು ಲಿಂಗಾಯತರ ವಿಭಜನೆಯಾಗಿರುವುದರಿಂದ ನಮ್ಮ ಅಂಕಿ-ಅಂಶ ಕಡಿಮೆ ಕಾಣಿಸುತ್ತಿದೆ. ಹಾಗಾಗಿ ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟುಗೂಡಿಸಿ ಜಾತಿ ಗಣತಿ ಮಾಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಆಗ್ರಹಿಸಿದರು.


ವೀರಶೈವ ಹಾಗೂ ಲಿಂಗಾಯತರನ್ನು ಒಟ್ಟಾಗಿ ಸೇರಿ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕು ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಈಗ ವೀರಶೈವ ಮತ್ತು ಲಿಂಗಾಯತರನ್ನು ಪ್ರತ್ಯೇಕವಾಗಿ ಗಣತಿ ಮಾಡಲಾಗಿದೆ. ಕಳೆದ 20 ವರ್ಷಗಳಲ್ಲಿ ಎಲ್ಲ ಜಾತಿಗಳ ಜನಸಂಖ್ಯೆ ಏರಿಕೆಯಾಗಿದೆ. ಅಲ್ಲದೇ ವೀರಶೈವ ಮತ್ತು ಲಿಂಗಾಯತರ ವಿಭಜನೆಯಾಗಿರುವುದರಿಂದ ನಮ್ಮ ಅಂಕಿ-ಅಂಶ ಕಡಿಮೆ ಕಾಣಿಸುತ್ತಿದೆ. ಹಾಗಾಗಿ ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟುಗೂಡಿಸಿ ಜಾತಿ ಗಣತಿ ಮಾಡಬೇಕು” ಎಂದು ಮನವಿ ಮಾಡಿದರು.

ಅತ್ಯುನ್ನತ ಪದಕ ನೀಡಲು ಶಿಫಾರಸು

“ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪಿಎಸ್ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಿಫಾರಸು ಮಾಡಲಾಗುವುದು” ಎಂದು ಲಕ್ಷ್ಮಿ ಹೆಬ್ಬಾಳಕರ್​ ಹೇಳಿದರು.

“ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು. ಹುಬ್ಬಳ್ಳಿ ಪ್ರಕರಣದಲ್ಲಿ ಅನ್ನಪೂರ್ಣರ ಕಾರ್ಯವನ್ನು ಅಭಿನಂದಿಸುತ್ತೇನೆ. ಅವರ ಈ ನಡೆ ಬೇರೆ ಅಧಿಕಾರಿಗಳಿಗೆ ದಾರಿದೀಪವಾಗಬೇಕು” ಎಂದು ತಿಳಿಸಿದರು.

ಬಿಜೆಪಿಯವರು ಮಣಿಪುರದ ಕಡೆ ನೋಡಲಿ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಹೆಬ್ಬಾಳಕರ್​ , “ಹುಬ್ಬಳ್ಳಿ ಘಟನೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ನಾನು ಬೇರೆ ರಾಜ್ಯದ ಹೋಲಿಕೆ ಮಾಡಲು ಹೋಗುವುದಿಲ್ಲ. ಆದರೆ, ನಮ್ಮಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿಲ್ಲ. ನಮ್ಮ ಬಗ್ಗೆ ಆರೋಪಿಸುತ್ತಿರುವ ಬಿಜೆಪಿಯವರು ಮಣಿಪುರದ ಕಡೆ ಒಮ್ಮೆ ನೋಡಲಿ. ಅಲ್ಲಿಗೆ ಪ್ರಧಾನಿ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಇಡೀ ದೇಶದಲ್ಲಿ ಏನೇನು ಆಗುತ್ತಿದೆ ಎಂಬುದು ಅವರಿಗೆ ಗೊತ್ತಿದೆಯಾ,'' ಎಂದು ಪ್ರಶ್ನಿಸಿದರು.

ನಿಪ್ಪಾಣಿಗೆ ಅಂಬೇಡ್ಕರ್ ಭೇಟಿ ನೀಡಿದ ಘಳಿಗೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯವರ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ಶ್ರದ್ಧಾ, ಭಕ್ತಿಯಿಂದ ನಂಬಿದೆ. ನಾವೆಲ್ಲರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ನಿಪ್ಪಾಣಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸರ್ಕಾರದಿಂದ ನಾವೂ ಕಾರ್ಯಕ್ರಮ ಮಾಡುತ್ತೇವೆ” ಎಂದು ಹೇಳಿದರು.

“ಬಿಜೆಪಿಯವರು ನಮ್ಮ ವಿರುದ್ಧ ಎರಡಲ್ಲ; ನಾಲ್ಕನೇ ಸುತ್ತಿನ ಜನಾಕ್ರೋಶ ಯಾತ್ರೆ ಮಾಡಿದರೂ, ಜನರಿಗೆ ಅವರ ಮೇಲಿನ ಆಕ್ರೋಶ ಕಡಿಮೆಯಾಗುವುದಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Read More
Next Story